ADVERTISEMENT

ಪಂಚಮಸಾಲಿ 2ಎ: ನೀತಿ ಸಂಹಿತೆಗೂ ಮುನ್ನ ಶಿಫಾರಸು ಮಾಡಿ- ಬಸವಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 16:16 IST
Last Updated 25 ಫೆಬ್ರುವರಿ 2024, 16:16 IST
ಬಸವಜಯಮೃತ್ಯುಂಜಯ ಸ್ವಾಮೀಜಿ
ಬಸವಜಯಮೃತ್ಯುಂಜಯ ಸ್ವಾಮೀಜಿ   

ಕಲಬುರಗಿ: ‘ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರ ಒಳಗಾಗಿ ರಾಜ್ಯ ಸರ್ಕಾರವು ದೀಕ್ಷ ಮತ್ತು ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಸೇರ್ಪಡೆಗೆ ಶಿಫಾರಸು ಮಾಡಬೇಕು’ ಎಂದು ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಇಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಹಿಂದಿನ ಸರ್ಕಾರ ಈ ಬಗ್ಗೆ ವಿಳಂಬ ಧೋರಣೆ ಮಾಡಿದ್ದಕ್ಕೆ ಏನಾಯಿತು ಎಂಬುದು ಆ ಪಕ್ಷ, ಸರ್ಕಾರಕ್ಕೂ ಗೊತ್ತಿದೆ. ಲೋಕಸಭೆ ಚುನಾವಣೆಯ ಒಳಗೆ ಜಾರಿಯಾಗದೆ ಇದ್ದರೆ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಎಂಬುದು ಮಾರ್ಚ್‌ 10ರಂದು ನಡೆಯುವ ಸಮಾವೇಶದಲ್ಲಿ ನಿರ್ಣಯವಾಗಲಿದೆ’ ಎಂದು ಎಚ್ಚರಿಸಿದರು.

‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೂರು ಅಧಿವೇಶನಗಳು ನಡೆದಿವೆ. ಸುವರ್ಣಸೌಧದ ಸಭೆಯಲ್ಲಿ ಕಾನೂನು ತಜ್ಞರ ಸಭೆ ಕರೆದು ಸ್ಪಷ್ಟತೆ ಕೊಡುವುದಾಗಿ ಹೇಳಿದ್ದರು. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದರು.

ADVERTISEMENT

‘ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪಕ್ಷಭೇದ ಮರೆತು ಹಕ್ಕೊತ್ತಾಯ ಮಾಡುವಂತೆ ಶಾಸಕರಿಗೆ ತಿಳಿಸಲಾಗಿತ್ತು. ಅದೇ ರೀತಿ ಇಂದಿನ (ಫೆ.26) ಅಧಿವೇಶನದಲ್ಲಿ ನಮ್ಮ ಸಮಾಜದ ಎಲ್ಲ ಶಾಸಕರು ಸೇರಿ ಧ್ವನಿ ಎತ್ತಬೇಕು. ಮುಖ್ಯಮಂತ್ರಿಗಳ ಉತ್ತರಕ್ಕೆ ಎದುರು ನೋಡುತ್ತಿದ್ದೇವೆ. ಮುಖ್ಯಮಂತ್ರಿ ಉತ್ತರದ ಆಧಾರದ ಮೇಲೆ ಕಲಬುರಗಿಯಲ್ಲಿ ನಡೆಯುವ ಸಮಾವೇಶದಲ್ಲಿ ಮುಂದಿನ ಹೋರಾಟದ ರೂಪರೇಷ ಮಾಡುತ್ತೇವೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೌಜನ್ಯಕ್ಕೆಯಾದರೂ ಸ್ಪಷ್ಟತೆ ಕೊಡುವ ಕೆಲಸ ಮಾಡಬೇಕಿತ್ತು. ಆದರೆ, ಇದುವರೆಗೂ ಏನೂ ಹೇಳಿಲ್ಲ. ಆಡಳಿತ ಮತ್ತು ವಿರೋಧ ಪಕ್ಷದವರು ಸೇರಿ ಈ ಬಗ್ಗೆ ಧ್ವನಿ ಎತ್ತುವ ವಿಶ್ವಾಸ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.