ADVERTISEMENT

ಸಿನಿಮೀಯ ಶೈಲಿಯಲ್ಲಿ ಚೇಸಿಂಗ್: ಕಾರು ಬೆನ್ನತ್ತಿ ಆರೋಪಿ ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 5:06 IST
Last Updated 19 ನವೆಂಬರ್ 2024, 5:06 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಕಲಬುರಗಿ: ಕುಸನೂರು ರಸ್ತೆಯಲ್ಲಿ ಶನಿವಾರ ತಡರಾತ್ರಿ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾದ ಕಾರು ಚಾಲಕನ ಬೆನ್ನಟ್ಟಿದ ಹೈವೇ ಪೆಟ್ರೋಲಿಂಗ್‌ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಅಪಘಾತದಲ್ಲಿ ಬಸವರಾಜ ಭೀಮರಾಯ (26) ಹಾಗೂ ದಾವಣಗೆರೆ ಮೂಲದ ಅಮೀನ್ ಶೇಖ್ (27) ಮೃತಪಟ್ಟವರು. ಬೈಕ್‌ಗೆ ಡಿಕ್ಕಿಪಡಿಸಿ ಪರಾರಿಯಾಗುತ್ತಿದ್ದ ಕಾರು ಚಾಲಕ ಪುಲಕೇಶಿ ಪಂಡರಿ ವಿರುದ್ಧ ಸಂಚಾರ ಪೊಲೀಸ್ ಠಾಣೆ– 2ರಲ್ಲಿ ಪ್ರಕರಣ ದಾಖಲಾಗಿದೆ.

ಬಸವರಾಜ ಮತ್ತು ಅಮೀನ್ ಸ್ನೇಹಿತರಾಗಿದ್ದರು. ಸರಸ್ವತಿಪುರಂನ ಬಾಡಿಗೆ ಮನೆಯಲ್ಲಿದ್ದ ಬಸವರಾಜ, ರಾಯಚೂರಿನಿಂದ ರೈಲಿನಲ್ಲಿ ಬಂದಿದ್ದ ಅಮೀನ್‌ನನ್ನು ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು. ರೇಷ್ಮಿ ಕಾಲೇಜು ಸಮೀಪದ ರಸ್ತೆಯಲ್ಲಿ ಹಿಂಬದಿಯಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಪುಲಕೇಶಿ ಅವರು ಬಸವರಾಜ ಬೈಕ್‌ಗೆ ಗುದ್ದಿದ್ದರು. ಡಿಕ್ಕಿಯ ರಭಸಕ್ಕೆ ಬೈಕ್‌ನಿಂದ ಪುಟಿದ ಇಬ್ಬರೂ ರಸ್ತೆಯ ಮೇಲೆ ಬಿದ್ದರು. ಗಂಭೀರವಾಗಿ ಗಾಯಗೊಂಡಿದ್ದನ್ನು ನೋಡಿದ ಪುಲಕೇಶ, ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ ಮತ್ತು ಅಮೀನ್ ಅವರು ಆಸ್ಪತ್ರೆಯ ಮಾರ್ಗದಲ್ಲಿ ಮೃತಪಟ್ಟರು.

ಕಾರು ಚೇಸಿಂಗ್: ‘ಭಂಕೂರ ಕ್ರಾಸ್‌ನಲ್ಲಿ ಎಎಸ್‌ಐ ಫಿರೋಜ್ ಖಾನ್ ಹಾಗೂ ಚಾಲಕ ಶಿವಾಜಿ ಅವರು ಹೈವೇ ಪೆಟ್ರೋಲಿಂಗ್‌ಗೆ ನಿಯೋಜನೆಗೊಂಡಿದ್ದರು. ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸಿದರು. ನಿಲ್ಲುವಂತೆ ಸೂಚಿಸಿದರೂ ಹಾಗೂ ಕೈ ಸನ್ನೆಯನ್ನೂ ಲೆಕ್ಕಿಸದೆ ವೇಗವಾಗಿ ಹೋದರು’ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅನುಮಾನದಿಂದ ಕಾರು ಚೇಸ್ ಮಾಡಿದ ಫಿರೋಜ್ ಖಾನ್, ವಾಡಿ ಸಮೀಪದ ಶಂಕರವಾಡಿ ಕ್ರಾಸ್‌ನಲ್ಲಿ ಕಾರು ಚಾಲಕನನ್ನು ಹಿಡಿದರು. ತಕ್ಷಣವೇ ಕಂಟ್ರೋಲ್‌ ರೂಂಗೆ ಕರೆ ಮಾಡಿದಾಗ ಕುಸನೂರು ರಸ್ತೆಯಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗೊತ್ತಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು, ಸಂಚಾರ ಠಾಣೆಯ ಸಿಬ್ಬಂದಿಗೆ ಒಪ್ಪಿಸಿದರು’ ಎಂದರು.

ಪುಲಕೇಶಿ ಜತೆಗೆ ಕಾರಿನಲ್ಲಿ ಚೇತನ ಧನರಾಜ ಹಾಗೂ ವಿವೇಕ ಗುಂಡಪ್ಪ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ವ್ಯಕ್ತಿ ಆತ್ಮಹತ್ಯೆ: ಕಾಮಾಲೆ ರೋಗದಿಂದ ಬಳಲುತ್ತಿದ್ದ ಪಂಚಶೀಲ ನಗರದ ನಿವಾಸಿ ವಿಜಯಕುಮಾರ ಸಾವಳಿ (35) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಾಲಕನಾಗಿದ್ದ ವಿಜಯಕುಮಾರಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.