ADVERTISEMENT

ಭಾವಚಿತ್ರ ದುರ್ಬಳಕೆ: ಕ್ಷಮೆ ಕೇಳುವಂತೆ KKSRTCಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 15:29 IST
Last Updated 22 ಸೆಪ್ಟೆಂಬರ್ 2024, 15:29 IST
ದಿ. ರಾಜಶೇಖರ ನೀರಮಾನ್ವಿ ಅವರ ಮಾಹಿತಿ ಜೊತೆಗೆ ಚಂದ್ರಕಾಂತ ವಡ್ಡು ಭಾವಚಿತ್ರ ಬಳಸಿರುವುದು
ದಿ. ರಾಜಶೇಖರ ನೀರಮಾನ್ವಿ ಅವರ ಮಾಹಿತಿ ಜೊತೆಗೆ ಚಂದ್ರಕಾಂತ ವಡ್ಡು ಭಾವಚಿತ್ರ ಬಳಸಿರುವುದು   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಉತ್ಸವ ಮತ್ತು 371 (ಜೆ) ದಶಕದ ಸಂಭ್ರಮದ ವೇಳೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್‌ಟಿಸಿ) ಸಾಧಕರ ಛಾಯಾಚಿತ್ರ ಪ್ರದರ್ಶನದಲ್ಲಿ ನನ್ನ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡು ನನ್ನ ವರ್ಚಸ್ಸು ಹಾಗೂ ಓದುಗರ ಭಾವನೆಗಳಿಗೆ ಘಾಸಿಗೊಳಿಸಿದ್ದು, ಈ ಬಗ್ಗೆ ಕ್ಷಮೆ ಕೇಳಬೇಕು’ ಎಂದು ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಪತ್ರದ ಮೂಲಕ ಕೆಕೆಆರ್‌ಟಿಸಿಗೆ ತಾಕೀತು ಮಾಡಿದ್ದಾರೆ.

‘ಈಚೆಗೆ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಲೇಖಕರ ಪರಿಚಯದ ಛಾಯಾಚಿತ್ರ ಪ್ರದರ್ಶನ ಆಯೋಜಿಸಿತ್ತು. ಈ ಪ್ರದರ್ಶನದಲ್ಲಿ ನನ್ನ ಭಾವಚಿತ್ರದೊಂದಿಗೆ ಈಚೆಗೆ ನಿಧನರಾದ ಕತೆಗಾರ ರಾಜಶೇಖರ ನೀರಮಾನ್ವಿ ಅವರ ಸಾಧನೆ, ನಿಧನ ದಿನಾಂಕ ಸಹಿತ ಅಸಂಬದ್ಧವಾಗಿ ಜೋಡಿಸುವ ಮೂಲಕ ದಿ. ಕತೆಗಾರರಿಗೆ ಮತ್ತು ಜೀವಂತ ಇರುವ ನನಗೆ ಏಕಕಾಲಕ್ಕೆ ಅಪಮಾನ ಮಾಡಲಾಗಿದೆ. ಸರ್ಕಾರದ ಜವಾಬ್ದಾರಿಯುತ ಸಂಸ್ಥೆಯೊಂದರಿಂದ ಇಂತಹ ಅನುಚಿತ ನಡೆಯನ್ನು ಯಾರೂ ನಿರೀಕ್ಷಿಸುವುದಿಲ್ಲ. ಈ ಅಚಾತುರ್ಯದ ಬಗ್ಗೆ ನಾಡಿನ ಪ್ರಜ್ಞಾವಂತರು ಆಘಾತ ಮತ್ತು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

‘ನನ್ನ ಅನುಮತಿ ಇಲ್ಲದೆ ಭಾವಚಿತ್ರವನ್ನು ತಪ್ಪು ಸ್ಥಳದಲ್ಲಿ ಸಾರ್ವಜನಿಕವಾಗಿ ದುರ್ಬಳಕೆ ಮಾಡಿದ್ದರಿಂದ ನನ್ನ ಖಾಸಗಿತನಕ್ಕೂ ಹಾನಿಯಾಗಿದೆ. ಈ ಪ್ರಮಾದಕ್ಕಾಗಿ ಸಂಸ್ಥೆಯಿಂದ ಕ್ಷಮಾಪಣೆ ಮತ್ತು ಹಾನಿಗೆ ಸೂಕ್ತ ಪರಿಹಾರ ನಿರೀಕ್ಷಿಸುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.