ADVERTISEMENT

ಮಹಾಗಾಂವ: ನಿತ್ಯ 5ಕಿ.ಮೀ ಕಾಲ್ನಡಿಗೆ

ನೂರಾರು ಬಸ್‌ ಸಂಚರಿಸಿದರೂ ಕಾಲೇಜು ಬಳಿ ಒಂದೂ ನಿಲ್ಲಲ್ಲ; ವಿದ್ಯಾರ್ಥಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 6:11 IST
Last Updated 20 ಜುಲೈ 2024, 6:11 IST
<div class="paragraphs"><p>ಮಲಾಪುರ ತಾಲ್ಲೂಕಿನ ಮಹಾಗಾಂವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿರುವುದು</p></div>

ಮಲಾಪುರ ತಾಲ್ಲೂಕಿನ ಮಹಾಗಾಂವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿರುವುದು

   

ಕಮಲಾಪುರ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾಲೇಜು, ಸಾವಿರಾರು ವಾಹನ ಸಂಚಾರ, ನೂರಾರು ಬಸ್‌ ಸಂಚಾರ ಇದ್ದರೂ ಸಾರಿಗೆ ಇಲಾಖೆ ಚಾಲಕರು, ನಿರ್ವಾಹಕರ ಬೇಜವಾಬ್ದಾರಿತನದಿಂದ ಮಹಾಗಾಂವ ಕ್ರಾಸ್‌ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ನಿತ್ಯ 5 ಕಿ.ಮೀ. ಕಾಲ್ನಡಿಗೆಯ ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದೊದಗಿದೆ.

ಮಹಾಗಾಂವ ಕ್ರಾಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ವಿಭಾಗ ಸೇರಿ ಸುಮಾರು 200 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಶೇ 70 ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಮಹಾಗಾಂವ ಗ್ರಾಮ, ಕುರಿಕೋಟಾ, ದಸ್ತಾಪುರ, ಕಟ್ಟಳ್ಳಿ, ಯಕ್ಕಂಚಿ, ಹರಕಂಚಿ, ನಾಗೂರ, ತಡಕಲ್‌, ಮಡಕಿ, ಮಡಕಿ ತಾಂಡಾ, ಮಹಾಗಾಂವ ವಾಡಿ ಸೇರಿದಂತೆ ವಿವಿಧ ಗ್ರಾಮ ಹಾಗೂ ತಾಂಡಾಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇವರೆಲ್ಲರೂ ಮಹಾಗಾಂವ ಕ್ರಾಸ್‌ ವೃತ್ತದಲ್ಲೇ ಇಳಿದು 2.5 ಕಿ.ಮೀ ನಡೆದುಕೊಂಡು ಕಾಲೇಜಿಗೆ ಬರಬೇಕು. ಮತ್ತ 2.5 ಕಿ.ಮೀ ನಡೆದುಕೊಂಡೇ ಮರಳಬೇಕು. ಬಸ್‌ ಪಾಸ್‌ ಪಡೆದಿದ್ದೇವೆ. ಉಪಯೋಗವಾಗುತ್ತಿಲ್ಲ. 2.5 ಕಿ.ಮೀ ಕ್ರಮಿಸಲು 1 ತಾಸು ಸಮಯಬೇಕು. ನಡೆದುಕೊಂಡು ಹೋಗಿ ಆಯಾಸವಾಗುತ್ತದೆ ಪಾಠ ಕೇಳಲು ಮನಸ್ಸಿರುವುದಿಲ್ಲ’ ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಕಲ್ಯಾಣ ಕರ್ನಾಟಕ ಸಾರಿಗೆ ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಇಲ್ಲಿ ಬಸ್‌ ನಿಲ್ಲಿಸುತ್ತಿಲ್ಲ. ಕಾಲೇಜಿನ ಪ್ರಾಚಾರ್ಯರು ಕಳೆದ 2019ರಿಂದ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸುತ್ತಾ ಬಂದಿದ್ದು, ಮನವಿಗಳ ದೊಡ್ಡ ಕಡತವೇ ಆಗಿದೆ. ದುಂಬಾಲು ಬಿದ್ದು ಸಾರಿಗೆ ಇಲಾಖೆ ಬಸ್‌ ನಿಲುಗಡೆಗೆ ಆದೇಶ ಪಡೆದಿದ್ದಾರೆ. ವಿಪರ್ಯಾಸವೆಂದರೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ಬಸ್‌ ನಿಲುಗಡೆ ಆದೇಶ ತೋರಿಸಿದರೂ ಚಾಲಕರು, ನಿರ್ವಾಹಕರು ಬಸ್‌ ನಿಲ್ಲಿಸದೆ ಉದ್ಧಟತನ ತೋರಿಸುತ್ತಿದ್ದಾರೆ. ಇಲಾಖೆ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಬಸ್‌ ಹತ್ತಿಸಿಕೊಳ್ಳುತ್ತಿಲ್ಲ. ಕಾಲೇಜಿನ ಬಳಿ ಬಸ್‌ ನಿಲ್ಲಿಸುತ್ತಿಲ್ಲ. ಪ್ರಶ್ನಿಸಿದರೆ ನಮಗೆ ಯಾವುದೇ ಆದೇಶವಿಲ್ಲ’ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿರುವ ಆದೇಶ ಪ್ರತಿ ತೋರಿಸಿದರೆ ಅದೆಲ್ಲ ನಮಗೆ ತೋರಿಸಬೇಡಿ ನಿಮ್ಮಲ್ಲಿ ಇಟ್ಟುಕೊಳ್ಳಿ ಎಂದು ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದ್ದಾರೆ. 10 ನಿಮಿಷಕ್ಕೊಂದು ಬಸ್ ನಮ್ಮ ಕಾಲೇಜಿನ ಎದುರಿನಿಂದಲೇ ಸಂಚರಿಸಿದರೂ, ನಾವು ಹತ್ತುವಂತಿಲ್ಲ, ನಡೆದುಕೊಂಡು ಬರಬೇಕು. ಸಾರಿಗೆ ಇಲಾಖೆ ಸಿಬ್ಬಂದಿ ನಡೆಯಿಂದ ಬೇಸತ್ತು ಹೋಗಿದ್ದೇವೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ– ಕಮಲಾಪುರ ಮಾರ್ಗದಲ್ಲಿ ಚಲಿಸುವ ಬಸವಕಲ್ಯಾಣ–ಕಲಬುರಗಿ, ಹುಮನಾಬಾದ್‌–ಕಲಬುರಗಿ ಮಾರ್ಗದ ಎಲ್ಲ ಸಾಮಾನ್ಯ ಬಸ್‌ಗಳನ್ನು ಮಹಾಗಾಂವ ಕ್ರಾಸ್‌ ಪದವಿ ಪೂರ್ವ ಕಾಲೇಜಿನ ಎದುರು ಕೋರಿಕೆ ಮೇರೆಗೆ ನಿಲ್ಲಿಸಲು ಕಟ್ಟುನಿಟ್ಟಾದ ಆದೇಶ ಹೊರಡಿಸಬೇಕು. ಆದೇಶ ಪಾಲಿಸದ ಚಾಲಕರು, ನಿರ್ವಾಹಕರ ವಿರುದ್ಧ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶೀಘ್ರ ಕ್ರಮ ಕೈಗೊಳ್ಳದಿದ್ದರೆ. ಕಾಲೇಜಿನ ಎದುರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

ಕೋರಿಕೆ ಮೇರೆಗೆ ಬಸ್‌ ನಿಲ್ಲಿಸಲು ಆದೇಶವಿದ್ದರೂ ಚಾಲಕ, ನಿರ್ವಾಹಕರು ಬಸ್‌ ನಿಲ್ಲಿಸುತ್ತಿಲ್ಲ. ನಿತ್ಯ 5 ಕಿ.ಮೀ ನಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ
ರಕ್ಷಿತಾ ಶರಣಪ್ಪ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.