ADVERTISEMENT

ಕಾಂಗ್ರೆಸ್ ಹೈಕಮಾಂಡ್ ಹಲ್ಲು ಇಲ್ಲದ ಹೈಕಮಾಂಡ್: ಎನ್‌.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 10:43 IST
Last Updated 3 ಅಕ್ಟೋಬರ್ 2024, 10:43 IST
<div class="paragraphs"><p>ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್‌.ರವಿಕುಮಾರ್</p></div>

ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್‌.ರವಿಕುಮಾರ್

   

ಕಲಬುರಗಿ: ‘ಕಾಂಗ್ರೆಸ್‌ ಹೈಕಮಾಂಡ್ ಹಲ್ಲು ಇಲ್ಲದ ಹೈಕಮಾಂಡ್ ಆಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲು ಆಗುತ್ತಿಲ್ಲ’ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್‌.ರವಿಕುಮಾರ್ ಟೀಕಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಬಿಜೆಪಿಯಲ್ಲಿ ಏನಾದರು ಸಣ್ಣ–ಪುಟ್ಟ ಬೆಳವಣಿಗೆ ನಡೆದರೆ ರಾಜೀನಾಮೆ ಕೇಳುತ್ತಾರೆ. ಅವರದ್ದೇ ಪಕ್ಷದ ಸಿದ್ದರಾಮಯ್ಯ ಅವರು ದೊಡ್ಡ ಹಗರಣದಲ್ಲಿ ಸಿಲುಕಿದ್ದಾರೆ. ನ್ಯಾಯಾಲಯ ಕೂಡ ತನಿಖೆಗೆ ಆದೇಶಿಸಿದೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲಿ’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರು ನ್ಯಾಯಾಲಯಕ್ಕಿಂತ ಆತ್ಮಸಾಕ್ಷಿ ದೊಡ್ಡದು ಎನ್ನುತ್ತಾರೆ. ಹಾಗಿದ್ದರೆ ನ್ಯಾಯಾಲಯ ಕೊಟ್ಟ ತೀರ್ಪು ತಪ್ಪಾ? ನ್ಯಾಯಾಲಯದ ತೀರ್ಪಿಗೆ ಗೌರವ ಕೊಡುವುದಿಲ್ಲವಾ? ಸಿದ್ದರಾಮಯ್ಯ ಅವರು ಆತ್ಮಸಾಕ್ಷಿ ಎನ್ನುವ ಮೂಲಕ ನ್ಯಾಯಾಲಯ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಆತ್ಮ ಸಂವೇದನೆ, ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವುದು ಇದ್ದರೆ ಮೊದಲು ರಾಜೀನಾಮೆ ಕೊಡಿ’ ಎಂದು ಹೇಳಿದರು.

‘ಮುಡಾ ನಿವೇಶನಗಳ ಹಂಚಿಕೆಯು ತನಿಖಾ ಹಂತದಲ್ಲಿ ಇರುವಾಗ ಮುಡಾ ಪ್ರಾಧಿಕಾರದ ಆಯುಕ್ತರು ಮಿಂಚಿನ ವೇಗದಲ್ಲಿ ಸಿಎಂ ಪತ್ನಿ ಅವರ ಕ್ರಯಪತ್ರವನ್ನು ರದ್ದು ಮಾಡಿದ್ದಾರೆ. ಎರಡು ನ್ಯಾಯಾಲಯಗಳು ತನಿಖೆಗೆ ಆದೇಶಿಸಿರುವಾಗ ನಿವೇಶನಗಳನ್ನು ಹಿಂದಕ್ಕೆ ಪಡೆದಿರುವ ಮುಡಾ ಆಯುಕ್ತ ರಘುನಂದನ್ ಅವರು ನ್ಯಾಯಾಧೀಶರಾ? ತಕ್ಷಣವೇ ಅವರನ್ನು ಅಮಾನತು ಮಾಡಬೇಕು’ ಎಂದರು.

‘ಸಚಿವ ದಿನೇಶ ಗುಂಡೂರಾವ್ ಅವರು ಸಾವರ್ಕರ್ ಅವರು ಆ ಮಾಂಸ, ಈ ಮಾಂಸ ತಿನ್ನುತ್ತಿದ್ದರು ಎಂದು ಹೇಳಿ ಕೊಟ್ಟು ಅವಮಾನ ಮಾಡಿದ್ದಾರೆ. ದಿನೇಶ ಗುಂಡೂರಾವ್‌ ಅವರಿಗೆ ಮತಿಭ್ರಮಣೆ ಆಗಿರಬೇಕು. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಸಾವರ್ಕರ್‌ ಬಗ್ಗೆ ಚರ್ಚಿಸಲು ವೇದಿಕೆ ಮಾಡಿಕೊಡುತ್ತೇವೆ. ಅವರು ಎಂತಹ ಹೋರಾಟ ಮಾಡಿದ್ದರು ಎಂಬುದನ್ನು ಅರ್ಥ ಮಾಡಿಸುತ್ತೇವೆ ಬನ್ನಿ’ ಎಂದು ಆಹ್ವಾನಿಸಿದರು.

‘ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿ ₹2 ಲಕ್ಷ ಕೋಟಿ ಸಾಲ ಮಾಡಿದೆ. ಅಭಿವೃದ್ಧಿ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಶಾಸಕರು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಶಾಸಕರನ್ನು ಸಮಾನಾಗಿ ಕಾಣುವ ಮನಸಿಲ್ಲದ ಸಿದ್ದರಾಮಯ್ಯ ಅವರು ಅತ್ಯಂತ ಕ್ಷುಲ್ಲಕ ಮನಸಿನವರು’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಅಮರನಾಥ ಪಾಟೀಲ, ಮಣಿಕಂಠ ರಾಠೋಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.