ಕಲಬುರ್ಗಿ:ಇಲ್ಲಿನ ಐತಿಹಾಸಿಕ ಬಹಮನಿ ಕೋಟೆಯಲ್ಲಿ ಮಾಡಿಕೊಂಡಿರುವ ಒತ್ತುವರಿಯನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ 15 ದಿನಗಳ ಗಡುವು ನೀಡಿದೆ. ಅಷ್ಟರೊಳಗೆ ಮಾಡದೆ ಹೋದರೆ ವಿಶೇಷ ಕಾರ್ಯಪಡೆ ರಚಿಸಿ ತೆರವುಗೊಳಿಸಲು ಸೂಚನೆ ನೀಡಿದೆ.
ಅತಿಕ್ರಮಣತೆರವು ಕೋರಿ ಸಾಮಾಜಿಕ ಕಾರ್ಯಕರ್ತ ಶರಣ ದೇಸಾಯಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಮುಖ್ಯಪೀಠದಲ್ಲಿ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಅವರಿದ್ದ ಪೀಠವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಈ ಸೂಚನೆ ನೀಡಿದೆ.
ಜಿಲ್ಲಾಡಳಿತದಿಂದ ಪೊಲೀಸ್ ಭದ್ರತೆ ಮತ್ತು ಸಹಕಾರ ಪಡೆದುಕೊಂಡು ಅತಿಕ್ರಮಣ ತೆರವು ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನವನ್ನು ನ್ಯಾಯಪೀಠ ನೀಡಿದೆ. ಒತ್ತುವರಿ ತೆರವು ಸಂಬಂಧ ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯ ಪೀಠದ ಮುಂದೆ ಎಎಸ್‌ಐ ಅಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಿದರು. ತಿಂಗಳ ಕಾಲಾವಕಾಶ ಕೇಳಿದರು. ಅದರೆ, ನ್ಯಾಯಪೀಠ ಸಮ್ಮತಿಸಲಿಲ್ಲ.
ಕಲಬುರ್ಗಿಯ ಹೃದಯಭಾಗದಲ್ಲಿರುವ ಬಹಮನಿ ಕೋಟೆಯೊಳಗೆ 282 ಜನ ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದಾರೆ. ಅ 25ರೊಳಗೆ ತೆರವು ಮಾಡಲು ಅ 18 ಮತ್ತು 21ರಂದು ನೋಟಿಸ್ ಜಾರಿ ಮಾಡಿದೆ. ನೋಟಿಸ್‍ಗೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ಎಎಸ್‌ಐನ ಧಾರವಾಡ ವೃತ್ತದ ಪುರಾತತ್ವ ಅಧೀಕ್ಷಕ ಅನಿಲಕುಮಾರ ಅಫಿಡವಿಟ್‍ನಲ್ಲಿ ಉಲ್ಲೇಖಿಸಿದ್ದಾರೆ. ವಿಚಾರಣೆಯನ್ನು ಡಿ.11ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.