ಶಿವಾನಂದ ಹಸರಗುಂಡಗಿ
ಅಫಜಲಪುರ: ತಾಲ್ಲೂಕಿನ ಗೊಬ್ಬುರ (ಬಿ) ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಶಾಲೆಯಲ್ಲಿ ಕುಡಿಯಲು ನೀರಿಲ್ಲ. ನೀರಿಗಾಗಿ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುವುದು ನಿತ್ಯವೂ ನಡೆಯುತ್ತಿದ್ದು, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇನ್ನೊಂದು ಕಡೆ ಇಷ್ಟು ಪರದಾಡಿದರೂ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ.
ಶಾಲೆಯ ಆವರಣದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ.
ಈ ಕುರಿತು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ. ಎಸ್. ಸಾಲೋಟಗಿ ಮಾಹಿತಿ ನೀಡಿ, ‘ನಮ್ಮ ಸರ್ಕಾರಿ ಪ್ರೌಢಶಾಲೆಗೆ ಯಾವುದೇ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆದರೆ ನಮ್ಮ ಹತ್ತಿರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಸತಿ ನಿಲಯವಿದೆ. ಅಲ್ಲಿ ಕೊಳವೆ ಬಾವಿ ಇದೆ ನೀರು ಸರಿಯಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಹತ್ತಿರದಲ್ಲಿ ಒಂದು ಕೊಳವೆ ಬಾವಿ ಇದೆ. ಆದರೆ ಅವರು ನಮ್ಮ ಕೊಳವೆ ಬಾವಿಯಿಂದ ಯಾರಿಗೂ ನೀರು ಕೊಡುವುದಿಲ್ಲ ಎಂದು ಹೇಳುತ್ತಾರೆ’ ಎಂದು ತಿಳಿಸಿದರು.
ಶಾಲೆಗೆ ಕುಡಿಯುವ ನೀರು ವ್ಯವಸ್ಥೆ ಮಾಡುವುದಾಗಿ 30 ಜನ ಹಳೆ ವಿದ್ಯಾರ್ಥಿಗಳು ಶಾಲೆಗೆ ಬಂದು ನಾವು ಹಣವನ್ನು ಸಂಗ್ರಹಿಸಿ ಪ್ರೌಢಶಾಲೆ ಆವರಣದಲ್ಲಿ ಕೊಳವೆಬಾವಿ ಕೊರೆಯುತ್ತೇವೆ ಎಂದಿದ್ದರು. ಈ ಮಾಹಿತಿ ತಿಳಿದ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೂ ನಾವು ನೀರು ಕೊಡುತ್ತೇವೆ ಎಂದು ತಿಳಿಸಿದ್ದರು. ಆದರೂ ವ್ಯವಸ್ಥೆಯಾಗಲಿಲ್ಲ.
ಪ್ರೌಢಶಾಲೆ ಹತ್ತಿರದಲ್ಲಿ ಕರ್ನಾಟಕ ಕಸ್ತೂಬಾ ಗಾಂಧಿ ಬಾಲಕಿಯರ ವಸತಿ ನಿಲಯ ನಿರ್ಮಾಣವಾಗಿದ್ದು ಅಲ್ಲಿಯೂ ಸಹ ಒಂದು ಕೊಳವೆಬಾವಿ ಕೊರೆಯಲಾಗಿದೆ. ಅದನ್ನು ನಿರ್ಮಾಣ ಮಾಡಿರುವ ಗುತ್ತಿಗೆದಾರರು ನೀರು ಕೊಡಲು ಒಪ್ಪುತ್ತಿಲ್ಲ. ಇದುವರೆಗೂ ವಸತಿ ನಿಲಯ ಶಿಕ್ಷಣ ಇಲಾಖೆಗೆ ಹಸ್ತಾಂತರವಾಗದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
‘ಕಾಲೇಜಿನವರು ನೀರು ಕೊಡುತ್ತೇನೆ ಎಂದು ಮೌನವಾಗಿದ್ದಾರೆ. ಹೀಗಾಗಿ ಮಕ್ಕಳಿಗೆ ನೀರು ದೊರೆಯುತ್ತಿಲ್ಲ. ಶಾಸಕ ಎಂ.ವೈ. ಪಾಟೀಲ ಅವರು ಶಾಲೆಗೆ ಭೇಟಿ ನೀಡಿ ಶಾಲಾ ಆವರಣದಲ್ಲಿ ಕೊಳವೆಬಾವಿ ಕೊರೆಯಲಾಗುತ್ತದೆ ಎಂದು ಹೇಳಿದರು. ಅದೂ ಆಗಲಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ವಿಭಾಗದವರು ಶಾಲೆಗೆ ಭೇಟಿಯ ನೀಡಿ ನಿಮ್ಮ ಶಾಲೆಯ ಹತ್ತಿರದಲ್ಲಿಯೇ ಸರ್ಕಾರದಿಂದ ಎರಡು ಕೊಳವೆಬಾವಿ ಕೊರೆಯಲಾಗಿದೆ. ಅದರಿಂದ ನೀರು ತೆಗೆದುಕೊಳ್ಳಬೇಕು ಎಂದು ಹೇಳಿ ಹೋದರು. ಆದರೆ ಮಕ್ಕಳಿಗೆ ಕುಡಿಯಲು ನೀರು ಕೊಡಿಸುವರು ಯಾರು ಪ್ರಶ್ನೆ ಬಂದಿದೆ’ ಎಂದು ಮುಖ್ಯ ಶಿಕ್ಷಕ ‘ಪ್ರಜಾವಾಣಿ’ಗೆ ನೋವು ತೋಡಿಕೊಂಡರು.
ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಶಾಲೆಗೆ ಖುದ್ದಾಗಿ ಭೇಟಿಯಾಗಿ ಸಮಸ್ಯೆ ಬಗೆಹರಿಸಲಾಗುವುದು. ಈಗಾಗಲೇ ಶಾಲೆಗೆ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದಾರೆ- ಜ್ಯೋತಿ ಪಾಟೀಲ್ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.