ADVERTISEMENT

‘ಬಾಬಾ ಸಾಹೇಬರೆಡೆಗೆ’ ಕೃತಿ ಬಿಡುಗಡೆ‌ 28ಕ್ಕೆ

ಖರ್ಗೆ ಅವರ ಜೀವನ ಕಥನದ ನೋಟ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:53 IST
Last Updated 25 ಸೆಪ್ಟೆಂಬರ್ 2021, 16:53 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ಪ್ರೊ.ಎಚ್.ಟಿ.ಪೋತೆ ಅವರು ರಚಿಸಿದ, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿಕುಟುಂಬ ಪ್ರಕಾಶನ ಹೊರತಂದಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಕಥನ ‘ಬಾಬಾ ಸಾಹೇಬರೆಡೆಗೆ’ (ಪರಿಷ್ಕೃತ ಮುದ್ರಣ) ಕೃತಿ ಲೋಕಾರ್ಪಣೆ ಕಾರ್ಯಕ್ರಮ ಸೆಪ್ಟೆಂಬರ್ 28ರಂದು ಬೆಳಿಗ್ಗೆ 10.30ಕ್ಕೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಾಹಿತಿ ಡಾ.ಶೀಶೈಲ ನಾಗರಾಳ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಭಾಗದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ, ರಾಜಕೀಯ, ಸಾಮಾಜಿಕ ಜೀವನದ ಚಿತ್ರಣವನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು.

ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ನಿವೃತ್ತ ಕಾರ್ಯದರ್ಶಿ, ಲೇಖಕ ಅಗ್ರಹಾರ ಕೃಷ್ಣಮೂರ್ತಿ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಮುದೇನೂರ ನಿಂಗಪ್ಪ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ. ಪ್ರೊ.ಎಚ್.ಟಿ.ಪೋತೆ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಹೇಳಿದರು.

ಈ ಕೃತಿಯು 368 ಪುಟಗಳನ್ನು ಒಳಗೊಂಡಿದ್ದು, 16 ಪುಟಗಳಲ್ಲಿ ಚಿತ್ರಗಳಿರಲಿವೆ. ಇದರ ಬೆಲೆ ₹400 ಇದ್ದು, ಕಾರ್ಯಕ್ರಮದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ವಿವರಿಸಿದರು.

ಪ್ರಮುಖರಾದ ಡಾ.ರಮೇಶ ಟಿ.ಪೋತೆ, ಬಿ.ಎಚ್.ನಿರಗುಡಿ, ಡಾ‌.ಪರಶುರಾಮ ಪಿ., ಡಾ.ಎಂ.ಬಿ.ಕಟ್ಟಿ, ಸಿದ್ಧಾರ್ಥ ಚಿಮ್ಮಾಈದಲಾಯಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.