ADVERTISEMENT

ಮಹಿಳಾ ಕಾನ್‌ಸ್ಟೆಬಲ್‌ ಕೊಲೆಗೆ ಯತ್ನ

ಹಳೆ ಪ್ರಕರಣದ ದ್ವೇಷ, ಮನೆಗೆ ನುಗ್ಗಿ ಕೊಲೆಗೆ ಯತ್ನ ಆರೋಪ: 24 ಗಂಟೆಯಲ್ಲಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಮೇ 2024, 6:58 IST
Last Updated 30 ಮೇ 2024, 6:58 IST

ಕಲಬುರಗಿ: ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ಮನೆಗೆ ನುಗ್ಗಿ ಆಕೆಯ ಕೊಲೆಗೆ ಯತ್ನಿಸಿದ ಪ್ರಕರಣವನ್ನು 24 ಗಂಟೆ ಒಳಗೆ ಭೇದಿಸಿದ ಅಶೋಕ ನಗರ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ರಹ್ಮಪುರ ನಿವಾಸಿ ಮಹೇಶ್ ಆನಂದರಾವ್ ಸಂಗಾವಿ (37) ಬಂಧಿತ ಆರೋಪಿ. ಅಶೋಕ ನಗರ ಪೊಲೀಸ್ ಠಾಣೆಯ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರು ಮತ್ತು ಮಹೇಶ್ ಜತೆಗೆ ಈ ಹಿಂದೆ ಹಣಕಾಸಿನ ವ್ಯವಹಾರ ನಡೆದಿತ್ತು. ಮಹಿಳೆಯು ತಾನು ಪಡೆದಿದ್ದ ಹಣವನ್ನು ಮರಳಿಸಿದ್ದರೂ ಹೆಚ್ಚಿನ ಹಣ ಕೊಡುವಂತೆ ತಕರಾರು ಮಾಡುತ್ತಿದ್ದ. ಮಹಿಳಾ ಕಾನ್‌ಸ್ಟೆಬಲ್ ಕರೆಗಳ ಮಾಹಿತಿ ಪಡೆದು ಬೆದರಿಕೆಯೂ ಹಾಕಿದ್ದ. ಈ ಸಂಬಂಧ ಮಹೇಶ್ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.

ಪ್ರಕರಣ ದಾಖಲಿಸಿದ್ದರಿಂದ ಮಹಿಳೆಯ ವಿರುದ್ಧ ಮಹೇಶ್ ದ್ವೇಷ ಸಾಧಿಸುತ್ತಿದ್ದ. ಹೀಗಿದ್ದು, ಮೇ 29ರ ಬೆಳಿಗ್ಗೆ 3.15ರ ಸುಮಾರಿಗೆ ಮಹೇಶ್, ಮಹಿಳಾ ಕಾನ್‌ಸ್ಟೆಬಲ್‌ ವಾಸವಾಗಿದ್ದ ಪೊಲೀಸ್ ಕ್ವಾಟರ್ಸ್‌ನ ಮನೆಗೆ ಹೋದ. ಮನೆಯ ಹಿಂಬಾಗಿಲಿನಲ್ಲಿ ಜೋರಾದ ಶಬ್ಧವಾಯಿತು. ಮಹಿಳಾ ಕಾನ್‌ಸ್ಟೆಬಲ್‌ ಎದ್ದು, ಅರ್ಧ ಬಾಗಿಲಿನಿಂದ ನೋಡಿದಾಗ, ಮಹೇಶ್ ಕೈಯಲ್ಲಿ ಉದ್ದವಾದ ಆಯುದ್ಧ ಇತ್ತು. ಮಲಗುವ ಕೋಣೆಯ ಬಾಗಿಲು ಹಾಕಿದ ಮಹಿಳಾ ಕಾನ್‌ಸ್ಟೆಬಲ್‌, ತಕ್ಷಣವೇ ಪೊಲೀಸ್ ಠಾಣೆಗೆ ಕರೆ ಮಾಡಿದರು. ಪೊಲೀಸರು ಬರುತ್ತಿದ್ದಂತೆ ಆರೋಪಿ ಅಲ್ಲಿಂದ ಕಾಲ್ಕಿತ್ತ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

₹2 ಕೋಟಿ ವಂಚನೆಯ ಮತ್ತೊಂದು ಎಫ್‌ಐಆರ್: ಹಣ ದುಪ್ಪಟ್ಟು ಮಾಡಿಕೊಡುವ ಆಮಿಷಯೊಡ್ಡಿ ಹಣ ಪಡೆದು ವಂಚಿಸಿದ ಆರೋಪದಡಿ ವರ್ಧಮಾನೆ ದಂಪತಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ನ್ಯಾಯಾಂಗ ಬಂಧನದಲ್ಲಿ ಇರುವ ‘ಕ್ಯಾಪಿಟಲ್ ಗ್ರೋ ಲರ್ನ್‌’ ಟ್ರೇಡಿಂಗ್ ಕಂಪನಿ ಮಾಲೀಕರಾದ ಉತ್ಕರ್ಷ ವರ್ಧಮಾನೆ ಮತ್ತು ಸಾವಿತ್ರಿ ವರ್ಧಮಾನೆ ಅವರ ವಿರುದ್ಧ ನಾಲ್ಕನೇ ದೂರು ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

‘ಕ್ಯಾಪಿಟಲ್ ಗ್ರೋ ಲರ್ನ್‌’ ಕಂಪನಿಯಲ್ಲಿ ಅಂಕುಶ ಮರಕಂದಿ ಅವರ ಗೆಳೆಯರು ಮತ್ತು ಕುಟುಂಬ ಸದಸ್ಯರು ₹1.17 ಕೋಟಿ, ಬಸವರಾಜ ಬಿ.ಜಲ್ಖಿಕರ್ ₹25.50 ಲಕ್ಷ, ಜಯಶ್ರೀ ಎ.ಪಾಟೀಲ, ಅವಿನಾಶ ವಿ.ಪಾಟೀಲ, ಕೇತನ್ ಎ.ಪಾಟೀಲ, ನಿತಿನ್ ವಿ.ಪಾಟೀಲ ಹಾಗೂ ಹರಿಶ್ರೀ ಎನ್‌.ಪಾಟೀಲ ಕುಟುಂಬಸ್ಥರು ₹12.30 ಲಕ್ಷ ಮತ್ತು ಅಭಿಷೇಕ ರಾಜಶೇಖರ ಅವರು ₹50 ಲಕ್ಷ ಸೇರಿ ಒಟ್ಟು ₹2.04 ಕೋಟಿ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಮಿಷಯೊಡ್ಡಿ ಹಣ ಹೂಡಿಕೆ ಮಾಡಿಸಿಕೊಂಡ ವರ್ಧಮಾನೆ ದಂಪತಿ, ಹಣ ವಾಪಸ್ ಕೊಡದೆ ಓಡಿ ಹೋಗಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವಂಚನೆ ಪ್ರಕರಣ ಸಂಬಂಧ ಸಾವಿತ್ರಿ ಅವರ ಸಹೋದರಿ ಸುಧಾ ರಾಠೋಡ ಎಂಬುವರನ್ನು ಪೊಲೀಸರು ಬುಧವಾರ ಬಂಧಿಸಿದರು. ತಲೆ ಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆ ಹಚ್ಚುವಲ್ಲಿ ಜಾಲ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋವು ಸಾಗಣೆ: ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪದಡಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮೂರು ಹಸುಗಳನ್ನು ರಕ್ಷಿಸಲಾಗಿದೆ.
ಶಕೀಲ್ ಅಬ್ದುಲ್, ಮೊಹಮದ್ ಅಮ್ಮದ್ ಘನಿ ಮತ್ತು ಮೆಹಬೂಬ್ ಮೋದಿನ್ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಧಿಕೃತ ಸಿಲಿಂಡರ್‌ಗಳು ಜಪ್ತಿ: ಆಳಂದ ತಾಲ್ಲೂಕಿನ ಮುನ್ನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಅಧಿಕೃತವಾಗಿ ಸಂಗ್ರಹಿಸಿದ್ದ 24 ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು.

ಆಹಾರ ನಿರೀಕ್ಷಕ ಮುಜಾಹಿದ್ ಸಿಂದಗಿ ಮತ್ತು ನರೋಣಾ ಪೊಲೀಸ್ ಠಾಣೆಯ ಪಿಎಸ್‌ಐ ಭೀಮರಾಯ ಬಂಕ್ಲಿ ಅವರಿದ್ದ ತಂಡ ದಾಳಿ ಮಾಡಿತ್ತು. ಪ್ರಭು ಜಾನೆ ಅವರ ಮನೆ ಮೇಲೆ ದಾಳಿ ನಡೆಸಿ ₹26 ಸಾವಿರ ಮೌಲ್ಯದ 24 ಸಿಲಿಂಡರ್‌ ವಶಕ್ಕೆ ಪಡೆಯಿತು. ಆರೋಪಿ ಪ್ರಭು ಜಾನೆ ಮತ್ತು ಇತರರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ದಾಳಿ ವೇಳೆ ಸ್ಥಳದಲ್ಲಿ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.