ಕಲಬುರ್ಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸೋಮವಾರ ಕರೆ ನೀಡಲಾದ ಭಾರತ್ ಬಂದ್‌ಗೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲೆಯ ಬಹುತೇಕ ತಾಲ್ಲೂಕು ಕೇಂದ್ರ, ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ಸಂಚಾರ ಸಹಜವಾಗಿ ಓಡಾಡಿದವು. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರಿದಿದ್ದವು. ರೈತಪರ ಸಂಘಟನೆಗಳು, ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳ ಮುಖಂಡರು ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಎತ್ತಿನ ಗಾಡಿ ಮೆರವಣಿಗೆ
ಅಫಜಲಪುರ: ಭಾರತ್ ಬಂದ್ ಬೆಂಬಲಿಸಿ ಅಫಜಲಪುರದಲ್ಲಿ ವಿವಿಧ ರೈತಪರ ಸಂಘಟನೆಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿಯಾಗಿವೆ. ಇಲ್ಲಿಯವರೆಗೆ ಸರ್ಕಾರಗಳು ರೈತರಿಗೆ ಯಾವುದೇ ಶಾಶ್ವತ ಪರಿಹಾರ ನೀಡುವಂತಹ ಕಾರ್ಯಕ್ರಮ ರೂಪಿಸಿಲ್ಲ. ಕಬ್ಬಿಗೆ ನಿಗದಿ ಮಾಡಿರುವ ಎಫ್‌ಆರ್‌ಪಿ ದರ ಅವೈಜ್ಞಾನಿಕವಾಗಿದೆ. ಅದನ್ನು ಮರು ಪರಿಶೀಲಿಸಿ ₹ 3500ಕ್ಕೆ ನಿಗದಿ ಮಾಡಬೇಕು. ಜಮೀನಿನಲ್ಲಿ ಇರುವ ಮನೆಗಳಿಗೆ ರಾತ್ರಿ ಹೊತ್ತು ವಿದ್ಯುತ್ ಪೂರೈಕೆ ಮಾಡಬೇಕು. ಕಳೆದ ವರ್ಷ ಭೀಮಾನದಿ ಪ್ರವಾಹದಿಂದ ಬೆಳೆ ಹಾಳಾಗಿದ್ದು, ಇನ್ನೂ ಪರಿಹಾರ ನೀಡಿಲ್ಲ. ರಸಗೊಬ್ಬರ, ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದರು.
ರೈತ ಮುಖಂಡರಾದ ಸದಾಶಿವ ಮೇತ್ರೆ, ರಾಜು ಆರೇಕರ, ಖೇಮಸಿಂಗ ರಾಠೋಡ್ ಮಾತನಾಡಿ, ಎರಡೂ ಸರ್ಕಾರಗಳಿಗೆ ಕಣ್ಣು ಮತ್ತು ಕಿವಿ ಇಲ್ಲ. ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಕೃಷಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ರೈತ ಮುಖಂಡರು ಎತ್ತಿನ ಗಾಡಿ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಹಾದೇವಪ್ಪ ಶೇರಿಕಾರ, ಭಾಗಣ್ಣ ಕುಂಬಾರ, ರಾಜು ಉಂಡಿ, ಬಸವರಾಜ ಗಾಣೂರ, ದರ್ಶನ ಸಾಲೂಟಗಿ, ಅಶೋಕ ಹೂಗಾರ, ಸುನೀಲ ಹೊಸಮನಿ, ಹನುಮಂತರಾಯ ಬಿರಾದಾರ, ಮಲ್ಲು ಬಳೂರ್ಗಿ, ಗೌಡಪ್ಪ ಗೌಡ ಪಾಟೀಲ, ಶರಣ ಬಸು ನಾಯಿಕೆರಿ, ಭೀಮರಾಯಗೌಡ, ನಿಂಗಣ್ಣ, ಬಸವರಾಜ ಹೇರೂರ, ಸಂಜು ಸೋಲಾಪೂರ, ಶಿವಶರಣಗೌಡ ಕೇಸಾಪುರ, ಅರ್ಜುನ ಇದ್ದರು.
‘ನೂತನ ಕೃಷಿ ಕಾಯ್ದೆ ರದ್ದುಪಡಿಸಿ’
ಚಿತ್ತಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಬೆಂಬಲಿಸಿ ಪಟ್ಟಣದಲ್ಲಿ ನವ ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು.
ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹೆಚ್ಚಳ ತಡೆಯಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತಕ್ಷಣ ಮುಂದಾಗಬೇಕು. ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಸಂಭವಿಸಿದ ರೈತರಿಗೆ ತಕ್ಷಣವೇ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಮುಖ್ಯ ಬೀದಿಯ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತ ಸಂಘದ ಕಾರ್ಯಕರ್ತರು, ಗ್ರೇಡ್-2 ತಹಶೀಲ್ದಾರ್ ರವೀಂದ್ರ ಧಾಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕಮರವಾಡಿ, ನಾಲವಾರ ವಲಯ ಘಟಕದ ಅಧ್ಯಕ್ಷ ಎಂ.ಡಿ ಗೌಸ್, ರಾವೂರ ವಲಯ ಅಧ್ಯಕ್ಷ ಗುರು ಗುತ್ತೇದಾರ, ದಿಗ್ಗಾಂವ ವಲಯ ಅಧ್ಯಕ್ಷ ಮಲ್ಲಪ್ಪ ಹೊನ್ನಪ್ಪನೋರ, ವಾಡಿ ವಲಯ ಅಧ್ಯಕ್ಷ ಸಿದ್ದು ಪೂಜಾರಿ, ಕರವೇ ಅಧ್ಯಕ್ಷ ನರಹರಿ ಕುಲಕರ್ಣಿ, ಶ್ರೀನಿವಾಸ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.