ಕಲಬುರಗಿ: ‘ಗೋವಾದಲ್ಲಿ ನ.13ರಿಂದ 15ರವರೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನದಲ್ಲಿ ನಗರದ ಎಸ್‌ಆರ್‌ಎನ್ ಮೆಹತಾ ಶಾಲೆಗೆ ‘ಬೆಸ್ಟ್ ನ್ಯಾಷನಲ್ ಇನೋವೇಷನ್ ಅವಾರ್ಡ್’ ಮತ್ತು ಚಿನ್ನದ ಪದಕ ಲಭಿಸಿದೆ’ ಎಂದು ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಪ್ರೀತಮ್ ಮೆಹತಾ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಎನ್‌ಇಎಕ್ಸ್– ಇಂಡಿಯಾ ಇಂಟರ್‌ನ್ಯಾಷನಲ್ ಇನೋವೇಷನ್ ಆ್ಯಂಡ್ ಇನ್‌ವೆನ್ಶನ್ ಎಕ್ಸ್‌ಪೊ ವತಿಯಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಮೆಹತಾ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಸ್ಮಿತಾ ಅಲೇಗಾಂವ್ ಮತ್ತು ವೇದಾ ಮಸಳಿ ಅವರು ಶಿಕ್ಷಕಿ ಸುಮಯ್ಯಾ ಖಾನ್ ಅವರ ನೇತೃತ್ವದಲ್ಲಿ ಪಾಲ್ಗೊಂಡಿದ್ದರು. ‘ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ’ ಕುರಿತ ಪ್ರಾಜೆಕ್ಟ್ ಪ್ರದರ್ಶಿಸಿ ಪ್ರಶಸ್ತಿ ಪಡೆದಿದ್ದಾರೆ’ ಎಂದರು.
‘ನಮ್ಮ ಪ್ರಾಜೆಕ್ಟ್ ಪ್ರಕೃತಿ ಸ್ನೇಹಿಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಬಹುದಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಈ ಯಂತ್ರದಲ್ಲಿ ಹಾಕಬಹುದು. ಯಂತ್ರವು ವಿವಿಧ ಸಂವೇದನೆಗಳನ್ನು ಹೊಂದಿದೆ. ಉತ್ಪನ್ನದ ಗಾತ್ರ ಮತ್ತು ತೂಕವನ್ನು ಗುರುತಿಸುತ್ತದೆ. ನಮ್ಮ ಭೂಮಿಯನ್ನು ಸಂರಕ್ಷಿಸುವಲ್ಲಿ ನೆರವಾಗುತ್ತದೆ’ ಎಂದು ತಿಳಿಸಿದರು.
‘ಯಾವುದೇ ವಯಸ್ಸಿನ ಮಿತಿ ಇರದ ಕಾರಣ ಶಾಲೆ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಥಿಗಳು ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದರು. ದೇಶದಾದ್ಯಂತ ಆಯ್ಕೆಯಾದ 60ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳು ಬಂದಿದ್ದವು. ಇಂತಹ ಕಠಿಣ ಸ್ಪರ್ಧೆ ನಡುವೆ ನಮ್ಮ ವಿದ್ಯಾರ್ಥಿಗಳ ಕಾರ್ಯ ಪರಿಕಲ್ಪನೆ ಮತ್ತು ಆಲೋಚನೆಗಳನ್ನು ಗುರುತಿಸಿ ಪ್ರಶಂಸಿಸಲಾಗಿದೆ’ ಎಂದು ಸಂತೋಷ ಹಂಚಿಕೊಂಡರು.
ಪ್ರಾಂಶುಪಾಲರಾದ ಪ್ರೀತಿ ಮೆಹತಾ, ಟ್ರಸ್ಟಿ ಚಕೋರ ಮೆಹತಾ, ಸುಮಯ್ಯಾ ಖಾನ್, ವಿದ್ಯಾರ್ಥಿನಿಯರಾದ ಸ್ಮಿತಾ ಅಲೇಗಾಂವ್ ಮತ್ತು ವೇದಾ ಮಸಳಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.