ADVERTISEMENT

ಕಲಬುರಗಿ ಕೋಟೆ: ಬಾರಹ ಗಜ ಫಿರಂಗಿಗಿಲ್ಲ ಮನ್ನಣೆ!

ಕೋಟೆಯಲ್ಲಿನ ಬೃಹತ್‌ ತೋಪು ವೀಕ್ಷಣೆಗಿಲ್ಲ ಅವಕಾಶ; ಪ್ರವಾಸಿಗರ ಬೇಸರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 6:53 IST
Last Updated 25 ಅಕ್ಟೋಬರ್ 2024, 6:53 IST
ಕಲಬುರಗಿ ಕೋಟೆಯ ಮೇಲಿರುವ ಬಾರಹ ಗಜ ತೋಪು
ಕಲಬುರಗಿ ಕೋಟೆಯ ಮೇಲಿರುವ ಬಾರಹ ಗಜ ತೋಪು   

ಕಲಬುರಗಿ: ಬಹಮನಿ ಸುಲ್ತಾನರು ಆಳಿದ ಕಲಬುರಗಿ ಕೋಟೆ ತೋಪುಗಳ ಬಳಕೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಮಧ್ಯಕಾಲಿನ ಚರಿತ್ರೆಯಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲು ತೋಪುಗಳನ್ನು ಬಳಸಿದ ಖ್ಯಾತಿ ಬಹಮನಿಯರದ್ದು. ಹೀಗಾಗಿ ಇಲ್ಲಿ ಬೃಹತ್‌ ತೋಪು ಸ್ಥಾಪಿಸಲ್ಪಟ್ಟಿದೆ. ಸಂಶೋಧಕರ ಪ್ರಕಾರ ಇದೇ ವಿಶ್ವದ ದೊಡ್ಡ ತೋಪು ಆದರೆ ಅದು ದಾಖಲೆಗಳಲ್ಲಿ ಮಾತ್ರ ಸೇರಿಲ್ಲ. ಹೀಗಾಗಿ ಇದನ್ನು ಗಿನ್ನೀಸ್‌ ದಾಖಲೆಗೆ ಸೇರಿಸಬೇಕು ಎಂಬುದು ಸಂಶೋಧಕ ಶಂಭುಲಿಂಗ ವಾಣಿಯವರ ಒತ್ತಾಯವಾಗಿದೆ.

ದೇಶದಲ್ಲಿಯೇ ಮೊಟ್ಟ ಮೊದಲು ತೋಪುಗಳನ್ನು ಬಳಸಿದವರು ಬಹಮನಿ ಸುಲ್ತಾನರು ಎನ್ನುತ್ತಾರೆ ಇತಿಹಾಸಕಾರರು. 1365ರಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ಸುಲ್ತಾನರಿಗೂ ದೋ ಅಬ್‌ ಕಾಳಗ ನಡೆಯುತ್ತದೆ. ಆ ಕಾಳಗದಲ್ಲಿ ಬಹಮನಿ ಸುಲ್ತಾನ 1ನೇ ಮಹಮ್ಮದ್ ಷಾ ತೋಪುಗಳನ್ನು ಬಳಸುತ್ತಾನೆ. ಕಲಬುರಗಿ ಕೋಟೆಯಲ್ಲಿ ರಕ್ಷಣೆಗಾಗಿ 26 ತೋಪುಗಳು ಸ್ಥಾಪಿಸಲ್ಪಟ್ಟಿವೆ. ಅದರಲ್ಲಿ ವಿಶೇಷವಾದದ್ದೇ ಬಾರಹ ಗಜ ತೋಪು.

14ನೇ ಶತಮಾನದಲ್ಲಿ ಮಾಡಲ್ಪಟ್ಟ ಬಾರಹ ಗಜ ತೋಪು ಪಂಚಲೋಹಗಳಿಂದ ಸಿದ್ಧವಾಗಿದೆ. ಒಂದು ಗಜವೆಂದರೆ ಅಂದಾಜು ಮೂರು ಅಡಿ. ಹೀಗಾಗಿ ಇದು ಬರೊಬ್ಬರಿ 29 ಅಡಿ ಉದ್ದವಿದೆ. 7.6 ಅಡಿ ಸುತ್ತಳತೆಯನ್ನು ಈ ತೋಪು ಹೊಂದಿದ್ದು, 2 ಅಡಿ ವ್ಯಾಸ ಹೊಂದಿದೆ. 7 ಅಂಗುಲ ಅಂದರೆ ಅರ್ಧ ಅಡಿಗಿಂತ ಹೆಚ್ಚು ದಪ್ಪವಾಗಿದ್ದು, 75 ಟನ್‌ ತೂಗುತ್ತದೆ. ಸುಮಾರು ಒಂದೂವರೆ ಕಿ.ಮೀ.ವರೆಗೆ ಮದ್ದು ಸಿಡಿಸಬಲ್ಲದು.

ADVERTISEMENT

ಕಲಬುರಗಿ ಕೋಟೆಯಲ್ಲಿ ಸುಮಾರು 26 ತೋಪುಗಳಿವೆ. ಆದರೆ ನೋಡಲು ಸಿಗುವುದು ಮಾತ್ರ 17. ಅದರಲ್ಲೂ ಕೆಲವು ಮುಳ್ಳು ಕಂಟಿಗಳಲ್ಲಿ ಮುಚ್ಚಿಹೋಗಿವೆ. ಯುದ್ಧಗಳಲ್ಲಿ ಹೊತ್ತುಕೊಂಡು ಹೋಗುವ ತೋಪುಗಳು ಬೇರೆ, ಕೋಟೆಯ ರಕ್ಷಣೆಗಾಗಿ ನಿಲ್ಲಿಸಿರುವ ತೋಪುಗಳು ಬೇರೆ. 4 ಅಡಿಯಿಂದ 29 ಅಡಿವರೆಗಿನ ಆಕಾರದ ತೋಪುಗಳನ್ನು ಇಲ್ಲಿ ನಾವು ನೋಡಬಹುದು.

ಪ್ರಸ್ತುತ ಬಾರಹಗಜ  ತೋಪು ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಹೀಗಾಗಿ ಪ್ರವಾಸಿಗರು ಬೇಸರಿಸಿಕೊಳ್ಳುತ್ತಾರೆ. ಸಾರ್ವಜನಿಕರ ಮಾಹಿತಿಗಾಗಿ ಅಲ್ಲೊಂದು ನಾಮಫಲಕ ಅಳವಡಿಸಿ ಅದರ ಬಗ್ಗೆ ವಿವರಗಳನ್ನು ನಮೂದಿಸಬೇಕು ಎಂದು ಇತಿಹಾಸ ಪ್ರಿಯರು ಒತ್ತಾಯಿಸಿದ್ದಾರೆ. ಆದರೂ ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಜನರದ್ದಾಗಿದೆ.

ತೋಪಿನ ವಿಶೇಷತೆಯನ್ನು ವಿದೇಶಿ ಪ್ರವಾಸಿಗರಿಗೆ ವಿವರಿಸುತ್ತಿರುವ ಇತಿಹಾಸ ತಜ್ಞ ಶಂಭುಲಿಂಗ ವಾಣಿ

ಬಾರಾಹ ಗಜ ವಿಶೇಷತೆ

ನಿರ್ಮಾಣ; 14ನೇ ಶತಮಾನ

ಉದ್ದ; 29 ಅಡಿ

ಸುತ್ತಳತೆ; 7.6 ಅಡಿ

ವ್ಯಾಸ; 2 ಅಡಿ

ದಪ್ಪ;7 ಅಂಗುಲ

ತೂಕ; 75 ಟನ್‌

ರೇಂಜ್‌; 1.5 ಕಿ.ಮೀ

ಇಷ್ಟೊಂದು ಉದ್ದನೆಯ ತೋಪುಗಳು ಭಾರತದ ಯಾವುದೇ ಕೋಟೆಗಳಲ್ಲಿ ಕಂಡುಬರುವುದಿಲ್ಲ. ಬಾರಹ ಗಜ ತೋಪು ಬೃಹತ್‌ ತೋಪಾಗಿದ್ದು ವಿಶ್ವದ ಅದ್ಭುತ ಸ್ಮಾರಕಗಳ ಪಟ್ಟಿಗೆ ಸೇರಬೇಕು.
–ಪ್ರೊ.ಶಂಭುಲಿಂಗ ವಾಣಿ, ಇತಿಹಾಸ ತಜ್ಞ
ಕಲಬುರಗಿ ಕೋಟೆಯಲ್ಲಿ ಸಾಕಷ್ಟು ಫಿರಂಗಿಗಳಿವೆ. ಆದರೆ ಇಲ್ಲಿರುವ ದೊಡ್ಡ ತೋಪನ್ನು ನೋಡಲು ಬಿಡುತ್ತಿಲ್ಲ. ಇದು ಬೇಸರದ ಸಂಗತಿ. ಪ್ರವಾಸಿಗರಿಗೆ ತೋಪು ವೀಕ್ಷಿಸಲು ಅವಕಾಶ ನೀಡಬೇಕು.
–ನಿಶಾತ್‌, ಹೈದರಾಬಾದ್‌ ಮೂಲದ ಪ್ರವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.