ADVERTISEMENT

ಕಳಂಕ ಮುಕ್ತ ಜಿಲ್ಲೆಗಾಗಿ ಶ್ರಮಿಸಿ: ನ್ಯಾಯಾಧೀಶ ಶ್ರೀನಿವಾಸ ನವಲೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 14:27 IST
Last Updated 16 ಜುಲೈ 2024, 14:27 IST
ಕಲಬುರಗಿಯಲ್ಲಿ ಮಂಗಳವಾರ ನಡೆದ ಮಕ್ಕಳ ಮೇಲಿನ ದೌರ್ಜನ್ಯ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶ್ರೀನಿವಾಸ್ ನವಲೆ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು                   –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಮಂಗಳವಾರ ನಡೆದ ಮಕ್ಕಳ ಮೇಲಿನ ದೌರ್ಜನ್ಯ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶ್ರೀನಿವಾಸ್ ನವಲೆ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು                   –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಜಿಲ್ಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದೆ. ಅಧಿಕಾರಿಗಳಾದವರು ತರಬೇತಿ ಪಡೆದು ಅಭಿಯಾನದಲ್ಲಿ ಪಾಲ್ಗೊಂಡ ಮಾತ್ರಕ್ಕೆ ಕೆಲಸ ಪೂರ್ಣವಾಗುವುದಿಲ್ಲ. ಬದಲಿಗೆ ದಿನದ 24 ಗಂಟೆ ಶ್ರಮಿಸಿದಾಗ ಜಿಲ್ಲೆಯು ಕಳಂಕದಿಂದ ಮುಕ್ತಿಯಾಗಲು ಸಾಧ್ಯ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಹೇಳಿದರು.

ಇಲ್ಲಿನ ಬಸವರಾಜ ಅಪ್ಪ ಸಭಾಂಗಣದಲ್ಲಿ ಮಂಗಳವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಅಪ್ಪ ಪಬ್ಲಿಕ್ ಶಾಲೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ 3ನೇ ಹಂತದ ಮಿಷನ್ ಸುರಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರೀತಿಯ ಮೋಹದಲ್ಲಿ ಸಿಲುಕಿದ 19ರಿಂದ 21 ವಯಸ್ಸಿನ ನಡುವಿನ ಬಹುತೇಕ ಯುವಕರು ಪೋಕ್ಸೊ ಪ್ರಕರಣದಲ್ಲಿ ಬಂಧಿ ಆಗುತ್ತಿದ್ದಾರೆ. ಈ ಕಾಯ್ದೆ ಅಡಿ ಶಿಕ್ಷೆಗೆ ಒಳಗಾದರೆ ಸನ್ನಡತೆ ಮೇಲೆ ಶಿಕ್ಷೆಯಿಂದ ವಿನಾಯಿತಿ ಸಿಗುವುದಿಲ್ಲ. ಹೀಗಾಗಿ, ಯುವಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ’ ಎಂದು ಸಲಹೆ ನೀಡಿದರು.

ADVERTISEMENT

‘ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ 300 ಕೈದಿಗಳಿದ್ದು, ಅವರಲ್ಲಿ 150ಕ್ಕೂ ಹೆಚ್ಚು ಪೋಕ್ಸೊ ಅಡಿ ಒಳಬಂದವರು. 20 ವರ್ಷದ ಆಸುಪಾಸಿನ ವಯಸ್ಸಿನವರೇ ಹೆಚ್ಚಿದ್ದರೆ, 20 ವರ್ಷ ಶಿಕ್ಷೆಯಾದರೆ ಅವರ ಜೀವನವೇ ಜೈಲಿನಲ್ಲಿ ಮುಗಿದು ಹೋಗುತ್ತದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಯುವಕರಿಗೆ ತಿಳಿ ಹೇಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ ಸಿಂಗ್ ಮೀನಾ ಮಾತನಾಡಿ, ‘ಅಭಿವೃದ್ಧಿ ಎಂದರೆ ಕೇವಲ ಭೌತಿಕವಾದ ಕಟ್ಟಡ ನಿರ್ಮಾಣ, ಮೂಲಸೌಕರ್ಯಗಳು ಒದಗಿಸುವುದಲ್ಲ. ರಾಷ್ಟ್ರೀಯ ಸೂಚ್ಯಂಕಗಳಲ್ಲಿ ಉತ್ತಮ ಶ್ರೇಯಾಂಕ ಪಡೆಯಬೇಕು. ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲು ಗ್ರಾಮ ಪಂಚಾಯಿತಿಯ ಎಲ್ಲ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಅಧಿಕಾರಿಗಳು ಸವಾಲುಗಳ ವಿರುದ್ಧ ನಿಂತು ಕೆಲಸ ಮಾಡಿದಾಗ ಬದಲಾವಣೆ ಸಾಧ್ಯವಾಗುತ್ತದೆ. ಜಿಲ್ಲಾಧಿಕಾರಿ ಒಬ್ಬರಿಂದಲೇ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಮಕ್ಕಳು ಮತ್ತು ಮಹಿಳಾ ರಕ್ಷಣೆಯ ಹೊಣೆ ನಿಮ್ಮ ಮೇಲೂ ಇದೆ. ಬಾಲಕಾರ್ಮಿಕ, ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯಿತಿಗೆ ಬಹುಮಾನ ನೀಡಲಾಗುವುದು’ ಎಂದರು.

ಗ್ರಾಮ ಮಟ್ಟದ ಪಿಡಿಒ, ಗ್ರಾಮಲೆಕ್ಕಿಗ, ಆರೋಗ್ಯ ನಿರೀಕ್ಷರು ಸೇರಿ ಇತರರಿಗೆ ಪೋಕ್ಸೊ ಕಾಯ್ದೆ, ಬಾಲ್ಯವಿವಾಹ ತಡೆ, ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ತರಬೇತಿ ನೀಡಲಾಯಿತು.

ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನಕುಮಾರ ಯು., ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ, ಅಪ್ಪ ಪಬ್ಲಿಕ್ ಶಾಲೆ ಪ್ರಾಂಶುಪಾಲ ಶಂಕರಗೌಡ ಹೊಸಮನಿ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಕೆ.ರಾಘವೇಂದ್ರ ಭಟ್, ಹರೀಶ ಜೋಗಿ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಉಪಸ್ಥಿತರಿದ್ದರು.

ಅಪ್ರಾಪ್ತರ ಅಪಹರಣ ಬಾಲಕಾರ್ಮಿಕ ಪದ್ಧತಿ ಮಹಿಳಾ ದೌರ್ಜನ್ಯ ಸೇರಿ ಮಹಿಳಾ ಮತ್ತು ಮಕ್ಕಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಪ್ರಕರಣ ದಾಖಲಾದ ತಕ್ಷಣವೇ ತನಿಖೆ ಆರಂಭಿಸಿ 60 ದಿನಗಳಲ್ಲಿ ಮುಗಿಸುವಂತೆ ಸೂಚಿಸಲಾಗಿದೆ
ಅಡ್ಡೂರು ಶ್ರೀನಿವಾಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಎದ್ದು ನಿಲ್ಲಲು ಹಿಂದುಮುಂದು!
ಎದ್ದು ನಿಲ್ಲಲು ಹಿಂದುಮುಂದು! ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್ ಅವರು ತಮ್ಮ ಭಾಷಣದ ನಡುವೆ ಮಹಿಳಾ ಮತ್ತು ಮಕ್ಕಳ ರಕ್ಷಣೆಯ ಅಧಿಕಾರಿಗಳು ಎದ್ದು ನಿಲ್ಲುವಂತೆ ಸೂಚಿಸಿದ್ದರು. ಆಗ ಜಿಲ್ಲಾ ಮಕ್ಕಳ ಘಟಕದ ಇಬ್ಬರು ಅಧಿಕಾರಿ ಮಾತ್ರವೇ ಎದ್ದು ನಿಂತರು. ‘ಇಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಅಧಿಕಾರಿಯೂ ಮಹಿಳಾ ಮತ್ತು ಮಕ್ಕಳ ರಕ್ಷಣೆ ಮಾಡುವರು. ಪಿಡಿಒ ಗ್ರಾಮಲೆಕ್ಕಿಗ ಆರೋಗ್ಯ ನಿರೀಕ್ಷರು ಎದ್ದು ನಿಲ್ಲ’ ಎಂದು ಡಿಸಿ ತಾಕೀತು ಮಾಡಿದಾಗ ಎಲ್ಲರೂ ಎದ್ದು ನಿಂತರು. ಉದ್ಘಾಟನೆ ಕಾರ್ಯಕ್ರಮ ಮುಗಿದ ಬಳಿಕ ಕೆಲ ಅಧಿಕಾರಿಗಳು ತೆರಳುತ್ತಿದ್ದರು. ಆಯೋಜಕರು ಅವರನ್ನು ತಡೆದು ಒಳ ಕರೆದೊಯ್ದರು. ಕೆಲ ಹೊತ್ತು ಗೇಟ್‌ ಸಹ ಹಾಕಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.