ADVERTISEMENT

ಮಹನೀಯರ ವಿಚಾರಗಳು ಅಪಾಯದಲ್ಲಿವೆ

ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಧಮ್ಮ ದೀಕ್ಷಾ ಸಮಾರಂಭ; ಚಿಂತಕ ಲಕ್ಷ್ಮಣ ಯಾದವ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 6:05 IST
Last Updated 15 ಅಕ್ಟೋಬರ್ 2024, 6:05 IST
ಕಲಬುರಗಿಯಲ್ಲಿ ಸೋಮವಾರ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕ ಆಯೋಜಿಸಿದ್ದ ಧಮ್ಮ ದೀಕ್ಷಾ ಸಮಾರಂಭವನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಿದರು. ಬೌದ್ಧಭಿಕ್ಕುಗಳು, ಗಣ್ಯರು ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಸೋಮವಾರ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕ ಆಯೋಜಿಸಿದ್ದ ಧಮ್ಮ ದೀಕ್ಷಾ ಸಮಾರಂಭವನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಿದರು. ಬೌದ್ಧಭಿಕ್ಕುಗಳು, ಗಣ್ಯರು ಉಪಸ್ಥಿತರಿದ್ದರು   

ಕಲಬುರಗಿ: ‘ದೇಶದಲ್ಲಿ ಅಪಾಯದಲ್ಲಿ ಇರುವುದು ಧರ್ಮವಲ್ಲ, ಮನುಷ್ಯರನ್ನು ಮನುಷ್ಯರನ್ನಾಗಿ ಮಾಡಿದ ಬುದ್ಧ, ಕಬೀರ್, ಬಸವಣ್ಣನವರ ವಿಚಾರಧಾರೆಗಳು’ ಎಂದು ಚಿಂತಕ ಲಕ್ಷ್ಮಣ ಯಾದವ್ ಹೇಳಿದರು.

ಇಲ್ಲಿನ ಸಿದ್ಧಾರ್ಥನಗರದ ಎಂಎಸ್‌ಕೆ ಮಿಲ್ ಮೈದಾನದಲ್ಲಿ ಸೋಮವಾರ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕವು ಧಮ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿ ಆಯೋಜಿಸಿದ್ದ ಧಮ್ಮ ದೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಪಾಯದ ಕುರ್ಚಿಯ ಮೇಲೆ ಕುಳಿತವರು ಧರ್ಮ ಅಪಾಯದಲ್ಲಿದೆ ಎಂದು ಸುಳ್ಳು ಹೇಳಿ ಯುವಕರ ಹಾದಿ ತಪ್ಪಿಸುತ್ತಿದ್ದಾರೆ. ಎಲ್ಲ ಮನುಷ್ಯರು ಒಂದೇ ಎಂದು ಬೋಧಿಸಿದ ಮಹನೀಯರ ತತ್ವಗಳು ಅಪಾಯಕ್ಕೆ ಸಿಲುಕಿವೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ರಚಿಸಿದ್ದ ಸಂವಿಧಾನ ಸಂಕಷ್ಟದಲ್ಲಿದೆ. ಇವುಗಳ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಿದೆ’ ಎಂದರು.

ADVERTISEMENT

‘ಭಾರತದ ಸಂವಿಧಾನ ದೇಶವನ್ನು ಮುನ್ನಡೆಸುವ ಮಾರ್ಗವನ್ನು ತೋರಿಸುತ್ತದೆ. ಬುದ್ಧ, ಅಣ್ಣ ಬಸವಣ್ಣ, ಕಬೀರ್ ದಾಸ್, ಛತ್ರಪತಿ ಶಾಹು ಮಹಾರಾಜ, ಜ್ಯೋತಿಬಾ ಫುಲೆ, ಪೆರಿಯಾರ್, ನಾರಾಯಣಗುರು ಅವರ ಕನಸಿನ ಭಾರತವನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಆದರೆ, ಇವತ್ತು ಧರ್ಮ– ಧರ್ಮಗಳ ನಡುವೆ, ಜಾತಿ– ಜಾತಿಗಳ ನಡುವೆ ಕಲಹ ಸೃಷ್ಟಿಸುವವರು ದೇಶವನ್ನು ಆಳುತ್ತಿದ್ದಾರೆ’ ಎಂದು ಹೇಳಿದರು.

‘ನಮ್ಮ ಮಕ್ಕಳು ಓದುವ ಪಠ್ಯದಲ್ಲಿ ನೈಜ ಇತಿಹಾಸ ಇಲ್ಲ. ಮಹನೀಯರ ಇತಿಹಾಸಕ್ಕೆ ಕತ್ತರಿ ಹಾಕಲಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರಗಳನ್ನು ಪ್ರತಿಪಾದಿಸುವ ಬೋಧಕರನ್ನು ವಿಶ್ವವಿದ್ಯಾಲಯಗಳಿಂದ ಹೊರಹಾಕಲಾಗುತ್ತಿದೆ. ನಾಗಪುರದ ವಿಚಾರಧಾರೆಗಳಿಗೆ ವೇದಿಕೆ ಸಿಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆಯೇ ಅಪಾಯಕ್ಕೆ ಸಿಲುಕಿದೆ’ ಎಂದು ಅಭಿಪ್ರಾಯಪಟ್ಟರು.

ಮೈಸೂರಿನ ನಳಂದ ವಿಶ್ವವಿದ್ಯಾಲಯದ ಸಂಸ್ಥಾಪಕ ಕಾರ್ಯದರ್ಶಿ ಭಂತೆ ಬೋಧಿ ದತ್ತ ಮಾತನಾಡಿ, ‘ಬುದ್ಧನ ಧಮ್ಮ, ಬುದ್ಧನ ಬೋಧನೆಗಳಿಗೆ ಶಾಸನದ ರೂಪ ಕೊಟ್ಟಿದ ಸಾಮ್ರಟ್ ಅಶೋಕ ಹಾಗೂ ಈ ಇಬ್ಬರ ಆಸೆಯಗಳನ್ನು ಸಂವಿಧಾನದಲ್ಲಿ ಅಳವಡಿಸಿದ ಅಂಬೇಡ್ಕರ್ ಅವರ ಮೂಲಕವಾಗಿ ಭಾರತವನ್ನು ಜಗತ್ತು ಗುರುತಿಸುತ್ತದೆ’ ಎಂದರು.

‘ಭಗವಾನ್ ಬುದ್ಧನಿಗೆ ಜಗತ್ತಿನ ಸಕಲ ಜೀವರಾಶಿಗಳೊಂದಿಗೆ ಧ್ಯಾನದ ಮೂಲಕ ನೇರ ಸಂಪರ್ಕ ಸಾಧಿಸುವ ವಿಶೇಷ ಶಕ್ತಿ ಕರಗತವಾಗಿತ್ತು. ಒಮ್ಮೆ ದನಕಾಯುವ ಬಾಲಕನಿಗೆ ಜ್ಞಾನೋದಯ ಆಗುವುದನ್ನು ಅರಿತ ಬುದ್ಧ, ಭಿಕ್ಷೆ ಪಾತ್ರೆಯನ್ನು ಹಿಡಿದು 20 ಮೈಲಿ ನಡೆದುಕೊಂಡು ಹೋಗಿ ಬಾಲಕನಿಗೆ ಬೋಧನೆ ಮಾಡಿದ್ದರು. ತನ್ನ ತಂದೆಯ ಕೋರಿಕೆ ಮೇರೆಗೆ ಒಮ್ಮೆ ಮಾತ್ರವೇ ರಾಜನ ಆಸ್ಥನಕ್ಕೆ ಭೇಟಿ ನೀಡಿದ್ದ ಬುದ್ಧ, ಜೀವನ ಪೂರ್ತಿ ಶೋಷಿತರ, ದಲಿತರ ಮತ್ತು ದುಃಖದಲ್ಲಿ ಇದ್ದವರನ್ನೇ ಹುಡುಕಿಕೊಂಡು ಹೋಗಿದ್ದರು’ ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತೆಲಂಗಾಣದ ಭಂತೆ ಬೋಧಿಧಮ್ಮ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟಿಲ, ಬೌದ್ಧ ಸಾಹಿತಿ ವಿ.ಆರ್. ದೊಡ್ಡಮನಿ, ಮಹಾಸಭಾದ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ, ಪ್ರಮುಖರಾದ ರಮೇಶ ಲಂಡನಕರ್, ಮರೆಪ್ಪ ಹಳ್ಳಿ, ವರ್ಷಾ ಜಾನೆ, ರಾಜು ಕಪನೂರ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.