ADVERTISEMENT

ಹಣ ಪಡೆದು ಕಾಮಗಾರಿ ವಹಿಸಿರುವ ಆರೋಪ: ಕೃಷ್ಣ ಬೈರೇಗೌಡ ಮಾತಿಗೆ ಬಿ.ಆರ್. ಪಾಟೀಲ ಗರಂ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 16:44 IST
Last Updated 28 ನವೆಂಬರ್ 2023, 16:44 IST
<div class="paragraphs"><p>ಬಿ.ಆರ್.ಪಾಟೀಲ,&nbsp;ಕೃಷ್ಣ ಬೈರೇಗೌಡ</p></div>

ಬಿ.ಆರ್.ಪಾಟೀಲ, ಕೃಷ್ಣ ಬೈರೇಗೌಡ

   

ಕಲಬುರಗಿ: ‘ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಕಡೆಯಿಂದ ನಾನು ಹಣ ಪಡೆದು ಕಾಮಗಾರಿ ಮಾಡಿಸಿದ್ದೇನೆ ಎಂಬಂತೆ ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾಡಿದ್ದ ಆರೋಪದ ಬಗ್ಗೆ ತನಿಖೆ ನಡೆಸಿ ಆರೋಪ ಮುಕ್ತನನ್ನಾಗಿ ಮಾಡಬೇಕು. ನನ್ನ ಮೇಲಿನ ಆರೋಪ ಸಾಬೀತಾದರೆ ಇಂದೇ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

‘2013ರಲ್ಲಿ ನಾನು ಶಾಸಕನಾದಾಗ ಮುಖ್ಯಮಂತ್ರಿಯಾಗಿದ್ದ ನೀವು ಸಾಕಷ್ಟು ಅನುದಾನ ನೀಡಿದ್ದೀರಿ. ಕೆಲ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡಿದ್ದು ನಿಜ. ಚುನಾವಣೆ ಹತ್ತಿರ ಬರುತ್ತಿದ್ದ ಸಂದರ್ಭದಲ್ಲಿ ಬೇರೆ ಸಂಸ್ಥೆಗಳಿಗೆ ಕೊಟ್ಟರೆ ಟೆಂಡರ್ ಪ್ರಕ್ರಿಯೆಗಳು ಪ್ರಾರಂಭವಾಗಿ ಕಾಮಗಾರಿಗಳು ತಡವಾಗುತ್ತವೆ ಎಂಬ ಉದ್ದೇಶದಿಂದ ಅಂದಿನ ಭೂಸೇನೆಗೆ (ಪ್ರಸ್ತುತ ಕೆಆರ್‌ಐಡಿಎಲ್) ವಹಿಸಿದ್ದೆ. ಆದರೆ, ಇಲ್ಲಿಯವರೆಗೆ ಕಾಮಗಾರಿಗಳು ಮುಗಿದಿಲ್ಲ. ಮಾಡಿದರೂ ಅರ್ಧಂಬರ್ಧ ಮುಗಿದಿವೆ. ಕೆಲಸ ಮಾಡಿದರೂ ಕಾಮಗಾರಿಗಳು ಕಳಪೆಯಾಗಿವೆ. 2018ರಲ್ಲಿ ಬಂದ ಬಿಜೆಪಿ ಸರ್ಕಾರವೂ ಈ ಬಗ್ಗೆ ಗಮನ ಹರಿಸಲಿಲ್ಲ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‌‘ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನ ಸೆಳೆಯಲು ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಪ್ರಸ್ತಾಪಿಸಿದ್ದೆ. ಅಂದು ಪ್ರಿಯಾಂಕ್ ಅವರ ಅನುಪಸ್ಥಿತಿಯಲ್ಲಿ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ‘ಇಷ್ಟೆಲ್ಲಾ ಗೊತ್ತಿದ್ದರೂ ಕೆಆರ್‌ಐಡಿಎಲ್‌ಗೆ ಏಕೆ ಕಾಮಗಾರಿ ವಹಿಸಿದ್ದೀರಿ’ ಎಂದು ಪ್ರಶ್ನಿಸುವ ಮೂಲಕ ನಾನು ಹಣ ಪಡೆದು ಕಾಮಗಾರಿ ವಹಿಸಿದ್ದೇನೆ ಎಂಬ ಅರ್ಥದಲ್ಲಿ ಮಾತನಾಡಿದ್ದು ನನಗೆ ನೋವು ತಂದಿದೆ. ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಈ ಆರೋಪ ಹೊತ್ತುಕೊಂಡು ಬಂದರೆ, ನನ್ನ ಮೇಲಿನ ಆರೋಪಗಳನ್ನು ಒಪ್ಪಿಕೊಂಡಂತಾಗುತ್ತದೆ. ನೈತಿಕವಾಗಿ ಇದು ಸರಿ ಅಲ್ಲ. ಈ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥ ಎಂದು ಕಂಡು ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಅವರ ಮಾತಿನಿಂದ ನನಗೆ ನೋವಾಗಿದೆ. ಹೀಗಾಗಿ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ನಿಜ.
–ಬಿ.ಆರ್. ಪಾಟೀಲ, ಶಾಸಕ
ಬಿ.ಆರ್. ಪಾಟೀಲ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ. ಆ ಪತ್ರ ಇನ್ನೂ ನನಗೆ ತಲುಪಿಲ್ಲ. ಅವನು ಏನು ಬರೆದಿದ್ದಾನೆಂದು ನೋಡುತ್ತೇನೆ
–ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಿ.ಆರ್‌. ಪಾಟೀಲ ಅವರು ಸಿ.ಎಂಗೆ ಪತ್ರ ಬರೆದಿದ್ದಾರೆ. ಅವರು ಈ ಬಗ್ಗೆ ನೋಡಿಕೊಳ್ಳುತ್ತಾರೆ. ಅವರು ನನ್ನ ಮಾತ‌ನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
–ಕೃಷ್ಣ ಬೈರೇಗೌಡ, ಕಂದಾಯ ಸಚಿವ
‘ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ’
ಪಾಟೀಲ ಅವರು ಸಿ.ಎಂಗೆ ಪತ್ರ ಬರೆದಿದ್ದಾರೆ. ಅವರು ಈ ವಿಷಯದ ಬಗ್ಗೆ ನೋಡಿಕೊ ಳ್ಳುತ್ತಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ‘ವಿಧಾನಸಭೆಯಲ್ಲಿ ನಾನು ಹೇಳಿರುವುದು ದಾಖಲೆಯಲ್ಲಿದೆ. ನಾನು ಅಂತಹ ಹೇಳಿಕೆ ಅಥವಾ ಆ ವಿಷಯದಲ್ಲಿ ಮಧ್ಯಪ್ರವೇಶ ಮಾಡಿಲ್ಲ. ಅವರು ನನ್ನ ಮಾತ‌ನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.