ADVERTISEMENT

ವಿದ್ಯುತ್ ಪ್ರವಹಿಸಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:28 IST
Last Updated 23 ಜೂನ್ 2024, 5:28 IST

ಕಲಬುರಗಿ: ನಗರದ ಬಿದ್ದಾಪುರ ಕಾಲೊನಿಯ ಜಿಡಿಎ ಲೇಔಟ್‌ನಲ್ಲಿ ಶನಿವಾರ ವಾಟರ್ ಮೋಟಾರ್‌ ವೈರ್ ಸಂಪರ್ಕ ಕಲ್ಪಿಸುವ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಲಕ್ಷ್ಮಿಬಾಯಿ ಸುಭಾಷಚಂದ್ರ ಪುತ್ರ ಭೀಮಾಶಂಕರ (14) ಮೃತ ಬಾಲಕ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಬೆಳಿಗ್ಗೆ ಪಾಲಿಕೆಯು ನಲ್ಲಿಯಲ್ಲಿ ನೀರು ಹರಿಸಿತ್ತು. ಎಂದಿನಂತೆ ನಳಕ್ಕೆ ಮೋಟರ್ ಪೈಪ್‌ ಜೋಡಿಸಿದ ಭೀಮಾಶಂಕರ, ಮನೆಯಲ್ಲಿ ವಿದ್ಯುತ್ ಬಟನ್ ಚಾಲು ಮಾಡಿದ. ಪಟ್ಟಿ ಹಚ್ಚಲಾದ ವೈರ್‌ನ ಸಾಕೆಟ್ ಪ್ಲಗ್ ತೆಗೆದುಕೊಂಡು ಹೋಗಿ ಮೋಟರ್‌ಗೆ  ಜೋಡಣೆ ಮಾಡಿದ. ವಾಪಸ್ ಮನೆಯೊಳಗೆ ಬರುವಾಗ ಪಟ್ಟಿ ಹಚ್ಚಲಾದ ವೈರ್‌, ರಸ್ತೆ ಬದಿಯಲ್ಲಿ ನಿಂತಿದ್ದ ಮಳೆ ನೀರಿಗೆ ಹತ್ತಿದ್ದು, ಆ ನೀರಿಗೆ ಕಾಲಿನ ಹೆಬ್ಬೆರಳು ತಾಗಿ ವಿದ್ಯುತ್ ಪ್ರವಹಿಸಿ ಬಾಲಕ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಲ್‌ ಆ್ಯಂಡ್‌ ಟಿ ಕಂಪನಿಯವರು ಕಾಮಗಾರಿ ನಡೆಸಿ, ದಾರಿಯನ್ನು ಅಪೂರ್ಣವಾಗಿ ಬಿಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗೃಹಿಣಿ ಮೇಲೆ ಅತ್ಯಾಚಾರ, ಪ್ರಕರಣ ದಾಖಲು: ಟೆಂಗಳಿ ಲೇಔಟ್‌ನ ಗೃಹಿಣಿಯ ಮೇಲೆ ಅತ್ಯಾಚಾರ ಎಸಗಿ, ಆಸ್ತಿ ಬರೆದುಕೊಡುವಂತೆ ಜೀವ ಬೆದರಿಕೆ ಹಾಕಿದ ಆರೋಪದಡಿ ವಿಜಯಕುಮಾರ ಭಜಂತ್ರಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತಸ್ತೆ ಪತಿಯ ಸ್ನೇಹಿತನಾಗಿದ್ದ ವಿಜಯಕುಮಾರ, ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಗೃಹಿಣಿಯ ಪತಿ ಮನೆಯಲ್ಲಿ ಇಲ್ಲದೆ ಇದ್ದಾಗ ಬಂದ ವಿಜಯಕುಮಾರ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ. ಗಂಡನನ್ನು ಬಿಟ್ಟುಬಿಡು, ದೂರ ಹೋಗಿ ಮದುವೆಯಾಗೋಣ’ ಎಂದು ಪುಸಲಾಯಿಸಿದ. ಇದಕ್ಕೆ ಗೃಹಿಣಿ ಒಪ್ಪದೆ ಇದ್ದಾಗ ಜೀವ ಬೆದರಿಕೆ ಹಾಕಿ ಆಕೆಯ ಜೊತೆಗೆ ಫೋಟೊ ತೆಗೆದುಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ವಿಜಯಕುಮಾರ, ಗೃಹಿಣಿಯನ್ನು ಅತ್ಯಾಚಾರ ಮಾಡಿದರು. ಬ್ಲಾಕ್‌ಮೇಲ್ ಸಹ ಮಾಡಿ, ಆಗಾಗ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ವಿಚಾರ ತಿಳಿದ ದಂಪತಿ, ಬೇರೆಡೆ ಹೋಗಿ ಬಾಡಿಗೆ ಮನೆಯಲ್ಲಿದ್ದರು. ಅಲ್ಲಿಗೂ ಹೋದ ವಿಜಯಕುಮಾರ, ಸಂತ್ರಸ್ತೆಯ ಮನೆಯ ಬಳಿ ಚೀರಾಡುತ್ತಾ, ಆಸ್ತಿ ತನ್ನ ಹೆಸರಿಗೆ ಬರೆದುಕೊಂಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗೃಹಿಣಿ ದೂರು ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.