ADVERTISEMENT

ಖರ್ಗೆ ಅವರದ್ದು ಸುಳ್ಳು ಲೆಕ್ಕ: ಸಂಸದ ಡಾ.ಉಮೇಶ ಜಾಧವ

ಇಎಸ್‌ಐಗಿಂತ ಕಡಿಮೆ ದುಡ್ಡಲ್ಲಿ ಹೊಸ ಸಂಸತ್ ಭವನ ನಿರ್ಮಾಣ: ಜಾಧವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 5:06 IST
Last Updated 14 ಏಪ್ರಿಲ್ 2024, 5:06 IST
ಜೇವರ್ಗಿ ತಾಲ್ಲೂಕಿನ ನೆಲೋಗಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖಂಡ ನಿತಿನ್ ಗುತ್ತೇದಾರ ಮಾತನಾಡಿದರು. ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಜೇವರ್ಗಿ ತಾಲ್ಲೂಕಿನ ನೆಲೋಗಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖಂಡ ನಿತಿನ್ ಗುತ್ತೇದಾರ ಮಾತನಾಡಿದರು. ಪಕ್ಷದ ಮುಖಂಡರು ಉಪಸ್ಥಿತರಿದ್ದರು   

ಕಲಬುರಗಿ: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಳ್ಳು ಲೆಕ್ಕ ಮಂಡಿಸುತ್ತಿದ್ದಾರೆ. ಖರ್ಗೆ ಅವರು 2009ರಲ್ಲಿ ₹1,800 ಕೋಟಿಯಲ್ಲಿ ಇಎಸ್‌ಐ ಆಸ್ಪತ್ರೆ ಕಟ್ಟಿಸಿದ್ದರೂ ಅದರಲ್ಲಿ ಏನು ಇರಲಿಲ್ಲ. ಆದರೆ ಪ್ರಧಾನಿ ಮೋದಿ ಅವರು ₹800 ಕೋಟಿಯಷ್ಟಯ ಕಡಿಮೆ ಹಣದಲ್ಲಿ ದೊಡ್ಡದಾದ ನೂತನ ಸಂಸತ್ ಭವನವನ್ನು ನಿರ್ಮಿಸಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಡಾ.ಉಮೇಶ ಜಾಧವ ಕುಟುಕಿದರು.

ಜೇವರ್ಗಿ ತಾಲ್ಲೂಕಿನ ನೆಲೋಗಿ ಮಹಾಶಕ್ತಿ ಕೇಂದ್ರದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದಾಗಿ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ದುಪ್ಪಟ್ಟು ಖರ್ಚು ಮಾಡಿ ಇಎಸ್‌ಐ ಆಸ್ಪತ್ರೆ ಕಟ್ಟಡ ಕಟ್ಟಿಸಿದ್ದಾರೆ’ ಎಂದು ಆರೋಪಿಸಿದರು.

‘ಇಎಸ್ಐ ಆಸ್ಪತ್ರೆಯನ್ನು ಏಮ್ಸ್ ಮಟ್ಟಕ್ಕೆ ಏರಿಸುವಂತೆ ಪ್ರಧಾನಿಗೆ ಹೇಳಿದರೂ ಮಾಡಲಿಲ್ಲವೆಂದು ಖರ್ಗೆ ಅವರು ದೂರುತ್ತಾರೆ. ಆದರೆ, ಇಎಸ್ಐ ಆಸ್ಪತ್ರೆಯನ್ನೇ ಏಮ್ಸ್ ಮಾಡುವುದನ್ನು ಬಿಟ್ಟು ರಾಯಚೂರಲ್ಲಿ ಏಮ್ಸ್ ಮಾಡುವಂತೆ ಶಿಫಾರಸು ಮಾಡಿದ್ದನ್ನು ಖರ್ಗೆ ಅವರು ಮರೆತಿದ್ದಾರೆಯಾ’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೇ ಇವತ್ತು ಕಲಬುರಗಿಯ ತಲಾ ಆದಾಯ ದೇಶದ ಹಿಂದುಳಿದ ಜಿಲ್ಲೆಗಳ ಪಟ್ಟಿಗೆ ಸೇರುತ್ತಿರಲಿಲ್ಲ. ಕಾಂಗ್ರೆಸ್ ಕೇವಲ ಬಡತನದ ಕೊಡುಗೆ ನೀಡಿದೆ’ ಎಂದು ಆರೋಪಿಸಿದರು.

‘ಕಾಶಿ ಕಾರಿಡಾರ್, ಉಜ್ಜಯಿನಿ ಕಾರಿಡಾರ್, ಮೆಡಿಕಲ್ ಕಾಲೇಜು ಶಾಲೆ, ಭಾರತ್ ಮಾಲಾ, ಜಲ್ ಜೀವನ್ ಮಿಷನ್ ಅಭಿವೃದ್ಧಿ ಯೋಜನೆಗಳಲ್ಲವಾ? ಕೋವಿಡ್ ವೇಳೆ ಲಸಿಕೆ ಹಾಗೂ ಔಷಧಿಯನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ಪೂರೈಸಿದ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ’ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಹವಾ ನಿಯಂತ್ರಿತ ಕೋಣೆಯಿಂದ ಈಗಷ್ಟೇ ಹೊರಬಂದಿದ್ದಾರೆ. ಬಿಸಿಲಿನಲ್ಲಿ ನಡೆಯಲು ಆಗದೆ ಮೆರವಣಿಗೆಯೂ ಮಾಡದೆ, ಎನ್‌ವಿ ಮೈದಾನದಿಂದ ನೇರವಾಗಿ ನಾಮಪತ್ರ ಸಲ್ಲಿಸಲು ತೆರಳಿದರು. ಸಮಸ್ಯೆ ಗೊತ್ತಿಲ್ಲದ ಇಂತಹ ಅಭ್ಯರ್ಥಿಗೆ ಮತದಾರರು ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ಸಿಗರು, ಬಿಜೆಪಿ ಸಂವಿಧಾನ ಬದಲಾಯಿಸಲಿದೆ, ಅಂಬೇಡ್ಕರ್‌ಗೆ ಅಗೌರವ ತೋರುತ್ತಿದೆ ಎಂದು ಸುಳ್ಳು ಹೇಳಿ ಜನರನ್ನು ಬೆದರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ನಿತಿನ್ ಗುತ್ತೇದಾರ, ಶೋಭಾ ಬಾಣಿ, ದೇವೇಂದ್ರ ಮುತ್ತುಕೊಡ, ಶಶಿಧರ ಸೂಗೂರು, ರೇವಣಸಿದ್ದಪ್ಪ ಸಂಕಾಲಿ, ಭೀಮರಾವ ಗುಜಗುಡ, ಪ್ರವೀಣ್ ಕುಮಾರ್ ಕುಂಟೋಜಿ, ಬಸವರಾಜ ಬಿರಾದಾರ್, ಸಂತೋಷ್, ಬಾಬು ಬಿ.ಪಾಟೀಲ, ಸಾಯಬಣ್ಣ ಉಪಸ್ಥಿತರಿದ್ದರು.

ಜೇವರ್ಗಿಯ ಶಾಖಾಪುರದ ತಪೋವನ ಮಠದ ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯರನ್ನು ಭೇಟಿಯಾದ ಸಂಸದ ಡಾ.ಉಮೇಶ ಜಾದವ. ಪಕ್ಷದ ಮುಖಂಡರು ಉಪಸ್ಥಿತರಿದ್ದರು

ಶಾಖಾಪುರ ಶ್ರೀಗಳ ಭೇಟಿ

ಶಾಖಾಪುರದ ತಪೋವನ ಮಠದ ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯರನ್ನು ಸಂಸದ ಡಾ.ಉಮೇಶ ಜಾಧವ ಭೇಟಿಯಾಗಿ ಆಶೀರ್ವಾದ ಪಡೆದರು.  ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರ ಜೊತೆ ಮಾತನಾಡಿದ ಜಾಧವ ‘ಜಗದ್ಗುರುಗಳ ಆಶೀರ್ವಾದಿಂದ ಭವಿಷ್ಯದ ಯೋಜನೆಗಳಿಗೆ ಶಕ್ತಿ ಮತ್ತು ಪ್ರೇರಣೆ ಒದಗಿದಂತಾಗಿದೆ. ಸನಾತನ ಹಿಂದೂ ಸಂಸ್ಕೃತಿಯನ್ನು ಕಾಪಾಡಲು ಮಠಮಾನ್ಯಗಳ ಪೂಜ್ಯರ ಆಶೀರ್ವಾದ ಮತ್ತು ಶ್ರೀರಕ್ಷೆ ಜನಪ್ರತಿನಿಧಿಗಳ ಮೇಲೆ ಇರಬೇಕು ಎಂದರು. ಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಆಂದೋಲ ಕರುಣೆಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.