ಕಲಬುರಗಿ: ‘ಫೋನ್‌ನಲ್ಲಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡುವುದು ನೋಡಿದರೆ ಹಿಂಬಾಗಿಲಿನ ಮೂಲಕ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ರಾಜ್ಯದಲ್ಲಿ ಇರುವುದು ಅಪ್ಪ– ಮಕ್ಕಳ ಸರ್ಕಾರ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಯತೀಂದ್ರ ಅವರು ಸೂಪರ್ ಸಿ.ಎಂ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ಕಾರದಲ್ಲಿ ಯತೀಂದ್ರ ಅವರು ಆದೇಶ ಕೊಡುವ ಮಟ್ಟಕ್ಕೆ ತಲುಪಿದ್ದಾರೆ ಎಂದರೆ ಏನರ್ಥ? ವಿಡಿಯೊ ಸಂಭಾಷಣೆಯ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ಕೊಡಬೇಕು’ ಎಂದರು.
‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಾವು ಎರಡನೇ ಅಂಬೇಡ್ಕರ್ ಎಂದು ತಿಳಿದಿದ್ದಾರೆ. ಕಲಬುರಗಿಯಲ್ಲಿ ಒಂದು, ಬೆಂಗಳೂರಿನಲ್ಲಿ ಮತ್ತೊಂದು ಮಾತನಾಡುವ ಪ್ರಿಯಾಂಕ್ ಅವರು ಬೆಳೆದಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಆಶ್ರಯದಲ್ಲಿ. ಪ್ರಿಯಾಂಕ್ ಪಡೆದಿದ್ದೆಲ್ಲವೂ ತಮ್ಮ ತಂದೆಯಿಂದ. ಆದರೆ, ಇವತ್ತು ಅವರೇ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.