ಕಲಬುರಗಿ: ‘ವಚನಗಳ ಆಶಯ ಮತ್ತು ಸಂವಿಧಾನದ ಆಶಯ ಎರಡೂ ಒಂದೇ ಆಗಿವೆ. ಎಲ್ಲರನ್ನೂ ಭೇದ–ಭಾವ ಇಲ್ಲದೆ ನಮ್ಮವರೆಂದು ಭಾವಿಸಬೇಕು ಎಂದೇ ಬೋಧಿಸುತ್ತವೆ’ ಎಂದು ಸಾಹಿತಿ ಅರುಣ ಜೋಳದಕೂಡ್ಲಿಗಿ ಅಭಿಪ್ರಾಯಪಟ್ಟರು.
ನಗರದ ರಾಮಜಿ ನಗರದಲ್ಲಿ ಬಸವ ಪ್ರಜ್ಞೆ ವಿಚಾರ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ’ ಎನ್ನುವ ಬಸವಣ್ಣನ ವಚನದ ಆಶಯ ಹಾಗೂ ಭಾರತ ಸಂವಿಧಾನದ ಪ್ರಸ್ತಾವನೆಯ ‘ಭಾರತದ ಜನತೆಯಾದ ನಾವುಗಳು...’ ಎನ್ನುವಲ್ಲಿ ಹೋಲಿಕೆಯಾಗುತ್ತದೆ’ ಎಂದು ಪ್ರತಿಪಾದಿಸಿದರು.
‘ಕರ್ನಾಟಕದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಎನ್ನುವ ಸಮಾನತೆಯ ತತ್ವದಡಿ ಈ ಮೂವರನ್ನು ಏಕೀಭವಿಸಲಾಗಿದೆ. ಸಮತೆಯ ಆಶಯದ ಹಿನ್ನೆಲೆಯಲ್ಲಿ ಈ ಮೂವರ ಜತೆ ಕಾರ್ಲ್ ಮಾರ್ಕ್ಸ್ ಅವರನ್ನೂ ಸೇರಿಸಿಕೊಳ್ಳಬೇಕು. ಅಸಮಾನತೆಯ ವಿರುದ್ಧದ ಬಸವಣ್ಣನ ಹೋರಾಟ ನೋಡಿದರೆ ನಾವು ಕಾಮ್ರೇಡ್ ಬಸವಣ್ಣ ಎಂದು ಕರೆಯಬೇಕು’ ಎಂದು ಪ್ರತಿಪಾದಿಸಿದರು.
‘ಬಸವಣ್ಣ 70 ವಚನಗಳಲ್ಲಿ ವೈದಿಕಶಾಹಿಯನ್ನು ವಿರೋಧಿಸಿದ್ದಾರೆ. 100 ಶರಣರು 1,700ರಷ್ಟು ವಚನಗಳಲ್ಲಿ ವೈದಿಕಶಾಹಿ, ಸನಾತನ ಧರ್ಮದ ಮೌಢ್ಯಗಳನ್ನು ಕಟುವಾಗಿ ವಿರೋಧಿಸಿದ್ದಾರೆ. ಹೀಗಾಗಿ ಯಾರು ಇಂದು ವೈದಿಕಶಾಹಿಯನ್ನು ಬೆಂಬಲಿಸಿ ಸನಾತನ ಧರ್ಮವನ್ನು ಆಚರಿಸುತ್ತಾರೋ ಅವರು ಬಸವದ್ರೋಹಿಗಳಾಗುತ್ತಾರೆ. ಇಂದು ಉಳ್ಳವರು ಬಸವನನ್ನು ಕೇವಲ ಆರಾಧನೆಗೆ ಸೀಮಿತರಾಗಿಸಿದ್ದಾರೆ. ಬಸವಣ್ಣನ ಫೋಟೊ ಮನೆಯಲ್ಲಿ ಹಾಕಿಕೊಂಡೂ ಜಾತೀಯತೆ ಮಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಡಿಡಿಪಿಯು ಶಿವಶರಣಪ್ಪ ಮೂಳೇಗಾಂವ ಮಾತನಾಡಿದರು. ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಶಿವಗಂಗಾ ರುಮ್ಮಾ ಅವರು ಬಸವಾದಿ ಶರಣರ ಚಿಂತನೆಗಳ ಪ್ರಸ್ತುತತೆ ಕುರಿತು ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಚಂದಮ್ಮ ಅಧ್ಯಕ್ಷತೆ ವಹಿಸಿದ್ದರು. ಯುವ ವಕೀಲ ಶಾಂತೇಶ ಕೋಡ್ಲೆ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿ ಯುವ ಸಂಘಟನೆಯ ಸಾಂಸ್ಕೃತಿಕ ವಿಭಾಗದ ಲವಿತ್ರ, ಸುಜಾತಾ, ಬೃಂದಾ, ಪ್ರಿಯಾಂಕಾ, ಸವ್ಯಾ ವಚನ ಮತ್ತು ಕ್ರಾಂತಿ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.