ಕಲಬುರಗಿ: ‘ಸಾಮ್ರಾಟ್ ಅಶೋಕನ ಕಾಲಘಟ್ಟದಲ್ಲಿ ಲಿಂಗಾಯತ, ಕುರುಬ, ಗಾಣಿಗ, ಕೋಲಿ, ಎಸ್‌ಸಿ, ಎಸ್‌ಟಿ ಸೇರಿದಂತೆ ಇವತ್ತಿನ ಮುಸ್ಲಿಮರು, ಕ್ರೈಸ್ತರು ಸಹ ನಾಗ ಬೌದ್ಧರಾಗಿದ್ದರು. ವೈದಿಕರು ಮೂಲ ಬೌದ್ಧರನ್ನು ಹತ್ತಾರು ಧರ್ಮಗಳಲ್ಲಿ ಬೇರ್ಪಡಿಸಿ, ಆರು ಸಾವಿರ ಜಾತಿಗಳನ್ನು ಸೃಷ್ಟಿಸಿ ನಮ್ಮನ್ನು ವ್ಯವಸ್ಥಿತವಾಗಿ ಒಡೆದಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಹ.ರಾ.ಮಹೇಶ ಅಭಿಪ್ರಾಯಪಟ್ಟರು.
ಇಲ್ಲಿನ ಸಿದ್ಧಾರ್ಥನಗರದ ಎಂಎಸ್‌ಕೆ ಮಿಲ್ ಮೈದಾನದಲ್ಲಿ ಭಾನುವಾರ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕವು ಧಮ್ಮ ಚಕ್ರ ಪ್ರವರ್ತನ ದಿನದ ಅಂಗವಾಗಿ ಆಯೋಜಿಸಿದ್ದ ಧಮ್ಮ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದರು.
‘ಅಶೋಕನ ಕಾಲದಲ್ಲಿ ವೈದಿಕ ಮತ್ತು ನಾಗ ಜನಾಂಗಗಳು ಮಾತ್ರ ಇದ್ದವು. ಅಶೋಕನು ಬೌದ್ಧ ಧಮ್ಮ ಸ್ವೀಕರಿಸಿ ನಾಗ ಬೌದ್ಧ ಪರಂಪರೆಗೆ ನಾಂದಿ ಹಾಡಿದ್ದರು. ಅಂದಿನ ಭಾರತದ ತುಂಬೆಲ್ಲ ಬೌದ್ಧರೇ ತುಂಬಿದ್ದರು. ಇದನ್ನು ಸಹಿಸಿಕೊಳ್ಳಲು ಆಗದ ವೈದಿಕರು ಸಾವಿರಾರು ಜಾತಿಗಳನ್ನು ಸೃಷ್ಟಿಸಿದ್ದರು. ಪರಸ್ಪರರ ಮೇಲೆ ವೈಷಮ್ಯ ತಂದಿಟ್ಟು, ಗೌರವದಿಂದ ಕಾಣದಂತೆಯೂ ಮಾಡಿದ್ದರು. ಒಂದು ರೀತಿಯಲ್ಲಿ ಸಂಬಂಧಗಳನ್ನು ಬೆಳೆಸದಂತೆ ನೋಡಿಕೊಂಡು, ಬೌದ್ಧ ಧಮ್ಮವನ್ನೇ ವಿಭಜಿಸಿದ್ದರು’ ಎಂದು ಹೇಳಿದರು.
‘ಮೂಲ ನಿವಾಸಿಗಳಾದ ಬೌದ್ಧರನ್ನು ಶೂದ್ರರು ಎಂದು ಕರೆದ ವೈದಿಕರು, ಅವರನ್ನು ಭಾರತದಿಂದ ಓಡಿಸಿದ್ದರು. ಬೌದ್ಧ ಭಿಕ್ಕುಗಳ ತಲೆ ಕಡೆಯಲಾಗಿತ್ತು. ಬೌದ್ಧ ಧರ್ಮದ ಸಾರವನ್ನು ಅರಿತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ಭಾರತವನ್ನು ಬೌದ್ಧಮಯ ಮಾಡುತ್ತೇವೆ ಎಂದು ಶಪಥ ಮಾಡಿ 1956ರ ಅಕ್ಟೋಬರ್ 14ರಂದು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಮರಳಿ ಸ್ವಧರ್ಮಕ್ಕೆ ಹೋದರು’ ಎಂದರು.
‘ಅಂಬೇಡ್ಕರ್ ಅವರನ್ನು ದೇವರಿಗಿಂತ ಹೆಚ್ಚು ಎಂದು ಆರಾಧಿಸುವ ದಲಿತರಲ್ಲಿ ಬಹುತೇಕರು ಬೌದ್ಧ ಧರ್ಮ ಪಾಲನೆ ಸರಿಯಾಗಿ ಮಾಡುತ್ತಿಲ್ಲ. ಹೊರಗಡೆ ಬುದ್ಧನೆ ಸ್ಮರಣೆ ಮಾಡಿದರೆ, ಮನೆಯಲ್ಲಿ ಗಣೇಶ, ಸರಸ್ವತಿ ಪೂಜೆ ಮಾಡುತ್ತಿದ್ದಾರೆ’ ಎಂದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ಜಗತ್ತಿಗೆ ಪ್ರಜ್ಞಾ, ಶೀಲ, ಕರುಣೆಯಂತಹ ತತ್ವಗಳನ್ನು ಬೋಧಿಸಿದ್ದ ಬುದ್ಧನನ್ನು ಅಂಬೇಡ್ಕರ್ ಅವರು ಅನುಸರಿಸಿದ್ದಾರೆ. ಅಂಬೇಡ್ಕರ್ ಅವರು ಸಾಗಿದ ಹಾದಿಯಲ್ಲಿ ನಾವೂ ನಡೆದು, ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟ ಮಾಡಬೇಕು’ ಎಂದರು.
ಸೇವಾ ರತ್ನ ಪ್ರಶಸ್ತಿ: ದಲಿತ ಮುಖಂಡರಾದ ವಿಠ್ಠಲ ದೊಡ್ಡಮನಿ, ಟೋಪಣ್ಣ ಕೋಮಟೆ, ರಣಧೀರ ಹೊಸಮನಿ ಹಾಗೂ ಪುಟ್ಟಮಣಿ ದೇವಿದಾಸ ಅವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ನಳಂದ ವಿಶ್ವವಿದ್ಯಾಲಯದ ಸಂಸ್ಥಾಪಕ ಕಾರ್ಯದರ್ಶಿ ಭಂತೆ ಬೋಧಿ ದತ್ತ, ತೆಲಂಗಾಣದ ಭಂತೆ ಬೋಧಿ ಧಮ್ಮ, ಸಿದ್ಧಾರ್ಥ ಬುದ್ಧವಿಹಾರದ ಸಂಘಾನಂದ ಭಂತೇಜಿ ಸಾನ್ನಿಧ್ಯ ವಹಿಸಿದ್ದರು.
ಬೌದ್ಧ ಉಪಾಸಕರಾದ ಶಿವಶರಣಪ್ಪ ತೊನಸನಹಳ್ಳಿ, ಜಯಶ್ರೀ ಸಿದ್ರಾಮಪ್ಪ ಸರಡಗಿ, ಬಿಜೆಪಿ ಮುಖಂಡ ಆರ್.ರುದ್ರಯ್ಯ, ಮಹಾಸಭಾದ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ, ಪ್ರಮುಖರಾದ ಸುರೇಶ ಕಾನೆಕರ, ಲಕ್ಷ್ಮಣ ಸೋನ ಕಾಂಬಳೆ, ಹರ್ಷವರ್ಧನ ಕಣ್ಣಿ, ರಮೇಶ ಪಟ್ಟೆದಾರ, ರಾಜಕುಮಾರ ಕಪನೂರ, ಸುನೀಲ ಮಾನಪಡೆ, ಪ್ರಕಾಶ ಔರಾದ್ಕರ್, ಗುರಣ್ಣ ಐನಾಪುರ, ರಾಜೀವ ಜಾನೆ, ದಿಗಂಬರ ಬೆಳಮಗಿ, ಸುಂಕಿದ್ರ ತವಾಡೆ, ಸಂತೋಷ ಹಾದಿಮನಿ, ಅಶೋಕ ವೀರನಾಯಕ, ದಿನೇಶ ದೊಡ್ಡಮನಿ, ಸಚಿನ ಶಿರವಾಳ, ದೇವಿಂದ್ರಪ್ಪ ಸಿನೂರು, ಅಶ್ವಿನಿ ಶಂಕಾ, ಶರಣು ದೊಡ್ಡಮನಿ, ಜೈ ಭಾರತ ಕಾಂಬಳೆ ಹಾಗೂ ಶಾಂತಪ್ಪ ಕೋಡ್ಲಿ ಜೇವರ್ಗಿ ಉಪಸ್ಥಿತರಿದ್ದರು.
ದಯಾನಂದ ದೊಡ್ಡಮನಿ ಸ್ವಾಗತಿಸಿ, ಎಂ.ಬಿ.ಕಟ್ಟಿ ನಿರೂಪಣೆ ಮಾಡಿದರು.
‘ಕೂಡಲಸಂಗಮ ಬಸವಕಲ್ಯಾಣ ಕನಕ ಪೀಠದ ಮಾದರಿಯಲ್ಲಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಕನಗನಹಳ್ಳಿ ಪರಿಸರದಲ್ಲಿರುವ ಅಧೋಲೋಕ ಮಹಾಚೈತ್ಯ ಬೌದ್ಧಸ್ತೂಪದ ಅಭಿವೃದ್ಧಿಗೆ ₹500 ಕೋಟಿ ಅನುದಾನ ನೀಡಬೇಕು’ ಎಂದು ಮುಖಂಡ ಸಂತೋಷ ಹಾದಿಮನಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಆರ್.ರುದ್ರಯ್ಯ ‘2004ರಲ್ಲಿ ಸನ್ನತಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದರೂ ಮುಂದೆ ಪ್ರಗತಿ ಕಾಣದೆ ಮೂಲೆ ಗುಂಪಾಗಿದೆ. ಇದಕ್ಕಾಗಿ ಪಕ್ಷಾತೀತವಾಗಿ ಧ್ವನಿ ಎತ್ತಬೇಕಿದೆ’ ಎಂದರು. ಶಾಸಕ ಬಸವರಾಜ ಮತ್ತಿಮಡು ಅವರು ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ‘ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಸನ್ನತಿ ಪ್ರಾಧಿಕಾರದ ಬಗ್ಗೆ ಪ್ರಸ್ತಾಪಿಸುತ್ತೇನೆ. ಕೇಂದ್ರ ಸರ್ಕಾರದ ನೆರವು ಸಹ ಪಡೆಯುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರೂ ಇದಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.