ಚಿಂಚೋಳಿ (ಕಲಬುರಗಿ ಜಿಲ್ಲೆ): ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ ಅವರ ಸ್ವಗ್ರಾಮ ಹೂಡದಳ್ಳಿಯ ವಿದ್ಯಾರ್ಥಿಗಳು ಶಾಲೆಗೆ ಹೋಗಿಬರಲು ನಿತ್ಯ 7 ಕಿ.ಮೀ ‘ಕಾಲ್ನಡಿಗೆ ಶಿಕ್ಷೆ’ ಅನುಭವಿಸುವಂತಾಗಿದೆ.
ಗ್ರಾಮದಿಂದ 5 ಕಿ.ಮೀ ದೂರದಲ್ಲಿ ಕನಕಪುರ (ಕರಕಮುಕಲಿ) ಸರ್ಕಾರಿ ಪ್ರೌಢಶಾಲೆಯಿದೆ. ಹೂಡದಳ್ಳಿ ಗ್ರಾಮದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕೆ ಕನಕಪುರ ಶಾಲೆಯನ್ನು ಅವಲಂಬಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಸಾರಿಗೆ ಸಂಸ್ಥೆಯ ಬಸ್ ಇಲ್ಲದ ಕಾರಣ ಹೊಲಗಳ ದಾರಿ ಹಿಡಿದು ಕಾಲ್ನಡಿಗೆಯಲ್ಲಿ 3.5 ಕಿ.ಮೀ ಸಂಚರಿಸಿ ಶಾಲೆ ತಲುಪುತ್ತಾರೆ. ಶಾಲೆ ಮುಗಿದ ಬಳಿಕ ಮತ್ತೆ ಕಾಲ್ನಡಿಗೆ ಮೂಲಕವೇ ವಾಪಸ್ಸಾಗುತ್ತಿದ್ದಾರೆ.
‘ನಮ್ಮ ಊರಿನ ಬಳಿ ಬೆಳಿಗ್ಗೆ 8 ಗಂಟೆಗೆ ಬಸ್ ಬರುತ್ತದೆ. ಬೆಳಿಗ್ಗೆ ಅಷ್ಟು ಮುಂಚೆ ಯಾರೂ ತಯಾರಾಗಿರುವುದಿಲ್ಲ. ಹೀಗಾಗಿ ನಾವೆಲ್ಲ ಊರಿನಿಂದ ನಿತ್ಯ 9 ಗಂಟೆಗೆ ಕಾಲ್ನಡಿಗೆಯ ಮೂಲಕ ಹೊರಟು ಕನಕಪುರ ಶಾಲೆಯನ್ನು 9.40ಕ್ಕೆ ತಲುಪುತ್ತೇವೆ’ ಎಂದು ವಿದ್ಯಾರ್ಥಿ ಶರಣು ಪಾಟೀಲ ಅಳಲು ತೋಡಿಕೊಂಡರು.
ಹೂಡದಳ್ಳಿ ಗ್ರಾಮವು ಭಾಲ್ಕಿ–ಚಿಂಚೋಳಿ ರಾಜ್ಯ ಹೆದ್ದಾರಿಯಿಂದ 2 ಕಿ.ಮೀ ಅಂತರದಲ್ಲಿದೆ. ವಿದ್ಯಾರ್ಥಿಗಳು ಹೂಡದಳ್ಳಿ ಕ್ರಾಸಿಗೆ ಬಾರದೆ ರೈತರ ಹೊಲಗಳ ದಾರಿಯಿಂದ ಕ್ರಮಿಸಿ ಶಾಲೆಯನ್ನು ತಲುಪುತ್ತಿದ್ದಾರೆ.
‘ನಮ್ಮೂರಿಗೆ ಬೆಳಿಗ್ಗೆ 9 ಗಂಟೆಗೆ ಬಸ್ ಬಂದರೆ ಶಾಲೆಗೆ ಹೋಗಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಹೂಡದಳ್ಳಿಯಿಂದ ಕನಕಪುರಕ್ಕೆ ಸುಮಾರು 25 ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ.
ಗ್ರಾಮದ ರಸ್ತೆ ಚೆನ್ನಾಗಿದೆ. ಕೆಳದಂಡೆ ಮುಲ್ಲಾಮಾರಿ ಯೋಜನೆಯ ಕಾಲುವೆ ಸೇತುವೆ ಬಳಿ ಹೊಂಡ ನಿರ್ಮಾಣವಾಗಿದ್ದು, ನೀರು ಸಂಗ್ರಹವಾಗಿದೆ. ವಾಹನ ಸವಾರರು ಇದೇ ನೀರಿನ ಹೊಂಡದ ಮೂಲಕವೇ ಸಂಚರಿಸಬೇಕಾಗಿದೆ.
ಸರಿಯಾದ ಸಮಯಕ್ಕೆ ಶಾಲೆಗೆ ಹೋಗಿಬರಲು ಬಸ್ಸಿನ ಸೌಕರ್ಯವಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್ ಪಾಸ್ ಪಡೆದಿಲ್ಲ. ಬಸ್ಸಿನ ಸಮಯ ಬದಲಿಸಿದರೆ ಅನುಕೂಲವಾಗಲಿದೆಅಪೂರ್ವ, ವಿದ್ಯಾರ್ಥಿನಿ ಹೂಡದಳ್ಳಿ
ಹೂಡದಳ್ಳಿಗೆ ಬೆಳಿಗ್ಗೆ 8 ಗಂಟೆಗೆ ಬಸ್ ಬರುತ್ತದೆ. ಕನಕಪುರಕ್ಕೆ ಹೋಗುವ ಮಕ್ಕಳು ಹೂಡದಳ್ಳಿ ಕ್ರಾಸಿನಿಂದ ಚಿಟಗುಪ್ಪ ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿದೆಅಶೋಕ ಪಾಟೀಲ, ವ್ಯವಸ್ಥಾಪಕರು ಕೆಕೆಆರ್‌ಟಿಸಿ ಚಿಂಚೋಳಿ ಘಟಕ
ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ತಾಂಡಾದ ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯ ಇಲ್ಲದಿರುವುದರಿಂದ 4.5 ಕಿ.ಮೀ ದೂರದಲ್ಲಿರುವ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಕಾಲ್ನಡಿಗೆಯ ಮೂಲಕವೇ ತೆರಳುತ್ತಿದ್ದಾರೆ. ಖಾಸಗಿ ಸಾರಿಗೆ ಸೌಲಭ್ಯವೂ ಇಲ್ಲದಿರುವುದರಿಂದ ತಾಂಡಾದ ಸುಮಾರು 40 ವಿದ್ಯಾರ್ಥಿಗಳಿಗೆ ಕಾಲ್ನಡಿಗೆ ಮೂಲಕ ಶಾಲೆಗೆ ಹೋಗಿಬರುವುದು ಅನಿವಾರ್ಯವಾಗಿದೆ. ತಾಂಡಾದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಹಿರಿಯ ಪ್ರಾಥಮಿಕ ಪ್ರೌಢಶಿಕ್ಷಣಕ್ಕೆ ನಾಗಾಈದಲಾಯಿ ಗ್ರಾಮಕ್ಕೇ ಹೋಗಬೇಕು. ‘ಪಿಯು ಹಾಗೂ ಪದವಿ ಶಿಕ್ಷಣಕ್ಕೆ ಚಿಂಚೋಳಿಗೆ ಬರುತ್ತಾರೆ. ಕಾಲೇಜು ವಿದ್ಯಾರ್ಥಿಗಳು ವಸತಿನಿಲಯ ಅವಲಂಬಿಸಿದ್ದಾರೆ. ವಸತಿನಿಲಯದಲ್ಲಿ ಪ್ರವೇಶ ಸಿಗದ ಮಕ್ಕಳು ತಾಂಡಾದಿಂದ ಗ್ರಾಮಕ್ಕೆ ನಡೆದುಕೊಂಡು ಬಂದು ಚಿಂಚೋಳಿಗೆ ಕೆಕೆಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ತಾಂಡಾದ ಪುಟ್ಟ ಮಕ್ಕಳಿಗೆ ಸರ್ಕಾರದಿಂದಲೇ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಇದು ಸಾಧ್ಯವಾಗದಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಿನಿ ವ್ಯಾನ್ ಸೌಲಭ್ಯ ಕಲ್ಪಿಸಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯಕುಮಾರ ಜಾಧವ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.