ADVERTISEMENT

ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿದ ಬಿಜೆಪಿ ಮುಖಂಡರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 5:13 IST
Last Updated 18 ಜೂನ್ 2024, 5:13 IST
ಕಲಬುರಗಿಯಲ್ಲಿ ಸೋಮವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಸೋಮವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಸೋಮವಾರ ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ನಡೆಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ (ಎಸ್‌ವಿಪಿ) ವೃತ್ತದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದರು. ಎತ್ತಿನ ಬಂಡಿ ಏರಿದ ಕೆಲವು ಮುಖಂಡರು ಎಸ್‌ವಿಪಿ ವೃತ್ತವನ್ನು ಸುತ್ತು ಹಾಕಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜನರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಗ್ಗಿಸುವಂತೆ ಒತ್ತಾಯಿಸಿದರು.

ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಇಂಧನ ದರ ಏರಿಕೆ ಮಾಡಿ, ಜನರ ಹಣವನ್ನು ಲೂಟಿ ಮಾಡುತ್ತಿದೆ. ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರೂ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ದೂರಿದರು.

ADVERTISEMENT

ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದಲ್ಲಾ ಒಂದು ರೀತಿಯಲ್ಲಿ ಜನರಿಗೆ ತೊಂದರೆ ಕೊಡುತ್ತಿದೆ. ಕೊಲೆ, ಸುಲಿಗೆಯಂತಹ ಅಪರಾಧ ಪ್ರಕರಣಗಳು ಹೆಚ್ಚಾಗಿ, ಜನರು ನೆಮ್ಮದಿಯಿಂದ ಬದುಕದಂತೆ ಆಗಿದೆ. ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ’ ಎಂದು ಆರೋಪಿಸಿದರು.

‘ಗ್ಯಾರಂಟಿಗಳ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಬಳಿಕ ತಪ್ಪು ಹಾದಿಯಲ್ಲಿ ನಡೆಯುತ್ತಿದೆ. ಚುನಾವಣೆಗೂ ಮುನ್ನ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದಾಗಿ ಮಾತು ಕೊಟ್ಟು ಈಗ ಮೋಸ ಮಾಡಿ, ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ’ ಎಂದರು.

ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ‘ಅಧಿಕಾರಕ್ಕೆ ಬರುವ ಮುನ್ನ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು, ಚುನಾವಣೆ ಮುಗಿಯುತ್ತಿದ್ದಂತೆ ಜನರ ಕಣ್ಣಿಗೆ ಮಣ್ಣೆರೆಚುತ್ತಿದೆ. ಬೆಲೆ ಏರಿಕೆ ವಿಷಯವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ವ್ಯಾಪಕ ಪ್ರಚಾರ ಮಾಡಿದ್ದರು. ಈಗ ವರಸೆ ಬದಲಿಸಿ ಬೆಲೆ ಹೆಚ್ಚಳ ಮಾಡಿದಕ್ಕೆ ನಾಚಿಕೆ ಆಗಬೇಕು’ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಶಾಸಕ ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮುಖಂಡರಾದ ಅಮರನಾಥ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಬಾಬುರಾವ್ ಚವ್ಹಾಣ್, ಹರ್ಷಾನಂದ ಗುತ್ತೇದಾರ, ಶಿವಕಾಂತ ಮಹಾಜನ್, ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ದೀಲಿಪ ಪಾಟೀಲ, ಶಿವಯೋಗಿ ನಾಗನಹಳ್ಳಿ, ಉಮೇಶ್ ಪಾಟೀಲ, ಬಸವರಾಜ ಮಾಲಿ ಪಾಟೀಲ, ಸುರೇಶ್ ಸಜ್ಜನ್, ಶೋಭಾ ಪಾಟೀಲ, ವಿಜಯಲಕ್ಷ್ಮಿ ಗೊಬ್ಬರಕರ, ರಾಜು ಪಾಟೀಲ ನಾಗನಹಳ್ಳಿ, ಮಹೇಶ್ ರೆಡ್ಡಿ, ಅಣವೀರ ಪಾಟೀಲ, ಮಹಾದೇವ ಬೇಳಮಗಿ, ಶಶಿಧರ ಸೂಗುರ, ಸಂತೋಷ ಹಾದಿಮನಿ, ಬಾಬುರಾವ್ ಹಾಗರಗುಂಡಗಿ ಉಪಸ್ಥಿತರಿದ್ದರು.

‘ತುಘಲಕ್ ಮಾದರಿಯ ಆಡಳಿತ’

ರಾಜ್ಯದಲ್ಲಿ ತುಘಲಕ್ ಮಾದರಿಯ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ. ಬರಗಾಲದಿಂದ ತತ್ತರಿಸಿರುವ ಜನರಿಗೆ ಸಂಕಷ್ಟದಲ್ಲಿ ನೆರವಾಗುವ ಬದಲು ಹೆಚ್ಚಿನ ತೆರಿಗೆ ವಿಧಿಸಿ ಲೂಟಿ ಮಾಡುತ್ತಿದೆ’ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ವಾಗ್ದಾಳಿ ನಡೆಸಿದರು. ‘ಪೆಟ್ರೋಲ್ ಡೀಸೆಲ್ ಮದ್ಯ ವಾಹನ ತೆರಿಗೆ ಸ್ಟಾಂಪ್ ಡ್ಯೂಟಿ ಬೇಳೆ ಕಾಳು ಬಿತ್ತನೆ ಬೀಜದ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರವು ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಜನರ ಸಂಕಷ್ಟದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಬೆಲೆ ಇಳಿಸಬೇಕು. ಇಲ್ಲದೆ ಇದ್ದರೇ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.