ಆಳಂದ: ‘ರಾಜ್ಯ ಸರ್ಕಾರ ಒಂದು ವರ್ಗವನ್ನು ಸಮಾಧಾನ ಪಡಿಸುವುದಕ್ಕಾಗಿ ಸರ್ಕಾರಿ ಭೂಮಿಗಳನ್ನು ವಕ್ಫ್ ಭೂಮಿ ಎಂದು ನಮೂದಿಸಲು ಆದೇಶ ನೀಡಿದೆ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ. 1974ರ ಗೆಜೆಟ್ ರದ್ದುಪಡಿಸಲು ಚಳವಳಿ ನಡೆಸಲಾಗುವುದು’ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಎಚ್ಚರಿಸಿದರು.
ಮಂಗಳವಾರ ಆಳಂದ ಪಟ್ಟಣದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ವಕ್ಫ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಕಾಂಗ್ರೆಸ್ ಸರ್ಕಾರ ಮತ್ತು ವಕ್ಫ್ ಬೋರ್ಡ್ ‘ಲ್ಯಾಂಡ್ ಜಿಹಾದ್’ ಯತ್ನ ಆರಂಭಿಸಿ ಬಡ ರೈತರ ಜಮೀನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ. ಭೂಸ್ವಾಧೀನಕ್ಕೆ ಅನುಕೂಲ ಮಾಡಿಕೊಡುವ ಬದಲು ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಜಂಟಿ ಸಲಹಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸಬೇಕು. ಯಾರೂ ನಿರಂಕುಶವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಲಬುರಗಿ ಜಿಲ್ಲೆಯ ದೇವಸ್ಥಾನಗಳು ಮತ್ತು ಧಾರ್ಮಿಕ ಸ್ಥಳಗಳು ವಕ್ಫ್ ಬೋರ್ಡ್ ಆಸ್ತಿಯಾಗಿ ಸೇರ್ಪಡೆಯು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ಪಾಕಿಸ್ತಾನದ ಪರ ಘೋಷಣೆಗಳು ನಡೆದಿವೆ ಮತ್ತು ಹಿಂದೂ ಮಹಿಳೆಯರನ್ನು ಲವ್ ಜಿಹಾದ್‌ನಲ್ಲಿ ಗುರಿಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಈಗ ಲ್ಯಾಂಡ್ ಜಿಹಾದ್ ಶುರುವಾಗಿದೆ. ಕಳೆದ ತಿಂಗಳು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಅಧಿಕೃತ ದಾಖಲೆಗಳಲ್ಲಿ ಕೆಲವು ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲು ಮೌಖಿಕ ಸೂಚನೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಸರ್ಕಾರ ನಡೆಸುತ್ತಿರುವ ರೈತರ ಜಮೀನಿನ ಮೇಲಿನ ಅತಿಕ್ರಮಣವಾಗಿದೆ’ ಎಂದು ಆಪಾದಿಸಿದರು.
ಕೊಪ್ಪಳದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಂದು ಟಿಪ್ಪು ಸುಲ್ತಾನ್‌ನಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು. ‘ವಕ್ಫ್ ಆಸ್ತಿ ನೋಂದಣಿ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯ ಭೂ ಜಿಹಾದ್ ಕ್ರಮಗಳಿಂದಾಗಿ ರೈತರ ಆಕ್ರೋಶದ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ‘ಆಳಂದ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಮಠ, ಮಂದಿರ, ದೇವಸ್ಥಾನ, ಸರ್ಕಾರಿ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ವಿವಿಧ ಗ್ರಾಮಗಳ ರೈತರ ಜಮೀನು ಸಹ ವಕ್ಪ್ ಆಸ್ತಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಭಕ್ತರು, ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಸರ್ಕಾರ ತಕ್ಷಣ ಪಹಣಿಯಲ್ಲಿನ ವಕ್ಪ್ ಹೆಸರು ತೆಗೆದು ಹಾಕಬೇಕು’ ಎಂದು ಆಗ್ರಹಸಿದರು.
‘ಆಳಂದ ಪಟ್ಟಣದಲ್ಲಿ 70 ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಬದಲಾಯಿಸಿದ್ದಾರೆ. ಸಾವಳೇಶ್ವರ ಬೀರದೇವರ ದೇವಸ್ಥಾನ, ತೀರ್ಥ, ಕೊಡಲ ಹಂಗರಗಾ, ಹೆಬಳಿ, ಕಡಗಂಚಿ, ಆಲೂರು ಮತ್ತಿತರ ಗ್ರಾಮಗಳಲ್ಲಿನ ದೇವಸ್ಥಾನ ಹಾಗೂ ರೈತರ ಪಹಣಿಯಲ್ಲಿ ವಕ್ಪ್ ಸೇರಿಸಲಾಗಿದೆ. ರಾಜ್ಯ ಸರ್ಕಾರದ ಮತಬ್ಯಾಂಕ್‌ಗಾಗಿ ಓಲೈಕೆ ರಾಜಕಾರಣ ನಿಲ್ಲಿಸಬೇಕು. ಕಾಂಗ್ರೆಸ್ ದುರಾಡಳಿತದ ವಿರುದ್ಧ ನಿರಂತರ ಹೋರಾಟ ನಡೆಸಲಾಗವುದು’ ಎಂದರು.
ಮುಖಂಡರಾದ ವೀರಣ್ಣಾ ಮಂಗಾಣೆ, ಬಸವರಾಜ ಬಿರಾದಾರ, ಅವ್ವಣ್ಣಾ ಮ್ಯಾಕೇರಿ, ಶಿವಪುತ್ರ ನಡಗೇರಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ದಿಲೀಪ ಪಾಟೀಲ, ಬೀರಣ್ಣ ವಗ್ಗೆ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮಾಜಿ ಅಧ್ಯಕ್ಷ ಆನಂದರಾವ ಪಾಟೀಲ, ಸಂತೋಷ ಹಾದಿಮನಿ, ಕೆಕೆಆರ್‌ಟಿಸಿ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಕಾಂತ ಭೂಸನೂರ, ಲಿಂಗರಾಜ ಬಿರಾದಾರ, ಆನಂದರಾವ ಗಾಯಕವಾಡ, ಆದಿನಾಥ ಹೀರಾ, ಭೋಜರಾಜ ಜುಬ್ರೆ, ನಿಂಗಣ್ಣ ಪೂಜಾರಿ, ಪರಮೇಶ್ವರ ಅಲಗೂಡ, ಬಾಬುರಾವ ಸರಡಗಿ, ಗುಂಡಪ್ಪ ಪೂಜಾರಿ, ಅಣ್ಣಪ್ಪ ತಳಕೇರಿ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಬಿರಾದಾರ, ಸುನೀಲ ಹಿರೋಳಿಕರ ಭಾಗವಹಿಸಿದ್ದರು.
ಮುಖ್ಯರಸ್ತೆ ಸಂಚಾರ ತಡೆ
ಪಟ್ಟಣದ ಬಸ್ ನಿಲ್ದಾಣದ ಎದುರಿನ ಆಳಂದ- ಕಲಬುರಗಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಡಿವೈಎಸ್‌ಪಿ ಗೋಪಿ, ಸಿಪಿಐ ಪ್ರಕಾಶ ಯಾತನೂರು ನೇತೃತ್ವದಲ್ಲಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ತಹಶೀಲ್ದಾರ್ ಅಣ್ಣಾರಾವ ಪಾಟೀಲ ಅವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಸಾವಳೇಶ್ವರ ಗ್ರಾಮಕ್ಕೆ ಭೇಟಿ
ತಾಲ್ಲೂಕಿನ ಸಾವಳೇಶ್ವರ ಗ್ರಾಮದಲ್ಲಿನ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನು ಪಹಣಿಯಲ್ಲಿ ವಕ್ಪ್ ಆಸ್ತಿಗೆ ಸೇರ್ಪಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರ ನಿಯೋಗವು ಮಾಜಿ ಶಾಸಕ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ದೇವಸ್ಥಾನ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.