ADVERTISEMENT

ಕಲಬುರಗಿ: ನಗರದ ಹಲವು ಬಸ್‌ ನಿಲುಗಡೆಗಳಲ್ಲಿ ಇಲ್ಲ ಪ್ರಯಾಣಿಕರ ತಂಗುದಾಣ

ಬಿಸಿಲು, ಮಳೆಯಲ್ಲೇ ನಿಲ್ಲುವ ಪ್ರಯಾಣಿಕರು!

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 6:09 IST
Last Updated 25 ಜುಲೈ 2024, 6:09 IST
ಕಲಬುರಗಿಯ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ಪಾದಾಚಾರಿ ಮಾರ್ಗದಲ್ಲಿಯೇ ನಿಂತಿರುವ ವಿದ್ಯಾರ್ಥಿನಿಯರು
ಕಲಬುರಗಿಯ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ಪಾದಾಚಾರಿ ಮಾರ್ಗದಲ್ಲಿಯೇ ನಿಂತಿರುವ ವಿದ್ಯಾರ್ಥಿನಿಯರು   

ಕಲಬುರಗಿ: ಮಹಾನಗರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಮೂಲಸೌಕರ್ಯಗಳು ಮಾತ್ರ ಕುಸಿಯುತ್ತಲೇ ಇವೆ. ಇದಕ್ಕೆ ತಾಜಾ ಉದಾಹರಣೆ ನಗರದಲ್ಲಿನ ಪ್ರಯಾಣಿಕರ ತಂಗುದಾಣಗಳು.

ಕಲ್ಯಾಣ ಕರ್ನಾಟಕದ ರಾಜಧಾನಿ ಎಂದೇ ಖ್ಯಾತವಾದ ಕಲಬುರಗಿ ಮಹಾನಗರದಲ್ಲಿ ನಿತ್ಯ 92 ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆಯಡಿ (ಜೆನರ್ಮ್‌) 57 ಮತ್ತು ಡಲ್ಟ್‌ ಮಾದರಿಯ 35 ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕೆಕೆಆರ್‌ಟಿಸಿ ಕಡಿಮೆ ದರದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಆದರೆ, ಪ್ರಯಾಣಿಕರು ಮಾತ್ರ ತಂಗುದಾಣಗಳಿಲ್ಲದೇ ಬಿಸಿಲು, ಮಳೆಯಲ್ಲೇ ನಿಂತುಕೊಳ್ಳುವ ಪರಿಸ್ಥಿತಿ ಇದೆ.

ನಗರದ ಖರ್ಗೆ ಪೆಟ್ರೋಲ್‌ ಬಂಕ್‌, ಅನ್ನಪೂರ್ಣ ಕ್ರಾಸ್‌, ಹೊಸ ಜೇವರ್ಗಿ ರಸ್ತೆ, ಆನಂದ ಹೋಟೆಲ್‌, ಎಸ್‌.ಎಂ.ಪಂಡಿತ ರಂಗಮಂದಿರ, ಜಗತ್‌ ವೃತ್ತ, ರಾಮಮಂದಿರ ಬಳಿ ಯಾದಗಿರಿ ಮಾರ್ಗ ಸೇರಿದಂತೆ ಹಲವೆಡೆ ಬಸ್‌ ನಿಲುಗಡೆ ವ್ಯವಸ್ಥೆ ಇದೆ. ಆದರೆ, ಅಲ್ಲೆಲ್ಲಾ ಪ್ರಯಾಣಿಕರ ತಂಗುದಾಣಗಳೇ ಇಲ್ಲ. ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಮಳೆ ಹಾಗೂ ಬಿಸಿಲಲ್ಲಿ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಬಹುತೇಕ ಕಡೆ ಕಾಣಸಿಗುತ್ತದೆ. ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಬಸ್ ತಂಗುದಾಣಗಳು ಗೋಚರಿಸುತ್ತವೆ.

ADVERTISEMENT

ತಂಗುದಾಣಗಳು ಇಲ್ಲದೇ ಇರುವ ಕಡೆ ಸಾರ್ವಜನಿಕರು ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾದು ನಿಲ್ಲುತ್ತಾರೆ. ವಯಸ್ಸಾದವರು ನಿಲ್ಲಲು ಆಗದೇ ಚಡಪಡಿಸುತ್ತಾರೆ. ಶೆಲ್ಟರ್‌ ನಿರ್ಮಿಸಿ ಎರಡು ಬೆಂಚ್‌ ಹಾಕಿದ್ದರೆ ಕುಳಿತುಕೊಳ್ಳುತ್ತಿದ್ದೆವಲ್ಲ ಎಂಬ ಸಂಕಟವನ್ನು ತೋಡಿಕೊಳ್ಳುತ್ತಾರೆ.

ತಂಗುದಾಣ ನೆಲಸಮ: ನೂತನ ಜಯದೇವ ಆಸ್ಪತ್ರೆ ಎದುರುಗಿದ್ದ ಬಸ್‌ ತಂಗುದಾಣವನ್ನೂ ಒಳಚರಂಡಿ ನಿರ್ಮಾಣದ ಕಾರ್ಯ ನಿಮಿತ್ತ ತೆಗೆದುಹಾಕಲಾಗಿದೆ. ಮುಂದಿನ ತಿಂಗಳು ಜಯದೇವ ಆಸ್ಪತ್ರೆ ಉದ್ಘಾಟನೆಯಾಗುತ್ತಿದೆ. ಆದರೆ ಬಸ್‌ ತಂಗುದಾಣ ಮಾತ್ರ ಕಣ್ಮರೆಯಾಗಿದೆ. ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲೇ ನಿಲ್ಲುತ್ತಿದ್ದಾರೆ. ಇದು ಮಳೆಗಾಲವಾದ್ದರಿಂದ ಇಲ್ಲಿ ತಾತ್ಕಾಲಿಕ ಶೆಡ್‌ ಆದರೂ ನಿರ್ಮಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ್ ಅವರ ಗಮನ ಸೆಳೆದಾಗ, ‘ಕೆಕೆಆರ್‌ಟಿಸಿಯವರ ಸಹಯೋಗದಲ್ಲಿ ಮುಂದಿನ ಯೋಜನೆಗಳಲ್ಲಿ ಬಸ್‌ ತಂಗುದಾಣ ನಿರ್ಮಾಣಕ್ಕೆ ಒತ್ತು ನೀಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ನೀಲಮ್ಮ ಅಂಗಡಿ ಶಿಕ್ಷಕಿ
ನಗರದ ಹಲವೆಡೆ ಬಸ್‌ ನಿಲುಗಡೆ ಇದ್ದಲ್ಲಿ ಶೆಲ್ಟರ್‌ಗಳು ಇಲ್ಲದಿರುವುದರಿಂದ ಮಕ್ಕಳು ಮಹಿಳೆಯರು ಬಿಸಿಲು ಮಳೆಯಲ್ಲೇ ನಿಂತುಕೊಳ್ಳಬೇಕಾದ ಅನಿವಾರ್ಯತೆ ಇದೆ
– ನೀಲಮ್ಮ ಅಂಗಡಿ ಶಿಕ್ಷಕಿ
ವಿಜಯಲಕ್ಷ್ಮಿ ಮದನಾ ವಿದ್ಯಾರ್ಥಿನಿ
ನಾನು ಬಿಇಡಿ ಓದುತ್ತಿದ್ದು ನಿತ್ಯ ಬಸ್‌ನಲ್ಲಿಯೇ ಸಂಚರಿಸುತ್ತೇನೆ. ಅನ್ನಪೂರ್ಣ ಕ್ರಾಸ್‌ನಲ್ಲಿ ಈ ಮುಂಚೆ ಶೆಲ್ಟರ್‌ ಇತ್ತು. ಈಗ ತೆಗೆದು ಹಾಕಿದ್ದಾರೆ. ರಸ್ತೆಯಲ್ಲೇ ನಿಲ್ಲುತ್ತಿದ್ದೇವೆ.
-ವಿಜಯಲಕ್ಷ್ಮಿ ಮದನಾ ವಿದ್ಯಾರ್ಥಿನಿ
ಎಂ.ರಾಚಪ್ಪ 
‘ಜಾಗ ಒದಗಿಸಿದರೆ ಶೆಲ್ಟರ್‌ ನಿರ್ಮಾಣ’
‘ಮಹಾನಗರ ಪಾಲಿಕೆಯವರು ನಮಗೆ ಜಾಗ ಒದಗಿಸಿ ಕೊಟ್ಟರೆ ತಂಗುದಾಣಗಳನ್ನು ನಿರ್ಮಿಸುತ್ತೇವೆ’ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತ ಜನನಿಬಿಡ ಪ್ರದೇಶವಾದ್ದರಿಂದ ಅಲ್ಲಿ ಟ್ರಾಫಿಕ್‌ ಸಮಸ್ಯೆ ನಿರ್ಮಾಣವಾಗುತ್ತದೆ ಎಂದು ಪೊಲೀಸ್‌ ಇಲಾಖೆಯವರು ತಂಗುದಾಣ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಜಾಗ ಒದಗಿಸಿದರೆ ಅಗತ್ಯವಿದ್ದೆಡೆ ಶೆಲ್ಟರ್‌ ನಿರ್ಮಿಸಲಾಗುವುದು’ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.