ADVERTISEMENT

ಕಲಬುರಗಿ: ಅನಾಥ ಮಕ್ಕಳ ತಂಗುದಾಣದ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 15:49 IST
Last Updated 23 ನವೆಂಬರ್ 2023, 15:49 IST

ಕಲಬುರಗಿ: ಮಕ್ಕಳ ಸೌಲಭ್ಯದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮಲ್ಲಿ ದಾಖಲಾದ ಮಕ್ಕಳ ಬಗ್ಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಗರದ ನ್ಯೂ ಘಾಟಗೆ ಲೇಔಟ್‌ ಬಡಾವಣೆಯಲ್ಲಿರುವ ಅನಾಥ ಮಕ್ಕಳ ತಂಗುದಾಣ ’ಇಂಟಿಗ್ರೇಟೆಡ್‌ ಡೆವಲಪ್‌ಮೆಂಟ್‌ ಆರ್ಗನೈಜೇಷನ್‌‘ ವಿರುದ್ಧ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಎಚ್‌ಆರ್‌ಸಿ) ರಿಜಿಸ್ಟ್ರಾರ್‌ ಗೋಮತಿ ಮನೋಚಾ ಹಾಗೂ ತಂಡದವರು ನ.22ರಂದು ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಕಡತಗಳನ್ನು ಪರಿಶೀಲಿಸಿದಾಗ ಮಕ್ಕಳು ದಾಖಲಾದ ದಿನಾಂಕಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಎಲ್ಲಾ ಮಕ್ಕಳನ್ನು ಎರಡು–ಮೂರು ದಿನಾಂಕಗಳಲ್ಲಿ ಸೇರಿಕೆ ಮಾಡಿಕೊಂಡು ಮಕ್ಕಳ ಸೌಲಭ್ಯದ ಹಣವನ್ನು ವಂಚಿಸಲು ನಕಲಿ ದಾಖಲಾತಿ ಸೃಷ್ಟಿಸಿರುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್‌ಕುಮಾರ್ ಯು. ನೀಡಿದ ದೂರಿನ ಅನ್ವಯ ಸಂಸ್ಥೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಅಲ್ಲಿದ್ದ 11 ಹೆಣ್ಣುಮಕ್ಕಳನ್ನು ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.