ಕಲಬುರಗಿ/ಜೇವರ್ಗಿ: ದಶಕಗಳಿಂದ ಧರ್ಮಸಿಂಗ್ ಕುಟುಂಬದ ಪ್ರಾಬಲ್ಯ ಮತ್ತು ಕಾಂಗ್ರೆಸ್‌ನ ಭದ್ರ ಕೋಟೆಯಾಗಿರುವ ಜೇವರ್ಗಿಯಲ್ಲಿ ಸೋಮವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಅದ್ದೂರಿಯಾಗಿ ನಡೆಯಿತು.
ನೂರಾರು ಕಾರ್ಯಕರ್ತರು ಪಕ್ಷದ ವರಿಷ್ಠರನ್ನು ಬೈಕ್ ರ್‍ಯಾಲಿ ಮೂಲಕ ಕೋಳಕೂರು ಕ್ರಾಸ್‌ನಿಂದ ಪಟ್ಟಣಕ್ಕೆ ಕರೆತಂದರು. ಯಾತ್ರೆಗಾಗಿ ಸಿದ್ಧಪಡಿಸಲಾದ ವಾಹನ ಏರಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಪಟ್ಟಣದ ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಗೆ ಚಾಲನೆ ಸಿಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ‘ರಾಜಹುಲಿ ಯಡಿಯೂರಪ್ಪ...’ ಎಂದು ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಸವೇಶ್ವರ ವೃತ್ತದವರೆಗೆ ನಡೆದ ಮೆರವಣಿಗೆಯ ಮಾರ್ಗದ ಉದ್ದಕ್ಕೂ ಡೊಳ್ಳು, ಹಲಗೆ, ಬ್ಯಾಂಡ್ ಬಾಜಾ ವಾದನ ಕಳೆತಂದವು.
ಬಿಜೆಪಿ ಬಾವುಟ ಹಿಡಿದು, ಪಕ್ಷದ ಹೆಸರಿನ ಕೇಸರಿ ಟೊಪ್ಪಿಗೆ ಹಾಕಿಕೊಂಡಿದ್ದ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಜೈಕಾರ ಕೂಗಿದರು. ರಸ್ತೆ ಉದ್ದಕ್ಕೂ ಬಿಜೆಪಿ ಧ್ವಜ, ಬ್ಯಾನರ್ ರಾರಾಜಿಸಿದವು. ಅಲ್ಲಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಬ್ಯಾನರ್, ಕಟೌಟ್ ಮತ್ತು ಹೋಲ್ಡಿಂಗ್ ಕಂಡು ಬಂದವು.
ಕ್ಷೇತ್ರದ ಮೇಲೆ ಕಣ್ಣಿಟ್ಟು ಟಿಕೆಟ್ ನಿರೀಕ್ಷೆಯಲ್ಲಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡ ರೇವಣಸಿದ್ದಪ್ಪ ಸಂಕಾಲಿ ಮತ್ತು ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶೋಭಾ ಬಾಣಿ ಅವರು ತಮ್ಮ ಬೆಂಬಲಿಗರನ್ನು ಕರೆತಂದು ತಮ್ಮ ಬಲ ಪ್ರದರ್ಶಿಸಿದರು. ದೊಡ್ಡಪ್ಪಗೌಡ ಪಾಟೀಲ ಹಾಗೂ ಶಿವರಾಜ ಪಾಟೀಲ ರದ್ದೇವಾಡಗಿ ಯಾತ್ರೆಯಲ್ಲಿ ವಾಹನ ಏರಿ ಅಭಿಮಾನಿಗಳತ್ತ ಕೈಬಿಸಿದರು.
ಬಸ್ ನಿಲ್ದಾಣ ದಾಟುತ್ತಿದ್ದಂತೆ ದೊಡ್ಡಪ್ಪಗೌಡ ಪಾಟೀಲ ಅವರ ಬೆಂಬಲಿಗರು ತಮ್ಮ ನಾಯಕನನ್ನು ಹೆಗಲ ಮೇಲೆ ಹೊತ್ತು ಕುಣಿದು, ಮುಂದಿನ ಶಾಸಕ ‘ದೊಡ್ಡಪ್ಪಗೌಡ’ ಎಂದು ಕೂಗಿದರು. ಚೀರಾಟ, ಜೈಕಾರ ಜೋರಾಗಿ ಮುಂದೆ ಸಾಗುತ್ತಿದ್ದಂತೆ ಅವರ ಹಿಂದೆಯೇ ರದ್ದೇವಾಡಗಿ ಅವರ ಬೆಂಬಲಿಗರು ತಮ್ಮ ನಾಯಕನನ್ನು ಹೊತ್ತು ಕುಣಿದಾಣಿದರು.
ಒಳ ಜಗಳದಿಂದ ಅಸ್ತಿತ್ವಕ್ಕೆ ಧಕ್ಕೆ: ಯಡಿಯೂರಪ್ಪ ಎಚ್ಚರಿಕೆ
ಯಾತ್ರೆಯುದಕ್ಕೂ ಟಿಕೆಟ್ ಆಕಾಂಕ್ಷಿಗಳ ನಡುವಿನ ಪೈಪೋಟಿ, ಮುನಿಸು ಗಮನಿಸಿದ ಬಿ.ಎಸ್.ಯಡಿಯೂರಪ್ಪ ಅವರು, ‘ಪರಸ್ಪರ ನಾವೇ ಜಗಳವಾಡಿ ನಮ್ಮ ಅಸ್ತಿತ್ವ ಕಳೆದುಕೊಳ್ಳಬಾರದು. ಕೇಂದ್ರದ ವರಿಷ್ಠರು ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲವಿಗಾಗಿ ಶ್ರಮಿಸಬೇಕು’ ಎಂದರು.
‘ಜೇವರ್ಗಿ ಜನರು ತೋರಿದ ಪ್ರೀತಿ, ವಿಶ್ವಾಸ ನೋಡಿದರೆ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಗೆಲ್ಲುವುದು ಖಚಿತ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕಟ್ಟಿದ ಪಕ್ಷ ನಮ್ಮದು. ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಶ್ರಮಿಸೋಣ’ ಎಂದರು.
ಯಾತ್ರೆಯ ವಾಹನದಲ್ಲಿ ವಿಜಯ ಸಂಕಲ್ಪ ಮೂರನೇ ತಂಡದ ನಾಯಕರೂ ಆಗಿರುವ ಶಾಸಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಾರಿಗೆ ಸಚಿವ ಬಿ.ಶ್ರೀರಾಮುಲು, ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಸುನೀಲ ವಲ್ಯಾಪುರೆ, ಶಶೀಲ್ ನಮೋಶಿ, ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ಸಂಸದ ಡಾ. ಉಮೇಶ ಜಾಧವ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಇದ್ದರು.
ಯಾತ್ರೆಯಲ್ಲಿ ಸ್ಥಳೀಯ ನಾಯಕರು
ಜೇವರ್ಗಿಯ ಸ್ಥಳೀಯ ಮುಖಂಡರಾದ ಭೀಮರಾವ ಗುಜಗುಂಡ ನೆಲೋಗಿ, ಮಲ್ಲಿನಾಥಗೌಡ ಯಲಗೌಡ, ರಮೇಶಬಾಬು ವಕೀಲ, ಹಳ್ಳೆಪ್ಪಾಚಾರ್ಯ ಜೋಶಿ, ಬಸವರಾಜ ಪಾಟೀಲ ನರಿಬೋಳ, ಬಸವರಾಜ ಪಾಟೀಲ ಅರಳಗುಂಡಗಿ, ಸಿದ್ದಣ್ಣ ಹೂಗಾರ, ದೇವಿಂದ್ರಪ್ಪಗೌಡ ಮಾಗಣಗೇರಿ, ಜಿಪಂ ಮಾಜಿ ಸದಸ್ಯ ಮರೆಪ್ಪ ಬಡಿಗೇರ, ಜಿ.ಪಂ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.