ADVERTISEMENT

ಚಿಂಚೋಳಿ: ಗಡಿ ಗ್ರಾಮಗಳ ಅರಣ್ಯರೋಧನ

ಗಡಿ ಪ್ರದೇಶ ಅಭಿವೃದ್ಧಿ ಯೋಜನೆಗೆ ಬೇಕು ವಿಶೇಷ ಒತ್ತು

ಜಗನ್ನಾಥ ಡಿ.ಶೇರಿಕಾರ
Published 5 ಅಕ್ಟೋಬರ್ 2024, 6:26 IST
Last Updated 5 ಅಕ್ಟೋಬರ್ 2024, 6:26 IST
ಚಿಂಚೋಳಿ ತಾಲ್ಲೂಕು ಭೈರಂಪಳ್ಳಿ ತಾಂಡಾಕ್ಕೆ ಹೋಗುವ ಗಡಿಯಲ್ಲಿರುವ ಮೆಟಲಿಂಗ್ ರಸ್ತೆ ಹಾಳಾಗಿರುವುದು
ಚಿಂಚೋಳಿ ತಾಲ್ಲೂಕು ಭೈರಂಪಳ್ಳಿ ತಾಂಡಾಕ್ಕೆ ಹೋಗುವ ಗಡಿಯಲ್ಲಿರುವ ಮೆಟಲಿಂಗ್ ರಸ್ತೆ ಹಾಳಾಗಿರುವುದು   

ಚಿಂಚೋಳಿ: ನೆರೆಯ ತೆಲಂಗಾಣ ಗಡಿಗೆ ಹೊಂದಿಕೊಂಡ ಚಿಂಚೋಳಿ ತಾಲ್ಲೂಕಿನ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಜನರನ್ನು ಕಾಡುತ್ತಿದೆ.

ಮಿರಿಯಾಣ, ಶಾದಿಪುರ, ವೆಂಕಟಾಪುರ, ಕುಂಚಾವರಂ ಮತ್ತು ನಾಗಾಈದಲಾಯಿ ಗ್ರಾಮ ಪಂಚಾಯಿತಿಗಳು ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿವೆ. ಆದರೆ ಇಲ್ಲಿನ ಹಳ್ಳಿಗಳು ಹತ್ತು ಹಲವು ಸಮಸ್ಯೆಗಳಿಂದ ಬಸವಳಿದಿವೆ.

ನೆರೆ ರಾಜ್ಯದ ಜನ ಕರ್ನಾಟಕದ ನೂರಾರು ಹೆಕ್ಟೇರ್ ಜಮೀನು ಒತ್ತುವರಿ ಮಾಡಿಕೊಂಡರೂ ಕರ್ನಾಟಕದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವಹಿಸಿದ್ದು ಗಡಿ ತಂಟೆ ಜೀವಂತವಾಗಿರಲು ಕಾರಣವಾಗಿದೆ.

ADVERTISEMENT

ಗಡಿ ಸಮಸ್ಯೆ ಒಂದೆಡೆಯಾದರೆ ಗಡಿ ಗ್ರಾಮಗಳಿಗೆ ಹೋಗಿ ಬರಲು ಸರಿಯಾದ ರಸ್ತೆಗಳಿಲ್ಲ. ಸಾರಿಗೆ ಸೌಲಭ್ಯ ಕನಿಷ್ಠವಾಗಿದೆ. ಶುದ್ಧ ಕುಡಿಯುವ ನೀರಿನ ಸೌಲಭ್ಯಗಳಿಲ್ಲದೆ ಜನರು ಕೊಳವೆ ಬಾವಿ, ತೆರೆದ ಬಾವಿ ನೀರನ್ನೇ ಅವಲಂಬಿಸಿದ್ದಾರೆ.

ಶಾಲೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಕೊಠಡಿಗಳಿಲ್ಲ. ಶಿಕ್ಷಕರ ಕೊರತೆಯಂತೂ ಹೇಳತೀರದು. ನಿರುದ್ಯೋಗ ಸಮಸ್ಯೆ, ಗುಳೆ ಸಮಸ್ಯೆ ಇಲ್ಲಿ ತಾಂಡವವಾಡುತ್ತಿವೆ.

ಗಡಿ ಗ್ರಾಮ ಮತ್ತು ಗಡಿಯಲ್ಲಿ ತಾಂಡಾಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ. ಪ್ರೌಢಶಾಲೆ ಮಕ್ಕಳು ನಿರರ್ಗಳವಾಗಿ ಕನ್ನಡ ಓದಲು ಆಗದಂತಹ ಸ್ಥಿತಿಯಿದೆ.

ಆಂಗ್ಲ ಭಾಷೆ, ವಿಜ್ಞಾನ, ಗಣಿತ ವಿಷಯಗಳಿಗೆ ಇಲ್ಲಿ ಅತಿಥಿ ಶಿಕ್ಷಕರು ದೊರೆಯದ ಕಾರಣ ಕಲಾ ಶಿಕ್ಷಕರಿಗೆ ನೇಮಿಸಿಕೊಂಡು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾಟಾಚಾರದಿಂದ ಸರ್ಕಾರಿ ಶಾಲೆ ನಡೆಸಿಕೊಂಡು ಹೋಗುತ್ತಿದೆ.

ಈ ಭಾಗದಲ್ಲಿ ಜನರ ಜೀವನ ಮಟ್ಟ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಕೃಷಿ ಗಡಿ ಭಾಗದ ಜನರಿಗೆ ಜೀವನಾಧಾರವಾಗಿದೆ ಆದರೆ ನೀರಾವರಿ ಸೌಲಭ್ಯಗಳ ಕೊರತೆಯಿದೆ.
ಸರ್ಕಾರಿ ಶಾಲೆ ಮಕ್ಕಳು ಕನ್ನಡ ಕಲಿಕೆಯಲ್ಲಿ ಹಿಂದುಳಿಯದಂತೆ ಮಾಡಲು ಕನ್ನಡ ಭಾಷೆ ಅಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಆದ್ಯತೆ ನೀಡಬೇಕು. ಜತೆಗೆ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ, ಗ್ರಂಥಾಲಯ ಸೌಲಭ್ಯ, ಇಂಟರ್ ನೆಟ್ ವ್ಯವಸ್ಥೆ ಆಗಬೇಕಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಒಟ್ಟಾರೆ ತಾವು ಪರಕೀಯರು ಎಂಬ ಭಾವನೆ ಬಾರದಂತೆ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕೆಂಬುದು ಗಡಿ ಜನರ ಬೇಡಿಕೆಯಾಗಿದೆ.

ಗಡಿ ಭಾಗಗಳಲ್ಲಿ ಕನ್ನಡ ಅಭಿವೃದ್ಧಿ ಜತೆಗೆ ಮೂಲ ಸೌಲಕರ್ಯ ಕಲ್ಪಿಸಲು ಕರ್ನಾಟಕ ರಾಜ್ಯ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಗಡಿ ಪ್ರದೇಶ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸುತ್ತಿದೆ ಆದರೆ ಪ್ರಾಧಿಕಾರ ನೀಡುತ್ತಿರುವ ಅನುದಾನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಹೀಗಾಗಿ ಪ್ರಾಧಿಕಾರಕ್ಕೆ ವಾರ್ಷಿಕ ₹ 100 ಕೋಟಿ ಅನುದಾನ ಘೋಷಿಸಿ ಗಡಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು ಇದಕ್ಕಾಗಿ ಗ್ರಾ.ಪಂ. ಮೂಲಕ ಕ್ರಿಯಾ ಯೋಜನೆ ರೂಪಿಸುವ ಕೆಲಸ ಆಗಬೇಕು ಎನ್ನುತ್ತಾರೆ ಗಡಿ ಭಾಗದ ಜನ.

ಧರ್ಮಾಸಾಗರ ತಾಂಡಾ ಮಕ್ಕಳು ಪ್ರೌಢ ಶಿಕ್ಷಣ ಕಲಿಯಲು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 20 ಕಿ.ಮೀ ದೂರ ಕ್ರಮಿಸಬೇಕಾದ ಅನಿವಾರ್ಯತೆಯಿದೆ.
ತುಕಾರಾಮ ಪವಾರ, ಭೈರಂಪಳ್ಳಿ ತಾಂಡಾ ಮುಖಂಡ
ನಮ್ಮ ಊರಿನಲ್ಲಿ ಉತ್ತಮ ರಸ್ತೆ ಶುದ್ಧ ಕುಡಿಯುವ ನೀರಿಲ್ಲ. 10 ಕಿ.ಮೀ ದೂರದಲ್ಲಿ ಪ್ರೌಢ ಶಾಲೆಯಿದೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ.
ಗೌರಮ್ಮ ಪೆಂಟಯ್ಯ ಭಜಂತ್ರಿ, ಸದಸ್ಯೆ ಗ್ರಾ.ಪಂ. ವೆಂಕಟಾಪುರ
ರಾಜ್ಯದ 63 ತಾಲ್ಲೂಕುಗಳು ಅಂತರ ರಾಜ್ಯ ಗಡಿಗೆ ಹೊಂದಿಕೊಂಡಿವೆ. ಗಡಿ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಪ್ರತಿ ತಾಲ್ಲೂಕಿಗೆ ವಾರ್ಷಿಕ ₹ 1.5 ಕೋಟಿಯಿಂದ 2 ಕೋಟಿ ಅನುದಾನ ನೀಡಬೇಕು.
ಎಸ್.ಎನ್ ದಂಡಿನಕುಮಾರ, ಸಾಹಿತಿ ಚಿಂಚೋಳಿ
ಚಿಂಚೋಳಿ ತಾಲ್ಲೂಕಿನ ಭೈರಂಪಳ್ಳಿ ತಾಂಡಾ ರಸ್ತೆ ಹಾಳಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.