ADVERTISEMENT

ಬೆಂಗಳೂರ ಉತ್ತರಕ್ಕೆ ಪ್ರಶಸ್ತಿ ಮೈಸೂರಿಗೆ ನಿರಾಸೆ

ಎರಡು ದಿನಗಳ ಬ್ಯಾಸ್ಕೆಟ್‌ಬಾಲ್‌ ಟೂರ್ನಿ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:46 IST
Last Updated 22 ಅಕ್ಟೋಬರ್ 2024, 15:46 IST
 ಕಲಬುರಗಿ‌ಯ ಚಂದ್ರಶೇಖರ ಪಾಟೀಲ ಕ್ರಿಡಾಂಗಣದಲ್ಲಿ ಮಂಗಳವಾರ ಪದವಿ ಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಉತ್ತರ ಹಾಗೂ ಮೈಸೂರು ತಂಡಗಳ ನಡುವೆ ಪೈಪೋಟಿ ನಡೆಯಿತು. ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿ‌ಯ ಚಂದ್ರಶೇಖರ ಪಾಟೀಲ ಕ್ರಿಡಾಂಗಣದಲ್ಲಿ ಮಂಗಳವಾರ ಪದವಿ ಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಉತ್ತರ ಹಾಗೂ ಮೈಸೂರು ತಂಡಗಳ ನಡುವೆ ಪೈಪೋಟಿ ನಡೆಯಿತು. ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲಕ–ಬಾಲಕಿಯರ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಫೈನಲ್‌ ಪಂದ್ಯಗಳಲ್ಲಿ ಬೆಂಗಳೂರು ಉತ್ತರ ತಂಡಗಳು ಪಾರಮ್ಯ ಸಾಧಿಸಿದವು.

ಫೈನಲ್‌ ಪಂದ್ಯಗಳಲ್ಲಿ ಆಟಗಾರರು ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದರು. ಗೆದ್ದ ತಂಡಗಳಿಗೆ ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಪ್ರಶಸ್ತಿ ಹಾಗೂ ಪ್ರಮಾಣಪತ್ರ ವಿತರಿಸಿದರು. ಈ ಮೂಲಕ ಎರಡು ದಿನಗಳ ಟೂರ್ನಿಗೆ ತೆರೆ ಎಳೆಯಲಾಯಿತು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಬೆಂಗಳೂರು ಉತ್ತರ ತಂಡವು, ಆರಂಭದಿಂದಲೇ ಮುನ್ನಡೆ ಸಾಧಿಸಿತು. ಮೈಸೂರು ತಂಡವು ಉತ್ತಮ ಪ್ರತಿರೋಧ ಒಡ್ಡಿತಾದರೂ ಎದುರಾಳಿ ತಂಡದ ಓಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಮೈಸೂರು ತಂಡವು ಅಂತಿಮವಾಗಿ ಸೋಲೊಪ್ಪಿಕೊಳ್ಳುವ 2ನೇ ಸ್ಥಾನದಲ್ಲಿ ಉಳಿಯಿತು.

ADVERTISEMENT

ಸೆಮಿಯಲ್ಲಿ ವಿಜಯಪುರ, ದಾವಣಗೆರೆ ತಂಡಗಳಿಗೆ ನಿರಾಸೆ: ಮಂಗಳವಾರ ನಡೆದ ಬಾಲಕರ ಮೊದಲ ಸೆಮಿಫೈನಲ್‌ನಲ್ಲಿ ಬೆಂಗಳೂರು ಉತ್ತರ ತಂಡವು ವಿಜಯಪುರ ತಂಡವನ್ನು 51–13ರಿಂದ ಸುಲಭವಾಗಿ ಸೋಲಿಸುವ ಮೂಲಕ ಪ್ರಶಸ್ತಿ ಹಂತಕ್ಕೇರಿತು. ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮೈಸೂರು ತಂಡವು, ದಾವಣಗೆರೆ ತಂಡವನ್ನು 45–15ರಿಂದ ಸುಲಭವಾಗಿ ಸೋಲಿಸಿ, ಫೈನಲ್‌ಗೇರಿತು.

ಬಾಲಕಿಯರ ಫೈನಲ್‌: ಫೈನಲ್ ಪಂದ್ಯದಲ್ಲಿ ಬೆಂಗಳೂರು ಉತ್ತರ ತಂಡದವರು, ಬೆಂಗಳೂರು ದಕ್ಷಿಣ ತಂಡವನ್ನು ಪರಾಭವಗೊಳಿಸುವ ಮೂಲಕ ಪ್ರಶಸ್ತಿ ಬಾಚಿಕೊಂಡರು.

ಕೊನೆಕ್ಷಣದಲ್ಲಿ ಸೋತ ಮೈಸೂರು ಬಾಲಕಿಯರು: ಬಾಲಕಿಯರ ಸೆಮಿಫೈನಲ್‌ ರೋಚಕ ಹಣಾಹಣಿಯಲ್ಲಿ ಮೈಸೂರು ಬಾಲಕಿಯರು ಸೋಲುವ ಮೂಲಕ ಪ್ರಶಸ್ತಿ ಸುತ್ತಿನಿಂದ ಹೊರನಡೆದರು. ಪಂದ್ಯ ಆರಂಭವಾದಾಗಿನಿಂದಲೂ ಮುನ್ನಡೆ ಸಾಧಿಸಿದ್ದ ಮೈಸೂರು ಬಾಲಕಿಯರು, ಕೊನೆಯಲ್ಲಿ ಮಾಡಿದ ಸ್ವಯಂಕೃತ ತಪ್ಪುಗಳಿಂದಾಗಿ ಸೋಲನುಭವಿಸಿದರು.

ಪಂದ್ಯದ ಅಂತಿಮ ಅವಧಿಯಲ್ಲಿ ಮೈಸೂರು ಆಟಗಾರ್ತಿಯರು, ಎರಡು ನಿಮಿಷಗಳು ಬಾಕಿಯಿರುವಾಗ 48–42ರಿಂದ ಮುನ್ನಡೆಯಲ್ಲಿದ್ದರು. ಆದರೆ ಈ ವೇಳೆ ದೊರೆತ ಫ್ರೀ ಥ್ರೋಗಳನ್ನು ಕೈಚೆಲ್ಲಿದರು. ಅಲ್ಲದೇ ಫೌಲ್‌ ಮಾಡುವ ಮೂಲಕ ಎದುರಾಳಿ ಬೆಂಗಳೂರು ದಕ್ಷಿಣ ತಂಡಕ್ಕೆ ಫ್ರೀ ಥ್ರೋಗಳನ್ನು ನೀಡಿದರು. ಬೆಂಗಳೂರು ದಕ್ಷಿಣ ತಂಡವು ಸದ್ಬಳಕೆ ಮಾಡಿಕೊಂಡು, ಕೊನೆಯ 55 ಸೆಕೆಂಡುಗಳಿದ್ದಾಗ 50–50ರಿಂದ ಸಮಬಲ ಮಾಡಿಕೊಂಡಿತು. ಅಂತಿಮವಾಗಿ ಕೊನೆಯಲ್ಲಿ ಕೆಲವೇ ಸೆಕೆಂಡು ಉಳಿದಿದ್ದಾಗ ಮೇಲುಗೈ ಸಾಧಿಸಿದ ಬೆಂಗಳೂರು ದಕ್ಷಿಣ ತಂಡ ಒಂದು ಗೋಲು ಗಳಿಸುವ ಮೂಲಕ 50–51ರಿಂದ ಗೆಲುವನ್ನು ತನ್ನದಾಗಿಸಿಕೊಂಡು ಫೈನಲ್‌ಗೇರಿತು.

ಕೋಲಾರಕ್ಕೆ ಸೋಲು: ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬೆಂಗಳೂರು ಉತ್ತರ ತಂಡದ ಬಾಲಕಿಯರು, ಕೋಲಾರ ತಂಡವನ್ನು 37–07ರಿಂದ ಸೋಲಿಸಿದರು.

ಆಟಗಾರರಿಗೆ ಬಿರಿಯಾನಿ ಊಟ: ಮಂಗಳವಾರ ಮುಕ್ತಾಯಗೊಂಡ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಇಲಾಖೆ ವತಿಯಿಂದ ಆಟಗಾರರು ಹಾಗೂ ರೆಫರಿಗಳಿಗಾಗಿ ಊಟಕ್ಕೆ ಚಿಕನ್‌ ಬಿರಿಯಾನಿ ಸಿದ್ಧಪಡಿಸಿದ್ದರು. ಸೆಮಿಯಲ್ಲಿ ದಕ್ಷಿಣ ಕರ್ನಾಟಕ ತಂಡಗಳೇ ಉಳಿದಿದ್ದರಿಂದ ಬಾಯಿಚಪ್ಪರಿಸಿದರು.

ಸಿಪಿಐ ಮಹಾಂತೇಶ ಪಾಟೀಲ ಫೈನಲ್‌ ಪಂದ್ಯಕ್ಕೆ ಚಾಲನೆ ನೀಡಿದರು. ರೆಫರಿಗಳಾದ ಶಂಕರ ಸೂರೆ, ಆಸೀಫ್‌ ಖಾನ್‌, ಭೀಮಾಶಂಕರ ಮಠಪತಿ, ಪ್ರವೀಣ ಪುಣೆ, ಧನಂಜಯ ಬೆನ್ನೂರ, ವಿಜಯಕುಮಾರ ಸಿಂದಗಿ, ಬಿ.ಎನ್‌.ಪಾಟೀಲ, ಚಂದ್ರಕಾಂತ ಶಿರೋಳಿ, ಸುರೇಶ ಪವಾರ, ಚಂದ್ರಕಾಂತ, ಗೋಪಾಲ, ದೇವೇಂದ್ರ, ಶಿವಕುಮಾರ ಸಜ್ಜನ, ಸನ್ನಿ, ರಮೇಶ, ಶಾಹೀದ್‌, ಸದಾಶಿವ ಕೋಟಿಹಾಳ, ಕಿರಣಕುಮಾರ, ಶಶಿ, ಕಿಶನ್‌, ಮೃತ್ಯುಂಜಯ, ಚೇತನ, ಪ್ರೇಕ್ಷಕರು ಹಾಜರಿದ್ದರು.

ಕಲಬುರಗಿ‌ಯ ಚಂದ್ರಶೇಖರ ಪಾಟೀಲ ಕ್ರಿಡಾಂಗಣದಲ್ಲಿ ಮಂಗಳವಾರ ಪದವಿಪೂರ್ವ ಕಾಲೇಜುಗಳ ಬಾಲಕ–ಬಾಲಕಿಯರ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಂಡಗಳ ನಡುವೆ ಪೈಪೋಟಿ ನಡೆಯಿತು. ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.