ADVERTISEMENT

ಕಲಬುರಗಿ | ಒತ್ತುವರಿಗೆ ನಲುಗಿದ ಬಹಮನಿ ಕೋಟೆ!

ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಎಎಸ್‌ಐ, ಜಿಲ್ಲಾಡಳಿತ

ಮನೋಜ ಕುಮಾರ್ ಗುದ್ದಿ
Published 20 ಜುಲೈ 2024, 6:03 IST
Last Updated 20 ಜುಲೈ 2024, 6:03 IST
ಕಲಬುರಗಿಯ ಶಹಾಬಜಾರ್ ನಾಕಾ ಬಳಿ ಐತಿಹಾಸಿಕ ಬಹಮನಿ ಕೋಟೆ ಅತಿಕ್ರಮಣ ಮಾಡಬಾರದೆಂಬ ಎಎಸ್‌ಐ ಫಲಕದ ಹಿಂದೆಯೇ ಅಕ್ರಮ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿರುವುದು
–ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
ಕಲಬುರಗಿಯ ಶಹಾಬಜಾರ್ ನಾಕಾ ಬಳಿ ಐತಿಹಾಸಿಕ ಬಹಮನಿ ಕೋಟೆ ಅತಿಕ್ರಮಣ ಮಾಡಬಾರದೆಂಬ ಎಎಸ್‌ಐ ಫಲಕದ ಹಿಂದೆಯೇ ಅಕ್ರಮ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿರುವುದು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌   

ಕಲಬುರಗಿ: 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ವೈಭವದಿಂದ ಮೆರೆದಿದ್ದ ಐತಿಹಾಸಿಕ ಬಹಮನಿ ಕೋಟೆಯು ಅತಿಕ್ರಮಣಕೋರರ ದಾಳಿಗೆ ನಲುಗಿದೆ. ಕೋಟೆಗೆ ಸೇರಿದ ಜಾಗದಲ್ಲಿ ಶಾಶ್ವತ ಕಟ್ಟಡಗಳು, ಶೆಡ್‌ಗಳು ನಿರ್ಮಾಣಗೊಳ್ಳುತ್ತಿದ್ದರೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಜಾಣ ಕುರುಡು ಪ್ರದರ್ಶಿಸುತ್ತಿವೆ.

ನಾಲ್ಕು ದಶಕಗಳಿಂದ ಕೋಟೆಯ ಒಳಭಾಗದಲ್ಲಿ 284 ಕುಟುಂಬಗಳು ನೆಲೆ ಕಂಡುಕೊಂಡಿದ್ದು, ಅವರನ್ನು ಅಲ್ಲಿಂದ ಸ್ಥಳಾಂತರಿಸುವ ಕೆಲಸ ಇನ್ನೂ ಆಗಿಲ್ಲ. ಕೋಟೆಯ ಹೊರಭಾಗದಲ್ಲೂ ಎಎಸ್‌ಐಗೆ ಸೇರಿದ ಜಾಗದಲ್ಲಿಯೇ ಹಲವು ವಾಣಿಜ್ಯ ಮಳಿಗೆಗಳು, ಸಾಮಿಲ್, ವಾಹನಗಳ ದುರಸ್ತಿ ಅಂಗಡಿಗಳು, ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲಾಗಿದೆ. ಕೋಟೆಗೆ ಸೇರಿದ ಜಾಗ ಒತ್ತುವಾರಿಯಾಗಿದ್ದನ್ನು ಗುರುತಿಸಬೇಕಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. ಜಿಲ್ಲಾಡಳಿತದ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಅತಿಕ್ರಮಣ ತೆರವು ಮಾಡುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಪರಂಪರೆಯ ಬಗ್ಗೆ ಆಸಕ್ತಿಯುಳ್ಳವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಕೋಟೆಯ ರಕ್ಷಣೆ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ನಾವು, ಒತ್ತುವರಿ ಕುರಿತು ಅಧಿಕಾರಿಗಳ ತಮನಕ್ಕೆ ತಂದಾಗ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ. ಇದು ಸರ್ಕಾರದ ಆಸ್ತಿ, ಬೇರೆಯವರು ದೂರು ಕೊಡುವವರೆಗೆ ಏಕೆ ಕಾಯಬೇಕು? ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಏನು ಅಡ್ಡಿ?’ ಎಂದು ಬಹಮನಿ ಕೋಟೆಯ ಬಗ್ಗೆಯೇ ಸಂಶೋಧನಾ ಪ್ರಬಂಧ ಮಂಡಿಸಿರುವ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ. ಶಂಭುಲಿಂಗ ವಾಣಿ ಪ್ರಶ್ನಿಸುತ್ತಾರೆ.

ADVERTISEMENT

ಒತ್ತುವರಿಯ ಇತಿಹಾಸ: ಕೋಟೆಗೆ ಸೇರಿದ ಜಾಗದಲ್ಲಿ ಯಾವುದೇ ಒತ್ತುವರಿ, ಹಾನಿ ಮಾಡಬಾರದು ಎಂದು ಎಎಸ್‌ಐನವರು ಇಲ್ಲಿ ಫಲಕ ಅಳವಡಿಸಿದ್ದಾರೆ. ವಿಪರ್ಯಾಸವೆಂದರೆ ಆ ಫಲಕದ ಹಿಂದೆಯೇ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ!

ಮೊದಲಿಗೆ ಅತಿಕ್ರಮಣಕೋರರು ಅಲ್ಲಿ ಕಟ್ಟಡ ತ್ಯಾಜ್ಯವನ್ನು ಹಾಕಿದ್ದರು. ಕೆಲ ತಿಂಗಳ ಬಳಿಕ ಅಲ್ಲಿ ಟಿನ್ ಶೆಡ್‌ ನಿರ್ಮಿಸಿ ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಕೆಲ ತಿಂಗಳ ಬಳಿಕ ಅಲ್ಲಿ ಇಟ್ಟಿಗೆಯಿಂದ ಪಕ್ಕಾ ಕಟ್ಟಡ ನಿರ್ಮಿಸಿದ್ದಾರೆ. ಪುರಾತತ್ವ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಿಸಿಕೊಂಡಿದ್ದರೂ ಜೆಸ್ಕಾಂನವರು ಈ ಮಳಿಗೆಗೆ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಇದೆಲ್ಲ ಹೇಗೆ ಸಾಧ್ಯ ಎಂದು ಶಂಭುಲಿಂಗ ವಾಣಿ ಅವರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.

ಭಾರತೀಯ ಸರ್ವೇಕ್ಷಣಾ ಇಲಾಖೆ ಸಂರಕ್ಷಣಾ ಕಾಯ್ದೆ ಪ್ರಕಾರ ಕೋಟೆಯ 100 ಮೀಟರ್ ಸಮೀಪದಲ್ಲಿ ಯಾರೂ ನಿರ್ಮಾಣ ಚಟುವಟಿಕೆ ಮಾಡುವಂತಿಲ್ಲ. ಆದರೆ, ಕಟ್ಟಡದ ಒಳಗೇ ನೂರಾರು ಕುಟುಂಬಗಳು ಪಕ್ಕಾ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೋಟೆಯ ಕಲ್ಲುಗಳಿಗೆ ರಂಧ್ರ ಕೊರೆದು ಜೆಸ್ಕಾಂನವರು ವಿದ್ಯುತ್ ಸಂಪರ್ಕ ನೀಡಿರುವ ಸಂಗತಿ ‘‍‍ಪ್ರಜಾವಾಣಿ’ ಕೋಟೆಗೆ ಭೇಟಿ ನೀಡಿದಾಗ ಕಂಡು ಬಂತು.

ಕಲಬುರಗಿಯ ಐತಿಹಾಸಿಕ ಬಹಮನಿ ಕೋಟೆಗೆ ಸೇರಿದ ಜಾಗದಲ್ಲಿ ಸಾಮಿಲ್‌ನ ಕಟ್ಟಿಗೆ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಹಾಕಿರುವುದು. ಹಿಂಬದಿಯಲ್ಲಿ ಕೋಟೆಯ ಗೋಪುರ ಕಾಣಬಹುದು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಫೌಜಿಯಾ ತರನ್ನುಮ್
ಭುವನೇಶ ಪಾಟೀಲ
ಬಹಮನಿ ಕೋಟೆಯ ಅತಿಕ್ರಮಣ ಪರಿಶೀಲಿಸಲು ಎಎಸ್‌ಐ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿದ್ದು ವರದಿ ನೀಡಲಿದ್ದಾರೆ
ಫೌಜಿಯಾ ತರನ್ನುಮ್ ಬಿ. ಜಿಲ್ಲಾಧಿಕಾರಿ
ಕೋಟೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‌ ಹಾಗೂ ಕಟ್ಟಡಗಳನ್ನು ತೆರವುಗೊಳಿಸುವಂತೆ ಪಾಲಿಕೆ ವಲಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಭುವನೇಶ ಪಾಟೀಲ ಮಹಾನಗರ ಪಾಲಿಕೆ ಆಯುಕ್ತ ಕಲಬುರಗಿ
ಕೋಟೆಗೆ ಸೇರಿದ ಜಾಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕಳೆದ ಡಿಸೆಂಬರ್‌ನಲ್ಲಿ ನೋಟಿಸ್ ಜಾರಿಗೊಳಿಸಿದ್ದೇವೆ. ಮತ್ತಷ್ಟು ಅತಿಕ್ರಮಣವಾದ ಬಗ್ಗೆ ಪರಿಶೀಲನೆ ನಡೆಸುತ್ತೇವೆ.
ಅನಿರುದ್ಧ ದೇಸಾಯಿ ಸಹಾಯಕ ಸಂರಕ್ಷಣಾಧಿಕಾರಿ ಎಎಸ್‌ಐ ಕಲಬುರಗಿ

ಬಹಮನಿ ಕೋಟೆಯ ಮಹತ್ವ ಈ ಕೋಟೆಯನ್ನು ಮೊದಲಿಗೆ ರಾಜಾ ಗುಲ್‌ಚಂದ್ ನಿರ್ಮಾಣ ಮಾಡಿದ್ದ. ನಂತರ ಅಧಿಕಾರಕ್ಕೆ ಬಂದ ಬಹಮನಿ ಸುಲ್ತಾನ ಅಲ್ಲಾವುದ್ದೀನ್ ಹಸನ್ ಬಹಮನಿ 1347ರಲ್ಲಿ ಈ ಕೋಟೆಯನ್ನು ವಿಸ್ತರಿಸಿದ. 1367ರಲ್ಲಿ ನಿರ್ಮಾಣವಾದ ಜಾಮಾ ಮಸೀದಿಯು ಏಷ್ಯಾದಲ್ಲಿಯೇ ಅತಿ ದೊಡ್ಡ ಮಸೀದಿಗಳ ಪೈಕಿ ಒಂದಾಗಿದೆ. ಇಲ್ಲಿ ಒಂದು ಬದಿಯಿಂದ ಕೂಗಿದರೆ ಮತ್ತೊಂದು ಬದಿಯಲ್ಲಿದ್ದವರಿಗೆ ಸ್ಪಷ್ಟವಾಗಿ ಕೇಳುವ ವಿಶಿಷ್ಟ ಧ್ವನಿ ತಂತ್ರಜ್ಞಾನವನ್ನು ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಳವಡಿಸಲಾಗಿದೆ. ಕೋಟೆಯ ಹಿಂಬದಿಯಲ್ಲಿರುವ ತೋಪು ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ತೋಪು ಎಂದು ಖ್ಯಾತಿ ಪಡೆದಿದೆ. ಸುತ್ತಲೂ ಬೃಹತ್ ಕಂದಕ ನಿರ್ಮಿಸುವ ಮೂಲಕ ಸುಲ್ತಾನರು ಕೋಟೆಯನ್ನು ವೈರಿಗಳಿಂದ ರಕ್ಷಿಸಿದ್ದರು. ಕೋಟೆಯ ಮುಂಭಾಗದ ಬೃಹತ್ ಬಾಗಿಲಿಗೆ ಕಬ್ಬಿಣದ ಈಟಿಗಳನ್ನು ಅಳವಡಿಸುವ ಮೂಲಕ ವೈರಿ ಪಡೆಯ ಆನೆಗಳೂ ಒಳಗೆ ಬರದಂತೆ ರಕ್ಷಣಾ ವ್ಯವಸ್ಥೆ ಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.