ADVERTISEMENT

ಎಂ.ಡಿ ಪರೀಕ್ಷೆ ಬರೆದ ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ!

​ಪ್ರಜಾವಾಣಿ ವಾರ್ತೆ
Published 8 ಮೇ 2019, 9:09 IST
Last Updated 8 ಮೇ 2019, 9:09 IST
ಪರೀಕ್ಷೆ ಬಳಿಕ ಸಹಪಾಠಿಗಳೊಂದಿಗೆ ಚರ್ಚೆ ನಡೆಸಿದ ಡಾ.ಅವಿನಾಶ ಜಾಧವ (ಎಡದಿಂದ ಎರಡನೆಯವರು)
ಪರೀಕ್ಷೆ ಬಳಿಕ ಸಹಪಾಠಿಗಳೊಂದಿಗೆ ಚರ್ಚೆ ನಡೆಸಿದ ಡಾ.ಅವಿನಾಶ ಜಾಧವ (ಎಡದಿಂದ ಎರಡನೆಯವರು)   

ಕಲಬುರ್ಗಿ: ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ ಅವರು ಇಲ್ಲಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿ (ಎಂಆರ್‌ಎಂಸಿ)ನಲ್ಲಿ ಬುಧವಾರ ಸ್ನಾತಕೋತ್ತರ ವೈದ್ಯಕೀಯ (ಎಂ.ಡಿ) ಪರೀಕ್ಷೆಗೆ ಹಾಜರಾದರು.

ಒಟ್ಟು ನಾಲ್ಕು ಪತ್ರಿಕೆಗಳ ಪೈಕಿ ಮೊದಲ ದಿನದ ಮೆಡಿಸಿನ್ ಪತ್ರಿಕೆಯನ್ನು ಬರೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯ ಒತ್ತಡದ ನಡುವೆಯೂ ಪರೀಕ್ಷೆ ಬರೆದಿದ್ದೇನೆ. ಇನ್ನೂ ಮೂರು ಪತ್ರಿಕೆಗಳು ಬಾಕಿ ಇವೆ. ಆದರೆ, ನನಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮುಂದಿನ ಬಾರಿ ಉಳಿದ ಮೂರು ಪತ್ರಿಕೆಗಳ ಪರೀಕ್ಷೆ ಬರೆಯುತ್ತೇನೆ’ ಎಂದು ಹೇಳಿದರು.

‘ನಿಮ್ಮ ತಂದೆ ಡಾ.ಉಮೇಶ ಜಾಧವ ಅವರು ₹50 ಕೋಟಿಗೆ ಮಾರಾಟವಾಗಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರಲ್ಲ’ ಎಂಬ ಪ್ರಶ್ನೆಗೆ, ‘ನಮ್ಮ ತಂದೆ ಯಾರಿಂದಲೂ ನಯಾಪೈಸೆ ಹಣ ಪಡೆದಿಲ್ಲ. ಈ ವಿಷಯ ನನ್ನ ಪರೀಕ್ಷೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಆದರೆ, ನನ್ನ ಸಹೋದರಿ ಮೇಲೆ ಈ ವಿಷಯ ಪ್ರಭಾವ ಬೀರಿದ್ದರಿಂದ ಆಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಾಳೆ’ ಎಂದರು.

ADVERTISEMENT

‘ಗುಲಬರ್ಗಾ’ ಲೋಕಸಭೆ ಚುನಾವಣೆ ಮತ್ತು ಚಿಂಚೋಳಿ ಉಪ ಚುನಾವಣೆ ಪ್ರಚಾರದಲ್ಲಿ ನಿರತನಾಗಿದ್ದರಿಂದ ಓದಲು ಸಾಧ್ಯವಾಗಿಲ್ಲ. ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಮತಯಾಚಿಸುತ್ತಿದ್ದೇನೆ. ಉಪ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನ ಕೈಹಿಡಿಯುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.