ಕಲಬುರಗಿ: ‘ರಾಜಕೀಯ ಕಾರಣಕ್ಕೆ ಚಿಂಚೋಳಿಯ ಸಿದ್ಧಸಿರಿ ಕಾರ್ಖಾನೆಯನ್ನು ಸಚಿವರಾದ ಶಿವಾನಂದ ಪಾಟೀಲ, ಪ್ರಿಯಾಂಕ್ ಖರ್ಗೆ ಹಾಗೂ ಈಶ್ವರ ಖಂಡ್ರೆ ಬಂದ್ ಮಾಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ, ಖಂಡ್ರೆಗೆ ತಾಕತ್ ಇದ್ದರೆ ₹850 ಕೋಟಿ ಕೊಟ್ಟು ಕಾರ್ಖಾನೆ ಖರೀದಿಸಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.
ಇಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಚಿಂಚೋಳಿ ಸಕ್ಕರೆ ಕಾರ್ಖಾನೆ ಮಾರಲು ಹತ್ತು ವರ್ಷಗಳಿಂದ ಟೆಂಡರ್ ಕರೆದರೆ ಒಬ್ಬರೂ ಮುಂದೆ ಬರಲಿಲ್ಲ. ರೈತರಿಗೆ ನೆರವಾಗಲು ನಾನು ₹850 ಕೋಟಿ ಕೊಟ್ಟು ಖರೀದಿಸಿದ್ದೇನೆ. ಈಗ ಮಾಲಿನ್ಯದ ನೆಪವೊಡ್ಡಿ ರಾಜಕೀಯ ಕಾರಣಕ್ಕೆ ಬಂದ್ ಮಾಡಿಸಿದ್ದಾರೆ’ ಎಂದರು.
‘ಖರ್ಗೆ, ಖಂಡ್ರೆ ಅವರಿಗೆ ಹಣದ ಕೊರತೆ ಇದೆಯಾ? ರೈತರ ಉದ್ಧಾರಕ್ಕೆ ಕಾರ್ಖಾನೆ ಖರೀದಿಸಬಹುದಿತ್ತು. ಯಾಕೆ ಖರೀದಿಸಲಿಲ್ಲ? ದೊಡ್ಡ– ದೊಡ್ಡ ರಾಜಕಾರಣಿಗಳು ದುಬೈ, ಮುಂಬೈನಲ್ಲಿ ಆಸ್ತಿ ಮಾಡುತ್ತಾರೆ. ನಾನು ಕಾರ್ಖಾನೆ ತೆರೆದು 15 ಸಾವಿರ ರೈತರಿಗೆ, 2 ಸಾವಿರ ಕಾರ್ಮಿಕರಿಗೆ ಕೆಲಸ ಕೊಟ್ಟಿದ್ದೇನೆ. ಪ್ರತಿ ಟನ್ ಕಬ್ಬಿಗೆ ₹2,600 ದರ ನಿಗದಿಪಡಿಸಿ, 15 ದಿನಗಳ ಒಳಗೆ ಬೆಳೆಗಾರರ ಖಾತೆಗೆ ಹಣ ಜಮೆ ಮಾಡಿದ್ದೇನೆ’ ಎಂದರು.
‘ಈಶ್ವರ ಖಂಡ್ರೆ ಅವರು ಬೆಳೆಗಾರರಿಗೆ ₹2 ಸಾವಿರ ಕೊಟ್ಟು ತಲೆ ಬೋಳಿಸಿದ್ದಾರೆ. ಒಂದು ವರ್ಷವಾದರೂ ಹಣ ಕೊಡುವುದಿಲ್ಲ. ಕಾರ್ಖಾನೆ ಆರಂಭವಾಗದೆ ಇದ್ದರೆ ನಾಲ್ಕೈದು ತಾಲ್ಲೂಕುಗಳಲ್ಲಿ ಅನಾಹುತ ಆಗಲಿದೆ. ಚಿತ್ತಾಪುರ, ಸೇಡಂ, ಚಿಂಚೋಳಿ ತಾಲ್ಲೂಕುಗಳ 20 ಲಕ್ಷ ಟನ್ ಹಾಗೂ ಹುಮನಾಬಾದ್ ತಾಲ್ಲೂಕಿನ 10 ಲಕ್ಷ ಟನ್ ಕಬ್ಬು ನುರಿಸಬೇಕಿದೆ. ಒಂದು ವೇಳೆ ಕಾರ್ಖಾನೆ ಶುರುವಾಗದೆ, ಬೆಳೆಗಾರರು ಏನಾದರು ಆತ್ಮಹತ್ಯೆ ಮಾಡಿಕೊಂಡರೆ ಸಚಿವರ ಮೇಲೆ ಕೇಸ್ ಹಾಕುತ್ತೇನೆ’ ಎಂದು ಎಚ್ಚರಿಸಿದರು.
‘ಸಿದ್ಧಸಿರಿ ಕಾರ್ಖಾನೆಯ ಪ್ರಕರಣ ಬಿಟ್ಟರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಒಂದೇ ಒಂದೂ ಕೇಸ್ ಹೈಕೋರ್ಟ್‌ನಿಂದ ಮುಂದಕ್ಕೆ ಹೋಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ, ಪ್ರಿಯಾಂಕ್ ಖರ್ಗೆ ಹಾಗೂ ಈಶ್ವರ ಖಂಡ್ರೆ ಅವರು ಹಿಂದಿನಿಂದ ಆಟವಾಡುತ್ತಿದ್ದಾರೆ. ಕಾಂಗ್ರೆಸ್ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲವಾ?’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.