ಕಲಬುರಗಿ: ತನಗಿಂತ ಹೆಚ್ಚಿನ ಶ್ರೇಯಾಂಕದ ಆಟಗಾರನ ಎದುರು ಉತ್ತಮ ಹೋರಾಟ ತೋರಿದರೂ ಭಾರತದ ದೇವ್ ಜೇವಿಯಾ ಅವರಿಗೆ ಗೆಲುವಿನ ಫಲ ಲಭಿಸಲಿಲ್ಲ. ಕಲಬುರಗಿ ಓಪನ್ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಜೇವಿಯಾ 6–7, 2–6 ರಿಂದ ಅಗ್ರಶ್ರೇಯಾಂಕದ ಖುಮೋಯುನ್ ಸುಲ್ತಾನೋವ್ ಎದುರು ಸೋತರು.
ಉಜ್ಬೇಕಿಸ್ತಾನದ ಸುಲ್ತಾನೋವ್ ಅವರು ಎಟಿಪಿ ರ‍್ಯಾಂಕಿಂಗ್‌ನಲ್ಲಿ ದೇವ್ ಅವರಿಗಿಂತ 450 ಸ್ಥಾನ ಮೇಲೆ ಇದ್ದಾರೆ.
ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ಟೈಬ್ರೇಕ್‌ವರೆಗೆ ಸಾಗಿದ ಮೊದಲ ಸೆಟ್‌ನಲ್ಲಿ ಇಬ್ಬರೂ ಆಟಗಾರರು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದರು. ಏಕಪಕ್ಷೀಯ ಪಂದ್ಯವಾಗಬಹುದೆಂದು ನಿರೀಕ್ಷಿಸಿದ್ದ ಪ್ರೇಕ್ಷಕರನ್ನು ಜೇವಿಯಾ ಪ್ರಬಲ ಪೈಪೋಟಿಯ ಮೂಲಕ ಅಚ್ಚರಿಗೆ ತಳ್ಳಿದರು. ಆದರೂ ಮುಂಬೈ ಐಟಿಎಫ್ ಟೂರ್ನಿಯ ಸೋಲಿಗೆ ಸೇಡನ್ನು ತೀರಿಸಿಕೊಳ್ಳಲು ಭಾರತದ ಆಟಗಾರನಿಗೆ ಸಾಧ್ಯವಾಗಲಿಲ್ಲ.ಮೊದಲ ಸೆಟ್‌ನಲ್ಲಿ ಗೇಮ್‌ಗಳು 3–3, 5–5, 6–6 ಸಮನಾದವು. ಆದರೆ ಕೊನೆ ಕ್ಷಣದಲ್ಲಿ ಒತ್ತಡ ಮೀರಿ ನಿಂತ ಸುಲ್ತಾನೋವ್ ಸೆಟ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನ ಆರಂಭದಲ್ಲಿ ಜೇವಿಯಾ ಸ್ವಲ್ಪ ದಣಿದಂತೆ ಕಂಡರು. ಖುಮೋಯುನ್ 6–2 ರಿಂದ ಈ ಸೆಟ್ ಹಾಗೂ ಪಂದ್ಯ ಗೆದ್ದು ಫೈನಲ್‌ಗೆ ಮುನ್ನಡೆದರು.
ಚಾಪೆಲ್‌ಗೆ ನಿರಾಸೆ: ಇನ್ನೊಂದು ಸೆಮಿಫೈನಲ್ ಹಣಾಹಣಿಯಲ್ಲಿ ರಷ್ಯಾದ ಬಾಬ್‌ರೋವ್ 6–3, 6–3ರಿಂದ ಅಮೆರಿಕದ ನಿಕ್ ಚಾಪೆಲ್ ಎದುರು ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
ಬಾಬ್‌ರೋವ್–ಇಗೋರ್ ಜೋಡಿಗೆ ಡಬಲ್ಸ್ ಗರಿ: ಅಗ್ರಶ್ರೇಯಾಂಕದ ಬಾಗ್ದಾನ್ ಬಾಬ್‌ರೋವ್–ಇಗೋರ್ ಅಗಾಫೋನೊವ್ ಜೋಡಿಯು ಟೂರ್ನಿಯ ಡಬಲ್ಸ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು.ಫೈನಲ್ ಹಣಾಹಣಿಯಲ್ಲಿ ರಷ್ಯಾದ ಜೋಡಿಯು 7–5, 6–2ರಿಂದ ಭಾರತದ ನಿತಿನ್ ಕುಮಾರ್ ಸಿನ್ಹಾ–ಅಮೆರಿಕದ ನಿಕ್ ಚಾಪೆಲ್ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ₹1.30 ಲಕ್ಷ ಬಹುಮಾನ ಹಾಗೂ 25 ಎಟಿಪಿ ಪಾಯಿಂಟ್‌ಗಳನ್ನು ಖಾತೆಗೆ ಸೇರಿಸಿಕೊಂಡಿತು. ರನ್ನರ್ ಅಪ್ ತಂಡಕ್ಕೆ ₹ 75 ಸಾವಿರ ನಗದು ಬಹುಮಾನ ಹಾಗೂ 15 ಎಟಿಪಿ ಪಾಯಿಂಟ್‌ಗಳು ದೊರೆತವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.