ADVERTISEMENT

ತೆರವಾಗದ ಬಹಮನಿ ಕೋಟೆಯ ಒತ್ತುವರಿ: ರಾಜಕೀಯ ಒತ್ತಡಕ್ಕೆ ಮಣಿದರೇ ಅಧಿಕಾರಿಗಳು?

ತೆರವಾಗದ ಐತಿಹಾಸಿಕ ಕಲಬುರಗಿ ಬಹಮನಿ ಕೋಟೆಯ ಒತ್ತುವರಿ

ಮನೋಜ ಕುಮಾರ್ ಗುದ್ದಿ
Published 20 ಅಕ್ಟೋಬರ್ 2024, 6:48 IST
Last Updated 20 ಅಕ್ಟೋಬರ್ 2024, 6:48 IST
ಕಲಬುರಗಿಯ ಬಹಮನಿ ಕೋಟೆಯ ಹೊರಭಾಗದಲ್ಲಿ ಕೋಟೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ವ್ಯಾಪಾರ ಮಳಿಗೆಗಳು
–ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿಯ ಬಹಮನಿ ಕೋಟೆಯ ಹೊರಭಾಗದಲ್ಲಿ ಕೋಟೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ವ್ಯಾಪಾರ ಮಳಿಗೆಗಳು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಇತಿಹಾಸ ಪ್ರೇಮಿಗಳು, ಪ್ರವಾಸಿಗರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಇಲ್ಲಿನ ಐತಿಹಾಸಿಕ ಬಹಮನಿ ಕೋಟೆಯ ಸುತ್ತಲಿನ ನೀರಿನ ಕಂದಕದಲ್ಲಿ ಬೆಳೆದಿದ್ದ ಕೊಳಚೆಯನ್ನು ತೆರವುಗೊಳಿಸಿದೆಯಾದರೂ ಶಹಾ ಬಜಾರ್ ಕಡೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಅಂಗಡಿಗಳನ್ನು ತೆರವುಗೊಳಿಸಲು ಮೀನ ಮೇಷ ಎಣಿಸುತ್ತಿದೆ.

ಕೋಟೆಯ ನಿರ್ವಹಣೆ ಹಾಗೂ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗಳ ಸಮನ್ವಯದ ಕೊರತೆಯಿಂದಾಗಿ ಕೋಟೆಗೆ ಸೇರಿದ ಜಾಗದಲ್ಲಿ ಹತ್ತಾರು ಅಂಗಡಿಗಳು ತಲೆ ಎತ್ತಿದ್ದರೂ, ಎಎಸ್‌ಐ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಅನಧಿಕೃತವಾಗಿ ಮಳಿಗೆ ನಿರ್ಮಿಸಿಕೊಂಡವರಿಗೆ ನೋಟಿಸ್ ನೀಡಿದ್ದರೂ ಇನ್ನೂ ತೆರವುಗೊಳಿಸುವ ಕಾರ್ಯ ಶುರುವಾಗಿಲ್ಲ.

ಕೋಟೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ನಡಿಗೆ ಪಥ, ಶುದ್ಧ ಕುಡಿಯುವ ನೀರು, ಉದ್ಯಾನ ನಿರ್ಮಾಣದಂತಹ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ. ಆದರೆ, ಕೋಟೆಯ ಒಳಗೆ ಹಾಗೂ ಹೊರಗೆ ಅತಿಕ್ರಮಣ ಮಾಡಿ ವಾಸ್ತವ್ಯ ಹಾಗೂ ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ಪ್ರವಾಸಿಗರಿಗೆ ಕಿರಿ ಕಿರಿ ಎನಿಸುತ್ತಿದೆ. ಎಎಸ್‌ಐ ಹಾಗೂ ಪಾಲಿಕೆ ಬರೀ ಅತಿಕ್ರಮಣ ಮಾಡಿಕೊಂಡವರಿಗೆ ನೋಟಿಸ್ ನೀಡಿ ಕೈತೊಳೆದುಕೊಂಡಿವೆ. ನಂತರ ಅವರನ್ನು ಅಲ್ಲಿಂದ ತೆರವುಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ ಎನ್ನುತ್ತಾರೆ ಯುವ ಮುಖಂಡ ಶಿವ ಅಷ್ಠಗಿ.

ADVERTISEMENT

ಕೋಟೆಯ ಒಳಗೆ 284 ಕುಟುಂಬಗಳು ವಾಸವಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಎಎಸ್ಐ ಮತ್ತು ಜಿಲ್ಲಾಡಳಿತದ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಬೇರೆಡೆ ಮನೆ ನಿರ್ಮಿಸಿಕೊಡುವಂತೆ ಎಎಸ್‌ಐ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ. ಆದರೆ, ಎಎಸ್‌ಐ ಕೋಟೆಯ ಅತಿಕ್ರಮಣ ಮಾಡಲು ಅವಕಾಶ ನೀಡಿದ್ದು ಜಿಲ್ಲಾಡಳಿತ ಹೀಗಾಗಿ, ಪುನರ್ವಸತಿಗೂ ತನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೋಟೆಯ ಹೊರಭಾಗದ ಶಹಾಬಜಾರ್ ಪ್ರದೇಶದಲ್ಲಿನ ಮಳಿಗೆಗಳನ್ನು ನಿರ್ಮಿಸಲು ಸಿಖ್ ಸಂಸ್ಥೆಯೊಂದು ಅವಕಾಶ ನೀಡಿದೆ. ಆ ಜಾಗದ ಬಾಡಿಗೆಯನ್ನು ಆ ಸಂಸ್ಥೆಗೇ ನೀಡುತ್ತಿದ್ದೇವೆ ಎಂದು ಅಂಗಡಿಯವರು ಹೇಳುತ್ತಿದ್ದಾರೆ. ಆದರೆ, ಆ ಜಾಗ ಕೋಟೆಗೆ ಸೇರಿದ್ದಾಗಿದ್ದು, ಯಾವುದೇ ಸಂಸ್ಥೆಯ ಒಡೆತನಕ್ಕೆ ನೀಡಿಲ್ಲ ಎಂದು ಎಎಸ್‌ಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಸಂಬಂಧ ಪ್ರತಿಕ್ರಿಯೆಗೆ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ ಲಭ್ಯರಾಗಲಿಲ್ಲ. 

ಬಸವಪ್ರಭು
ಶಂಭುಲಿಂಗ ವಾಣಿ

Quote - ಯಾವುದೇ ಧರ್ಮಕ್ಕೆ ಸೇರಿರಲಿ ನಮ್ಮ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ಸ್ಮಾರಕಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಬಹಮನಿ ಕೋಟೆಯನ್ನು ರಕ್ಷಿಸಬೇಕು ಬಸವಪ್ರಭು ಶಾಂತರಸ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ

ಕೋಟೆ ಆವರಣದಲ್ಲಿ ಗಿಡಗಂಟಿ ತ್ಯಾಜ್ಯಗಳನ್ನು ನಿರಂತರವಾಗಿ ತೆರವುಗೊಳಿಸಲು ಪಾಲಿಕೆಯಿಂದ 10 ಪೌರಕಾರ್ಮಿಕರನ್ನು ಅಲ್ಲಿಯೇ ನಿಯೋಜಿಸಬೇಕು
ಶಂಭುಲಿಂಗ ವಾಣಿ ಇತಿಹಾಸ ತಜ್ಞ ಇಂಟ್ಯಾಕ್ ಅಧ್ಯಕ್ಷ ಕಲಬುರಗಿ

ಹುಸಿಯಾದ ಸಚಿವರ ಭರವಸೆ

ಇತ್ತೀಚೆಗೆ ಕೋಟೆಯ ಅತಿಕ್ರಮಣ ಕುರಿತು ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟೆಯ ಒಳಗಿನವರಿಗೆ ವಿದ್ಯುತ್ ನೀರನ್ನು ಕೊಡುವ ಮೂಲಕ ಅಲ್ಲಿಯೇ ಉಳಿಯಲು ಅವರಿಗೆ ಪರೋಕ್ಷವಾಗಿ ಅವಕಾಶ ನೀಡಿದಂತಾಗಿದೆ. ಹೀಗಾಗಿ ಹೊರಹೋಗಲು ಒಪ್ಪುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಕೋಟೆಯ ಹೊರಭಾಗದಲ್ಲಿನ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿಯೂ ಭರವಸೆ ನೀಡಿದ್ದರು. ಆದರೆ ಆ ಭರವಸೆಯೂ ಹುಸಿಯಾಗಿದೆ. ಮಳಿಗೆಗಳನ್ನು ತೆರವುಗೊಳಿಸಲು ಪಾಲಿಕೆಯ ಅಧಿಕಾರಿಗಳು ಪ್ರಯತ್ನ ಮಾಡಿಲ್ಲ ಎಂದಲ್ಲ. ಆದರೆ ಪ್ರತಿ ಬಾರಿ ಹೋದಾಗಲೂ ಮಹಾನಗರ ಪಾಲಿಕೆಯ ಕೆಲ ಸದಸ್ಯರೇ ತೆರವು ಪ್ರಕ್ರಿಯೆ ಮಾಡಬಾರದು ಎಂದು ಮೌಖಿಕವಾಗಿ ಸೂಚಿಸಿದ್ದರಿಂದ ಮಳಿಗೆ ತೆರವು ಕಾರ್ಯ ಸಾಧ್ಯವಾಗುತ್ತಿಲ್ಲ ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಏತನ್ಮಧ್ಯೆ ಕೆಲ ದಿನಗಳ ಹಿಂದೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಬಹಮನಿ ಕೋಟೆಗೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಿದ್ದರೂ ಏಕೆ ಸುಮ್ಮನೇ ಕುಳಿತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರವಾಸಿಗರ ಆಸಕ್ತಿ ಕುಂದಿಸಿದ ಅತಿಕ್ರಮಣ

ಕೆಲ ವರ್ಷಗಳ ಹಿಂದೆ ವಿದೇಶಿ ಪ್ರವಾಸಿಗರು ಬೀದರ್ ಕಲಬುರಗಿಯಲ್ಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿ ನಂತರ ವಿಜಯಪುರ ಹಂಪಿಯತ್ತ ಹೋಗುತ್ತಿದ್ದರು. ಆದರೆ ಕಲಬುರಗಿ ಬಹಮನಿ ಕೋಟೆಯಲ್ಲಿನ ಅತಿಕ್ರಮಣ ಅಲ್ಲಿನ ನಿವಾಸಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಮುಳ್ಳು ಕಂಟಿಗಳು ಕೋಟೆಯ ಆವರಣದಲ್ಲಿ ಬೆಳೆದಿರುವುದರಿಂದ ಈಚಿನ ದಿನಗಳಲ್ಲಿ ಪ್ರವಾಸಿಗರು ಇತ್ತ ಬರುವುದನ್ನು ಕಡಿಮೆ ಮಾಡಿದ್ದಾರೆ ಎನ್ನುತ್ತಾರೆ ಇತಿಹಾಸ ತಜ್ಞ ಶಂಭುಲಿಂಗ ವಾಣಿ. ‘ಮತ್ತೆ ಕೋಟೆಯ ಗತವೈಭವ ಮರಳಬೇಕೆಂದರೆ ಅತಿಕ್ರಮಣ ತಡೆಯಬೇಕು. ಜೊತೆಗೆ ಕೋಟೆಯನ್ನು ನಡೆದುಕೊಂಡು ಹೋಗಲು ವಾಕಿಂಗ್ ಪಾಥ್ ನಿರ್ಮಿಸಬೇಕು’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.