ಕಲಬುರಗಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಪ್ರತಿಭಟನನಿರತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
‘ಸುಮಾರು 80 ವರ್ಷಗಳಿಂದ ಭೂಹೀನ ಬಡವರು ಜೀವನ ನಿರ್ವಹಣೆಗಾಗಿ ಕಂದಾಯ, ಅರಣ್ಯ ಇಲಾಖೆಗೆ ಸೇರಿದ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಆಡಳಿತ ನಡೆಸಿದ ಸರ್ಕಾರಗಳು ಬಗರ್ ಹುಕುಂ ಸಾಗುವಳಿದಾರರ ವಸ್ತುಸ್ಥಿತಿ ಅರಿಯಬೇಕು’ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಹೇಳಿದರು.
‘ಈ ರೈತರಿಗೆ ಇನ್ನೂ ಶಾಸನಬದ್ಧವಾದ ಭೂಮಿಯ ಹಕ್ಕು ದೊರೆತಿಲ್ಲ. ಇತರರಂತೆ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗುತ್ತಿಲ್ಲ. ಕೃಷಿ ಸಾಲ ದೊರೆಯುತ್ತಿಲ್ಲ. ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಕಾರಣ ಖಾಸಗಿ ಮೂಲಗಳಿಂದ ಸಾಲ ಪಡೆದುಕೊಂಡು ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ತಿಳಿಸಿದರು.
‘ಈಗ ಸಾಗುವಳಿದಾರರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆದಿವೆ. ಇದು ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.
‘ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ಕೊಡುವ ಕುರಿತು ಚರ್ಚಿಸಬೇಕು. ಸಭೆಗೆ ರೈತರು ಹಾಗೂ ರೈತ ಸಂಘಟನೆಗಳು, ರೈತ ಪ್ರತಿನಿಧಿಗಳನ್ನು ಆಹ್ವಾನಿಸಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲೆಯಲ್ಲಿ ಬಾಕಿ ಇರುವ ಪ್ರಕರಣ ಇತ್ಯರ್ಥ ಮಾಡಲು ಎಲ್ಲ ತಾಲ್ಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿ ರಚನೆ ಮಾಡಬೇಕು. ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಹಕ್ಕುಪತ್ರ ನೀಡಬೇಕು. ಈಗಾಗಲೇ ವಿತರಣೆ ಮಾಡಿದ ರೈತರ ಭೂಮಿ ಪೋಡಿ ಮಾಡಬೇಕು. ಭೂಮಿ ಇರುವ ಸ್ಥಳದಲ್ಲಿ ನಕಾಶೆ ಮತ್ತು ಸರ್ವೆ ನಂಬರ್ ಬೇರೆ ಕಡೆ ಬರುತ್ತಿದ್ದು, ಇದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ಅರಣ್ಯದ ಅಂಚಿನಲ್ಲಿ ಸಾಗುವಳಿ ಮಾಡುತ್ತಿರುವ ಭೂಮಿ ಸಿ ಮತ್ತು ಡಿ ಗುಂಪಿಗೆ ಸೇರಿದೆ. ಅದನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿ ರೈತರಿಗೆ ಹಂಚಿಕೆ ಮಾಡಬೇಕು. ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರ ಮೇಲೆ ಅರಣ್ಯಾಧಿಕಾರಿಗಳಿಂದ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು. ರೈತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
‘ಗೋಮಾಳದಲ್ಲಿ ಉಳಿಮೆ ಮಾಡುತ್ತಿರುವವರಿಗೆ ಭೂಮಿ ಹಂಚಿಕೆ ಮಾಡಬೇಕು. ಸಾಲ ಸೇರಿ ಇತರ ಸೌಲಭ್ಯ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿ.ನಾಗಮ್ಮಾಳ್, ಜಿಲ್ಲಾಧ್ಯಕ್ಷ ಗಣಪತರಾವ್ ಕೆ.ಮಾನೆ, ಕಾರ್ಯದರ್ಶಿ ಮಹೇಶ ಎಸ್.ಬಿ., ಜಿಲ್ಲಾ ಸಮಿತಿ ಮುಖಂಡರಾದ ವಿಶ್ವನಾಥ ಸಿಂಗೆ, ಭಾಗಣ್ಣ ಬುಕ್ಕಾ, ನೀಲಕಂಠ ಎಂ.ಹುಲಿ, ಭೀಮಾಶಂಕರ ಆಂದೋಲ, ಅಮೃತ್ ಚವಾಣ್, ಶಿವರಾಜ ರಾಠೋಡ, ಶಿವಕುಮಾರ ರಾಠೋಡ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಜಾನೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.