ADVERTISEMENT

ರಾಜ್ಯ ಸರ್ಕಾರವನ್ನು ಮಸೀದಿಗಳು ನಡೆಸುತ್ತಿವೆ: ಚಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 16:04 IST
Last Updated 29 ಅಕ್ಟೋಬರ್ 2024, 16:04 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಕಲಬುರಗಿ: ‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಮಸೀದಿಗಳು ನಡೆಸುತ್ತಿವೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಮಸೀದಿಯವರು ಸರ್ಕಾರಕ್ಕೆ ಪತ್ರ ಬರೆದು ಭೂಸ್ವಾಧೀನ ಮಾಡಿಕೊಂಡುವಂತೆ ಹೇಳುತ್ತಾರೆ. ವಿಜಯಪುರ, ಯಾದಗಿರಿ, ಕಲಬುರಗಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ವಕ್ಫ್‌ ಆಸ್ತಿ ಇದೆ ಎನ್ನುವ ಮೂಲಕ ರೈತರ ಆಸ್ತಿಯನ್ನು ಕಬಳಿಸಲು ಹೊಂಚು ಹಾಕಲಾಗುತ್ತಿದೆ’ ಎಂದು ದೂರಿದರು.

‘ವಕ್ಫ್‌ ಬೋರ್ಡ್‌ ಅನ್ನು ಕಾಂಗ್ರೆಸಿಗರು ಬಾಗಿಲಿಗೆ ಬಿಟ್ಟಿಕೊಂಡಿದ್ದರಿಂದ ಈಗ ಅಡುಗೆ ಮನೆಗೆ ಬಂದಿದೆ. ವಕ್ಫ್‌ ಬೋರ್ಡ್‌ ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಇದೆ ಎಂಬುದನ್ನು ಕೂಡಲೇ ಘೋಷಣೆ ಮಾಡಲಿ. ಅದರ ಬದಲು ಹಿಂದೂ ಮಠಗಳು, ದೇವಸ್ಥಾನಗಳು ನಮ್ಮದು ಅಂತಾ ನೋಟಿಸ್ ಕೊಟ್ಟಿದ್ದಾರೆ. ಮುಂದೆ ವಿಧಾನಸೌಧ, ಸಂಸತ್ ಭವನ, ಇಡೀ ದೇಶವೇ ತಮ್ಮದು ಎನ್ನುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಇದು ಮೂರು ವರ್ಷಗಳಿಂದ ಪ್ರಾರಂಭವಾಗಿದೆ. 2022–23ರಲ್ಲಿ ರೈತರ ಹೆಸರಿನಲ್ಲಿ ಪಹಣಿ ಬಂದಿದೆ. ಇದೀಗ ಹೊಸ ಪಹಣಿಯಲ್ಲಿ ವಕ್ಫ್‌ ಬೋರ್ಡ್ ಎಂದು ಬರುತ್ತಿದೆ. ಏಕಾಏಕಿ ಹೀಗೆ ಬರಲು ಕಾರಣ ಏನು? ಅಧಿಕಾರಿಗಳಿಗೆ ತಿಳಿದಿಲ್ಲವಾ? ಈ ಕುರಿತು ಬಿಜೆಪಿ ನಿರಂತರವಾಗಿ ಹೋರಾಟ ಮಾಡಲಿದೆ’ ಎಂದು ಹೇಳಿದರು.

ಕಾಲ ಹರಣಕ್ಕೆ ಆಯೋಗ: ‘ಒಳ ಮೀಸಲಾತಿ ವಿಚಾರದಲ್ಲಿ ಕಾಲಹರಣ ಮಾಡಲು ನಿವೃತ್ತ ನ್ಯಾಯಮೂರ್ತಿಗಳ ಆಯೋಗ ರಚನೆ ಮಾಡುತ್ತಿದೆ. ಈಗ ಚುನಾವಣೆ ಹತ್ತಿರ ಬಂದಿದ್ದರಿಂದ ಈ ನಿರ್ಣಯ ತೆಗೆದುಕೊಂಡಿದೆ. ಕೋರ್ಟ್ ತೀರ್ಪು ಬಂದು ತಿಂಗಳುಗಳು ಕಳೆದರೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಸಣ್ಣ ಸಮಸ್ಯೆಗಳಿದ್ದರೆ ಮುಂದಿನ ದಿನಗಳಲ್ಲಿ ಬಗೆಹರಿಸಬಹುದು. ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.