ಬೆಳಗೇರಾ (ಯರಗೋಳ): ಪ್ರಾಚೀನ ಕಾಲದಲ್ಲಿ ರಾಜರು ಪತ್ರ ರವಾನೆ ಮಾಡಲು ಪಾರಿವಾಳಗಳನ್ನು ಸಾಕುತ್ತಿದ್ದರು. ಆಧುನಿಕ ಜಗತ್ತಿನಲ್ಲಿ ‘ರೇಸಿಂಗ್ ಹೋಮರ್’ ಪಾರಿವಾಳಗಳನ್ನು ಹವ್ಯಾಸಕ್ಕೆಂದು ಸಾಕುತ್ತಿದ್ದಾರೆ.
ಜಿಲ್ಲೆಯ ದಿವಾನ್ ಬೆಳಗೇರಾ ಗ್ರಾಮದ ಯುವಕ, 33 ವರ್ಷದ ಬನ್ನಪ್ಪ ನಿಸಂಕಿ ವೃತ್ತಿಯಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದು, ಕಳೆದ 15 ವರ್ಷಗಳಿಂದ ‘ರೇಸಿಂಗ್ ಹೋಮರ್’ ಜಾತಿಯ ಪಾರಿವಾಳಗಳನ್ನು ಸಾಕುತ್ತಿದ್ದಾರೆ.
ಬನ್ನಪ್ಪ ತನ್ನ ಮನೆಯಲ್ಲಿ 20 ಗಂಡು, 20 ಹೆಣ್ಣು ಜಾತಿಯ ಪಾರಿವಾಳಗಳನ್ನು ಸಾಕುತ್ತಿದ್ದು, ಪ್ರತಿನಿತ್ಯ ಬೆಳಗ್ಗೆ 6.30ಕ್ಕೆ ಗೂಡಿಂದ ವಾಯು ವಿಹಾರಕ್ಕೆ ಬಿಡುತ್ತಾರೆ. ಬೆಳಗ್ಗೆ 8ಕ್ಕೆ ಮರಳಿ ಗೂಡು ಸೇರುತ್ತವೆ. ಪ್ರತಿ ಪಾರಿವಾಳಕ್ಕೆ 30 ಗ್ರಾಂ ಪೌಷ್ಟಿಕ ಆಹಾರ, ದಾಹ ನೀಗುವಷ್ಟು ನೀರು ಕೊಡುತ್ತಾನೆ.
ಪಾರಿವಾಳಗಳ ಆಹಾರಕ್ಕೆ 21 ಬಗೆಯ ಧಾನ್ಯಗಳಾದ ಜೋಳ, ಸಜ್ಜೆ, ಕಡಲಿ, ಗೋಧಿ, ಮೆಕ್ಕೆಜೋಳ, ಹಲಸಂದಿ, ಉದ್ದು, ಹೆಸರು, ತೊಗರಿ, ಸೂರ್ಯಕಾಂತಿ, ರಾಗಿ, ಬಟಾಣಿ, ಬಿಳಿ ಕುಸುಬಿ, ಕರಿ ಕುಸುಬಿ, ಬಾರ್ಲಿ, ನವಣೆ, ಕೆಂಪು ಅಕ್ಕಿ, ಬಿಳಿ ಎಳ್ಳು, ಕರಿ ಎಳ್ಳು, ಕೆಂಪು ಜೋಳದ ಮಿಶ್ರಣಕ್ಕೆ ಪ್ರತಿ ತಿಂಗಳು ₹ 6 ಸಾವಿರ ಖರ್ಚು ಮಾಡುತ್ತಾರೆ.
ಪಾರಿವಾಳಗಳ ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರ ಮಾರ್ಗದರ್ಶನದಂತೆ ಮಾತ್ರೆ ನೀಡಿ ಉಪಚರಿಸುತ್ತಾನೆ.
ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಹವ್ಯಾಸಿ ರೇಸಿಂಗ್ ಹೋಮರ್ (ಪಾರಿವಾಳ) ಸಾಕುವ ಯುವಕರು ಶಹಾಪುರ ಹೋಮಿಂಗ್ ಪಿಯೋನ್ ಸೊಸೈಟಿ (ಎಸ್‌ಎಚ್‌ಪಿಎಸ್) ಕ್ಲಬ್ ರಚಿಸಿದ್ದಾರೆ. ದೇಶದ ವಿವಿಧೆಡೆ ನಡೆಯುವ ಸ್ಪರ್ಧೆಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಾರೆ.
ರೇಸಿಂಗ್ ಹೋಮರ್ ಪಾರಿವಾಳ ಲಕ್ಷಣ: ಹೋಮಿಂಗ್ (ಮನೆ ಹುಡುಕುವ) , ದೀರ್ಘಾವಧಿ ಹಾರುವ ಸಾಮರ್ಥ್ಯ, ಮಧ್ಯಮ ಗಾತ್ರ, ತೆಳ್ಳಗಿನ ದೇಹ, ದೃಢವಾದ ರೆಕ್ಕೆ, ಕೆಂಪು ಬಣ್ಣದ ಕಣ್ಣು, ಕಾಲುಗಳನ್ನು ಹೊಂದಿದೆ.
ರೇಸಿಂಗ್ ಹೋಮ್ ಸ್ಪರ್ಧೆ ಹೇಗೆ?: ರೇಸಿಂಗ್ ಹೋಮ್ ಪಾರಿವಾಳ ಸಾಕುವ ಹವ್ಯಾಸಿಗಳು ಒಂದು ಕ್ಲಬ್ ರಚಿಸಿಕೊಂಡಿರುತ್ತಾರೆ. ತಾವು ಸಾಕಿದ ಪಾರಿವಾಳಗಳ ಕಾಲಿಗೆ ಗುರುತಿನ ಬ್ಯಾಂಡ್ ಕಟ್ಟಿ, ಒಂದು ನಿರ್ದಿಷ್ಟ ಸ್ಥಳದಿಂದ ಹಾರಿ ಬಿಡುತ್ತಾರೆ. ನಿಖರವಾಗಿ ಮನೆ ತಲುಪುವ ಪಾರಿವಾಳಗಳ ಪ್ರಯಾಣದ ಅವಧಿ, ಕ್ರಮಿಸಿದ ದೂರವನ್ನು ಅಂಕಿ- ಸಂಖ್ಯೆ ದಾಖಲಿಸಿ, ಕಡಿಮೆ ಸಮಯದಲ್ಲಿ ಮನೆ ತಲುಪಿದ ಪಾರಿವಾಳಗಳನ್ನು, ವಿಜಯಿ ಎಂದು ಘೋಷಿಸಲಾಗುತ್ತದೆ.
ಬನ್ನಪ್ಪ ಅವರ ಪಾರಿವಾಳಗಳು ಕಳೆದ ತಿಂಗಳು ಮಹಾರಾಷ್ಟ್ರದ (ವರೋಡ) ದಿಂದ ಹಾರಿ ಬಿಡಲಾಗಿತ್ತು. 550 ಕಿ.ಮೀ. ಹಾರಾಟ ಮಾಡಿ, ನಿಖರವಾಗಿ ಕಡಿಮೆ ಸಮಯದಲ್ಲಿ ಮನೆ ತಲುಪಿದ್ದವು.
ನಾನು ಕಾಲೇಜು ವಿದ್ಯಾರ್ಥಿ. ರೇಸಿಂಗ್ ಹೋಮರ್ ಸಾಕಣೆ ನನ್ನ ಹವ್ಯಾಸ. ನನ್ನ ಬಳಿ ಸದ್ಯ 50 ಪಾರಿವಾಳಗಳಿವೆ-ಕರಿಯಪ್ಪ, ಎಸ್‌ಎಚ್‌ಪಿಎಸ್ ಕ್ಲಬ್ ಅಧ್ಯಕ್ಷ ಶಹಾಪುರ
ನಾನು ಸಾಕಿದ ಪಾರಿವಾಳಗಳನ್ನು ಮಾರಾಟ ಮಾಡುವುದಿಲ್ಲ. ಯಾರಾದರೂ ಹವ್ಯಾಸಕ್ಕೆ ಸಾಕುತ್ತಿದ್ದರೆ ಉಚಿತವಾಗಿ ಕೊಡುತ್ತೇನೆ.-ಬನ್ನಪ್ಪ ನಿಸಂಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.