ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಾಲುವೆಯ ಜಾಲದ ನವೀಕರಣಕ್ಕಾಗಿ ವೈಜ್ಞಾನಿಕ ಸರ್ವೇ ನಡೆಸಲು ₹50 ಲಕ್ಷ ಹಣ ಮಂಜೂರಾಗಿದೆ. ಇದಕ್ಕೆ ಟೆಂಡರ್ ಕರೆಯಲಾಗುವುದು’ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ ಕಳಸ್ಕರ್ ತಿಳಿಸಿದರು.
ಚಂದ್ರಂಪಳ್ಳಿ ಜಲಾಶಯದ ಬಳಿ ಗುರುವಾರ ಹಮ್ಮಿಕೊಂಡ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಎಡದಂಡೆ, ಬಲದಂಡೆ ಮುಖ್ಯಕಾಲುವೆಗಳು ಹಾಗೂ ವಿತರಣಾ ನಾಲೆಗಳು, ಅಕ್ವಡಕ್ಟಗಳು ಸಮೀಕ್ಷೆ ನಡೆಸಿ ತ್ವರಿತವಾಗಿ ಕೊನೆ ಭಾಗದ ರೈತರ ಹೊಲಗಳಿಗೆ ನೀರು ಹರಿಯುವಂತಾಗಲು ಕ್ರಮ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ನೀಡಲಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದುಕೊಂಡು ಕಾಲುವೆ ಜಾಲದ ಆಧುನಿಕರಣ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಫೆ.28ರವರೆಗೆ ನೀರು: ಚಂದ್ರಂಪಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ರೈತರ ಹೊಲಗಳಿಗೆ ಫೆ.28ರವರೆಗೆ ನೀರು ಬಿಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಗತ್ಯಬಿದ್ದರೆ ನಂತರ ಮತ್ತೊಂದು ಸಭೆ ನಡೆಸಿ ಈರುಳ್ಳಿ, ಮತ್ತಿತರ ಬೆಳೆಗಳಿಗೆ ನೀರು ಬಿಡಲು ಪ್ರಸ್ತಾವ ಸಲ್ಲಿಸಿ ನಿರ್ಣಯಿಸಲಾಗುವುದು’ ಎಂದರು.
ಸಭೆಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರಾದ ಅಶೋಕ ಪಾಟೀಲ, ಗೋಪಾಲರಾವ್ ಕಟ್ಟಿಮನಿ, ಶಂಕರರಾವ್ ಭಗವಂತಿ, ಪುರಸಭೆ ಸದಸ್ಯ ಶಿವಕುಮಾರ ಪೋಚಾಲಿ, ರೈತ ಮುಖಂಡರಾದ ಬಸವರಾಜ ಪುಣ್ಯಶೆಟ್ಟಿ, ಶಿವರಾಜ ಹಿತ್ತಲ, ಬಸವರಾಜ ಪಟಪಳ್ಳಿ, ನಾಗೇಂದ್ರ ಸರಡಗಿ, ವಿಠಲ ಶಾರದ್, ವಿಜಯಕುಮಾರ ರೊಟ್ಟಿ, ಯುಸುಫ್, ಮೈನುದ್ದಿನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.