ADVERTISEMENT

ಬ್ರುಸೆಲ್ಲಾ: 18,692 ಹೆಣ್ಣು ಕರುಗಳಿಗೆ ಲಸಿಕೆ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಉಚಿತ ಚುಚ್ಚುಮದ್ದು

ಸಂತೋಷ ಈ.ಚಿನಗುಡಿ
Published 21 ಸೆಪ್ಟೆಂಬರ್ 2021, 10:51 IST
Last Updated 21 ಸೆಪ್ಟೆಂಬರ್ 2021, 10:51 IST
ಡಾ.ಯಲ್ಲಪ್ಪ ಇಂಗಳೆ
ಡಾ.ಯಲ್ಲಪ್ಪ ಇಂಗಳೆ   

ಕಲಬುರ್ಗಿ: ಹೆಣ್ಣುಕರುಗಳನ್ನು ಮಾತ್ರ ಪೀಡಿಸುವ ಬ್ರುಸೆಲ್ಲಾ (ಕಂದು ಹಾಕುವುದು) ರೋಗ ನಿವಾರಣೆಗಾಗಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಸಾಮೂಹಿಕ ಚುಚ್ಚು ಮದ್ದು ಹಾಕುವ ಕಾರ್ಯಕ್ರಮ ಅನುಷ್ಠಾನ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ 97ರಷ್ಟು ಕರುಗಳಿಗೆ ಲಸಿಕೆ ಹಾಕಲಾಗಿದೆ. ಇದರೊಂದಿಗೆ ಹೈನೋದ್ಯಮ ಸುಧಾರಣೆಯ ಜತೆಗೆ, ರೈತರಿಗೆ ಸಂಭವಿಸುವ ಹಾನಿಯನ್ನೂ ತಪ್ಪಿಸುವ ಕೆಲಸ ಭರದಿಂದ ಸಾಗಿದೆ.

ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ’ ಅಡಿ ಈ ಲಸಿಕಾಕರಣ ವನ್ನು ಅನುಷ್ಠಾನ ಗೊಳಿಸಿದ್ದು, ಚುಚ್ಚುಮದ್ದನ್ನೂ ಉಚಿತವಾಗಿ ಪೂರೈಸುತ್ತಿದೆ. ಈ ಮುಂಚೆ ರೋಗ ಲಕ್ಷಣಗಳಿದ್ದ ಕರುಗಳಿಗೆ ಮಾತ್ರ ಇದನ್ನು ಹಾಕಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಅಭಿಯಾನವಾಗಿ ಘೋಷಣೆ ಮಾಡಿದೆ.‌

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 19,240 ಹೆಣ್ಣುಕರುಗಳಿವೆ. ಇವುಗಳಿಗೆ ಸೆ. 6ರಿಂದಲೇ ಈ ಲಸಿಕಾಕರಣ ಶುರು ವಾಗಿದ್ದು, ಸೆ. 15ರವರೆಗೆ 18,692 ಲಸಿಕೆ ಹಾಕಲಾಗಿದೆ. 548 ಕರುಗಳು ಮಾತ್ರ ಬಾಕಿ ಇವೆ ಎನ್ನುವುದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ ಅವರ ಮಾಹಿತಿ.

ADVERTISEMENT

ಲಸಿಕೆ ವಿಧಾನ ಹೇಗೆ?: ಆಕಳು ಮತ್ತು ಎಮ್ಮೆಕರುಗಳಿಗೆ ಮಾತ್ರ ಈ ಲಸಿಕೆ ಹಾಕಬೇಕು. 4 ತಿಂಗಳಿಂದ 8 ತಿಂಗಳ ಒಳಗಿನ ಹೆಣ್ಣುಕರುಗಳಿಗೆ ಮಾತ್ರ ಈ ಲಿಸಿಕೆ ನೀಡಲಾಗುತ್ತದೆ. ಕರುಗಳ ಜೀವಿತಾವಧಿಯಲ್ಲಿ ಒಮ್ಮೆ ಕೊಟ್ಟರೆ ಸಾಕು. ಹೀಗೆ ವರ್ಷದಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅಂದರೆ; ಮೂರು ಬಾರಿ (ಹೊಸದಾಗಿ ಹುಟ್ಟಿದ ಕರುಗಳಿಗೆ) ಚುಚ್ಚುಮದ್ದು ಹಾಕಲಾಗುತ್ತದೆ. ಗಂಡು ಕರುಗಳಿಗೆ ಈ ರೋಗ ಬರುವುದಿಲ್ಲವಾದ್ದರಿಂದ ಅವುಗಳಿಗೆ ಲಸಿಕೆ ಹಾಕಕೂಡದು.

ರೋಗ ಕಾರಣಗಳು: ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಾಣು ಜೀವಿಗಳಿಂದ ಈ ರೋಗ ಬರುತ್ತದೆ. ದನ ಮತ್ತು ಎಮ್ಮೆಗಳಲ್ಲಿ ಬ್ರುಸೆಲ್ಲಾ ಅಬಾರ್ಟಸ್, ಕುರಿಗಳಲ್ಲಿ ಬ್ರುಸೆಲ್ಲಾ ಒವೀಸ್, ಆಡುಗಳಲ್ಲಿ ಬ್ರುಸೆಲ್ಲಾ ಮೆಲಿಟೆನಿಸಸ್, ಹಂದಿಗಳಲ್ಲಿ ಬ್ರುಸೆಲ್ಲಾ ಸೂಯಿಸ್, ನಾಯಿಗಳಲ್ಲಿ ಬ್ರುಸೆಲ್ಲಾ ಕ್ಯಾನಿಸ್ ಎಂಬ ಅಣುಜೀವಿಯಿಂದ
ಹರಡುತ್ತದೆ.

ಆಹಾರ ಮತ್ತು ನೀರಿನ ಮೂಲಕ ದೇಹವನ್ನು ಸೇರುವ ಈ ರೋಗಾಣುಗಳು ರಕ್ತ ಸೇರಿಕೊಂಡು ನಂತರ ಗರ್ಭಕೋಶ, ಕೆಚ್ಚಲು, ವೃಷಣ, ಲಿಂಗಗಂಥಿ, ಸಂದು ಅಥವಾ ಕೀಲುಕೋಶಗಳಲ್ಲಿ ನೆಲೆ ನಿಲ್ಲುತ್ತದೆ. ಕೆಚ್ಚಲಿನಲ್ಲೇ ಬಹಳ ವರ್ಷಗಳ ಕಾಲ ಇದು ನಿಲ್ಲುತ್ತದೆ. ಕರುಗಳು ಹಾಲು ಕುಡಿದಾಗ ಅದರ ಮೂಲಕ ಕರುವಿನ ದೇಹ ಸೇರುತ್ತದೆ. ರೋಗಗ್ರಸ್ಥ ದನದ ಹಾಲು ಹಿಂಡಿ ನಂತರ ಆರೋಗ್ಯವಂತ ದನದ ಕೆಚ್ಚಲು ಮುಟ್ಟಿದಾಗಲೂ ಸೋಂಕು ಹರಡುತ್ತದೆ.

ಮನುಷ್ಯರಿಗೂ ಹರಡಬಹುದು ಬ್ರುಸೆಲ್ಲಾ

ರೋಗಗ್ರಸ್ಥ ಆಕಳು, ಎಮ್ಮೆ, ಆಡಿನ ಹಸಿ ಹಾಲನ್ನುಕುಡಿಯುವುದರಿಂದ ಈ ರೋಗ ಮನುಷ್ಯರಿಗೂ ಅಂಟಿಕೊಳ್ಳುತ್ತದೆ. ಪಶು ವೈದ್ಯಾಧಿಕಾರಿಗಳಿಗೆ ಹಾಗೂ ಪಶುವೈದ್ಯಕೀಯ ಇಲಾಖೆಯ ಇತರೇ ಸಿಬ್ಬಂದಿಗೆ,
ಹಾಲು ಹಿಂಡುವವರಿಗೆ ಮತ್ತು ವಧೆ ಮಾಡುವರಲ್ಲಿ ಕಾಣಿಸಿಕೊಂಡ ಉದಾಹರಣೆಗಳಿವೆ.ಕಂದು ಹಾಕಿದ ಜಾನುವಾರಿನ ಮಾಸವನ್ನು ಬರಿಗೈಯಿಂದ ಮುಟ್ಟಿದರೂ ರೋಗಾಣು ಮನುಷ್ಯರ ದೇಹ ಸೇರುತ್ತದೆ. ಮೈ ನಡುಕ, ಜ್ವರ, ಬೆನ್ನು ನೋವು, ಕೀಲು ನೋವು, ವೃಷಣಗಳ ಊದು ಈ ರೋಗದ ಆರಂಭಿಕ ಲಕ್ಷಣಗಳು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.