ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡಜನರ ಹಿತಕ್ಕಿಂತ ತಮ್ಮ ಶ್ರೀಮಂತ ಗೆಳೆಯರಾದ ಅದಾನಿ, ಅಂಬಾನಿ ಬಗ್ಗೆಯೇ ಹೆಚ್ಚು ಆಸಕ್ತಿ. ಅದಕ್ಕೆ ಲಕ್ಷಾಂತರ ಕೋಟಿ ಕಾರ್ಪೊರೇಟ್ ತೆರಿಗೆ ಮನ್ನಾ ಮಾಡಿದ್ದಾರೆ. ಇತ್ತ ಬಡವರಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆಯ ಮೊತ್ತವನ್ನು ಕಡಿತಗೊಳಿಸಿದ್ದಾರೆ’ ಎಂದು ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಟೀಕಿಸಿದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪಾಂಡುರಂಗ ಮಾವಿನಕರ ಪರ ಬುಧವಾರ ಆಳಂದ ತಾಲ್ಲೂಕಿನ ನರೋಣಾದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೋದಿ ಮನ್ ಕಿ ಬಾತ್ ಬಿಟ್ಟು ಜನರ ಬಡತನ, ನಿರುದ್ಯೋಗದ ಬಗ್ಗೆ ಮಾತಾಡಲಿ’ ಎಂದರು.
‘ಡಬಲ್ ಎಂಜಿನ್ ಸರ್ಕಾರದ ನೀತಿಯಿಂದ ಶೇ 1ರಷ್ಟು ಜನರ ಬಳಿ ಶೇ 40ರಷ್ಟು ಸಂಪತ್ತು ಕ್ರೋಢೀಕರಣಗೊಂಡಿದೆ. ಉಳಿದ ಶೇ 99 ಜನರು ಶೇ 60ರಷ್ಟು ಸಂಪತ್ತು ಹಂಚಿಕೊಳ್ಳಬೇಕಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅವು ಎಲ್ಲಿ ಹೋದವು? ಸರ್ಕಾರವು ಜನರ ಕವಚವಾಗಬೇಕು ಎಂದರು.
‘ಬಿಜೆಪಿ ಅತಿ ಕ್ರೂರ ಅಪರಾಧಿಗಳಿಗೆ ಟಿಕೆಟ್ ಕೊಡುತ್ತಿದೆ. ದೇಶಕ್ಕೆ ಪದಕ ತಂದುಕೊಟ್ಟ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಎಸಗಿದ ಕುಸ್ತಿ ಫೆಡರೇಶನ್ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆದಿದೆ. ದೇಶವೆಲ್ಲ ತಿರುಗುವ ಮೋದಿಗೆ ಈ ಸಂತ್ರಸ್ತ ಕುಸ್ತಿಪಟುಗಳು ಕಾಣುತ್ತಿಲ್ಲವೇ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.