ADVERTISEMENT

ಕಲಬುರಗಿ | ಕೆಇಎ ಪರೀಕ್ಷೆ: ಉತ್ತರ ಹೇಳಲು ವಾಟ್ಸ್‌ಆ್ಯಪ್‌ ಗ್ರೂಪ್‌ ಕಾಲ್‌!

ಮಲ್ಲಿಕಾರ್ಜುನ ನಾಲವಾರ
Published 6 ನವೆಂಬರ್ 2023, 6:01 IST
Last Updated 6 ನವೆಂಬರ್ 2023, 6:01 IST
<div class="paragraphs"><p>ಪ್ರಕರಣದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ</p></div>

ಪ್ರಕರಣದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ

   

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಶಾಮೀಲಾಗಿ ಬ್ಲೂಟೂತ್ ಪಡೆದ ಅಭ್ಯರ್ಥಿಗಳಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌ ಕಾಲ್ ಮಾಡಿ ಉತ್ತರ ಹೇಳಲು ನಾಲ್ವರ ತಂಡ ಕೇಂದ್ರದ ಹೊರಗೆ ಸಜ್ಜಾಗಿತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಮೂವರು ಪರೀಕ್ಷಾರ್ಥಿಗಳು ಹಾಗೂ ಅವರಿಗೆ ನೆರವಾಗಲು ಬಂದಿದ್ದ ನಾಲ್ವರನ್ನು ಹಲವು ಸ್ವರೂಪಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ADVERTISEMENT

ಹಣ ಪಡೆದು ಡೀಲ್ ಮಾಡಿಕೊಂಡ ಬಳಿಕ ಪ್ರಕರಣದ ಕಿಂಪ್‌ಪಿನ್ ರುದ್ರಗೌಡ ಡಿ.ಪಾಟೀಲ ಅಭ್ಯರ್ಥಿಗಳ ಹೆಸರು, ಮೊಬೈಲ್ ನಂಬರ್ ಬರೆದುಕೊಂಡಿದ್ದ. ಪರೀಕ್ಷೆಯ ಹಿಂದಿನ ದಿನವೇ ಬ್ಲೂಟೂತ್ ಡಿವೈಸ್ ತಲುಪಿಸುವುದಾಗಿ ಹೇಳಿದ್ದ. ವ್ಯಕ್ತಿಯೊಬ್ಬನಿಗೆ ಅಭ್ಯರ್ಥಿಗಳ ಮೊಬೈಲ್‌ ನಂಬರ್ ಮತ್ತು ಮೂರು ಬ್ಲೂಟೂತ್‌ಗಳನ್ನು ಕೊಟ್ಟಿದ್ದ. ಪರೀಕ್ಷೆಯ ದಿನ (ಅಕ್ಟೋಬರ್‌ 28) ಬೆಳಿಗ್ಗೆಯೇ ವಾಟ್ಸ್‌ಆ್ಯಪ್ ಕರೆ ಮಾಡಿದ ನಿಯೋಜಿತ ವ್ಯಕ್ತಿ, ಆ ಮೂವರಿಗೂ ಡಿವೈಸ್‌ಗಳನ್ನು ತಲುಪಿಸಿದ್ದ. ಆದರೆ, ಡಿವೈಸ್ ಕೊಟ್ಟವರು ಯಾರು ಎಂಬುದು ಅಭ್ಯರ್ಥಿಗಳಿಗೆ ಗೊತ್ತಿಲ್ಲ ಎಂಬುದಾಗಿ ತನಿಖೆಯಲ್ಲಿ ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಲೂಟೂತ್ ಡಿವೈಸ್ ಇರಿಸಿಕೊಳ್ಳಲು ಗಾಢ ಬಣ್ಣದ, ದಪ್ಪನೆಯ ಹೊಸ ಅಂಗಿಗಳನ್ನು ಹೊಲಿಸಲಾಗಿತ್ತು. ಅಂಗಿಯ ಕಾಲರ್‌ನಲ್ಲಿ ಬಿಸ್ಕೆಟ್ ಹೋಗುವಷ್ಟು ಜಾಗ ಮಾಡಿಕೊಂಡು, ಅದರಲ್ಲಿ ಚಿಕ್ಕದಾದ ಸ್ಪೀಕರ್ ಇರಿಸಿದ್ದರು. ವಾಟ್ಸ್‌ಆ್ಯಪ್‌ ಕಾಲ್‌ ಸ್ವಯಂಚಾಲಿತವಾಗಿ ರಿಸೀವ್ ಆಗುವಂತೆ ಮೊಬೈಲ್ ಪೋನ್ ಸೆಟ್ಟಿಂಗ್ ಮಾಡಿಕೊಂಡಿದ್ದರು. ವಾಟ್ಸ್‌ಆ್ಯಪ್‌ ಕರೆಗಾಗಿ ಪ್ಲಾಶ್ ಮಾಡಿದ್ದ ಮೊಬೈಲ್ ಬಳಸಿ, ಪರೀಕ್ಷಾ ಕೇಂದ್ರದ ಸುತ್ತಲಿನ ಕಾರು, ಮನೆಯೊಂದರಲ್ಲಿ ಇರಿಸಲು ಯೋಜನೆ ಹಾಕಿಕೊಂಡಿದ್ದರು ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂತ್ ಇರಿಸಿಕೊಂಡು ಕುಳಿತವರಿಗೆ ಯಾರು, ಎಲ್ಲಿಂದ ವಾಟ್ಸ್‌ಆ್ಯಪ್ ಗ್ರೂಪ್ ಕಾಲ್ ಮಾಡಿ ಉತ್ತರಗಳು ಹೇಳುತ್ತಾರೆ ಎಂಬುದು ಗೊತ್ತಿರಲಿಲ್ಲ. ಉತ್ತರ ಹೇಳಲು ನಾಲ್ವರು ಪರಿಣಿತರು ನಿಯೋಜನೆಗೊಂಡಿದ್ದರು. ಲ್ಯಾಪ್‌ಟಾಪ್ ಇರಿಸಿಕೊಂಡು ಗೂಗಲ್ ಸರ್ಚ್‌ ಮಾಡಿ ಉತ್ತರ ಹೇಳಲು ಅಣಿಯಾಗಿದ್ದರು ಎಂಬುದು ಗೊತ್ತಾಗಿದೆ.

ಉತ್ತರ ಹೇಳುವವನು ಒಮ್ಮೆ ಪ್ರಶ್ನೆಯನ್ನು ಓದಿ ಮೂರು ಬಾರಿ ಮಾತ್ರ ಆ ಪ್ರಶ್ನೆಗೆ ಉತ್ತರ ಹೇಳುತ್ತಿದ್ದ (ಉದಾ: ತಾಜ್ ಮಹಲ್ ಎಲ್ಲಿದೆ? ಮೂರು ಬಾರಿ ಆಗ್ರಾ ಎಂದು ಹೇಳುತ್ತಿದ್ದರು). ಅಭ್ಯರ್ಥಿಗಳು ತಮಗೆ ಬಂದ ಪ್ರಶ್ನೆ ಪತ್ರಿಕೆಯ ಸಿರೀಸ್ ನೋಡಿಕೊಂಡು, ಹೇಳಲಾದ ಉತ್ತರವನ್ನು ಟಿಕ್ ಮಾಡಿಕೊಳ್ಳಬೇಕಿತ್ತು. ಆದರೆ, ಕೇಂದ್ರದ ಒಳಗೆ ಹೋಗಿ ಪರೀಕ್ಷೆ ಬರೆದು ಬಂದಿದ್ದವರು ಪೊಲೀಸರ ತಪಾಸಣೆಯಲ್ಲಿ ಮೂವರು ಸಿಕ್ಕಿಬಿದ್ದಿದ್ದು ಅವರ ಲೆಕ್ಕಾಚಾರವೆಲ್ಲ ಉಲ್ಟಾ ಆಗಿದೆ.

ನಾಲ್ಕು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಹಣ ಕೊಟ್ಟು ಡೀಲ್ ಮಾಡಿಕೊಂಡಂತೆ ಬ್ಲೂಟೂತ್ ಡಿವೈಸ್ ತಂದುಕೊಟ್ಟರು. ಬೇರೆ ಏನು ನಮಗೆ ಗೊತ್ತಿಲ್ಲ ಎಂದು ವಿಚಾರಣೆಯಲ್ಲಿ ಹೇಳಿದ್ದನ್ನೇ ಮತ್ತೆ ಮತ್ತೆ ಒಪ್ಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ರುದ್ರಗೌಡ ಸಿಕ್ಕ ನಂತರವೇ ಅಕ್ರಮದ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಎಫ್‌ಎಸ್‌ಎಲ್‌ಗೆ ಮೊಬೈಲ್‌ ರವಾನೆ

ಬ್ಲೂಟೂತ್ ಕನೆಕ್ಟ್‌ಗೆ ಬಳಸಿದ್ದ ಸ್ಮಾರ್ಟ್‌ ಮೊಬೈಲ್‌ಗಳು ಫ್ಲಾಶ್ ಆಗಿದ್ದು ಅವುಗಳಲ್ಲಿನ ಮಾಹಿತಿ ಕಲೆಹಾಕಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಭ್ಯರ್ಥಿ ಬಾಬು ಚಾಂದಶೇಖ್‌ನಿಂದ ಡಿವೈಸ್‌ ಪಡೆದು ಪರಾರಿಯಾಗಿದ್ದ ಆಸೀಫ್‌ ಬಾಗವಾನ್‌ ಮೊಬೈಲ್‌ ಫ್ಲಾಶ್ ಮಾಡಿದ್ದಾನೆ. ಮೊಬೈಲ್‌ನ ಜಿ–ಮೇಲ್ ಐಡಿ ಮರೆತು ಹೋಗಿದ್ದು ನನಗೆ ನೆನಪಿಲ್ಲ ಎನ್ನುತ್ತಿದ್ದಾನೆ. ಹೀಗಾಗಿ ಆತನ ಮೊಬೈಲ್‌ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು ಕೊನೆಯ ಬಾರಿಗೆ ಯಾರಿಗೆ ಕರೆ ಮಾಡಿದ್ದರು ಏನೆಲ್ಲ ದತ್ತಾಂಶ ಇದ್ದವು ಎಂಬುದು ಎಫ್‌ಎಸ್‌ಎಲ್‌ನಿಂದ ತಿಳಿದು ಬರಬೇಕಿದೆ.

ಆರ್‌.ಡಿ.ಪಾಟೀಲಗೆ ಯುಪಿಯಲ್ಲಿ ಹುಡುಕಾಟ

ಪ್ರಕರಣದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದು ಉತ್ತರ ಪ್ರದೇಶಕ್ಕೂ ತೆರಳಿದ್ದಾರೆ. ಕಲಬುರಗಿ ಗ್ರಾಮೀಣ ಹಾಗೂ ನಗರ ಪೊಲೀಸರ ತಂಡಗಳು ಪ್ರತ್ಯೇಕವಾಗಿ ಶೋಧ ಕಾರ್ಯ ನಡೆಸುತ್ತಿವೆ. ಮಹಾರಾಷ್ಟ್ರದ ಪುಣೆ ಮುಂಬೈ ಹಾಗೂ ಗೋವಾ ರಾಜ್ಯಕ್ಕೂ ಹೋಗಿವೆ. ಉತ್ತರ ಪ್ರದೇಶದಲ್ಲಿ ಇರುವ ಮಾಹಿತಿ ಬಂದಿದ್ದರಿಂದ ಅಲ್ಲಿಗೂ ಮತ್ತೊಂದು ತಂಡ ಹೋಗಿದೆ ಎಂಬುದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.