ADVERTISEMENT

ಶೌಚಾಲಯ ಕಟ್ಟಿಸಿ, ಬಸ್ ಬಿಡಿಸಿ... ಮಕ್ಕಳ ಅಹವಾಲು, ಸಂವಾದದಲ್ಲಿ ಹಲವು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:39 IST
Last Updated 19 ನವೆಂಬರ್ 2024, 14:39 IST
ಕಲಬುರಗಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸಿದ್ದ ಮಕ್ಕಳ ಅಹವಾಲು ಹಾಗೂ ಸಂವಾದಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ಚಾಲನೆ ನೀಡಿದರು. ಮಂಜುಳಾ ಪಾಟೀಲ, ಶ್ರೀನಿವಾಸ ನವಲೆ, ಶಿವಶರಣಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಕಲಬುರಗಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸಿದ್ದ ಮಕ್ಕಳ ಅಹವಾಲು ಹಾಗೂ ಸಂವಾದಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ಚಾಲನೆ ನೀಡಿದರು. ಮಂಜುಳಾ ಪಾಟೀಲ, ಶ್ರೀನಿವಾಸ ನವಲೆ, ಶಿವಶರಣಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು   

ಕಲಬುರಗಿ: ನೂರಾರು ಮಕ್ಕಳಿರುವ ನಮ್ಮ ಹೈಸ್ಕೂಲಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಆಟವಾಡಲು ಶಾಲಾ ಮೈದಾನವಿಲ್ಲ. ಊರಿಂದ ಕಲಬುರಗಿಯ ಕಾಲೇಜಿಗೆ ಬರಬೇಕೆಂದರೆ ಸಕಾಲಕ್ಕೆ ಬಸ್ ಬರುವುದೇ ಇಲ್ಲ. ಹೀಗಾಗಿ, ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದೇವೆ...

ಇಂತಹ ಹಲವು ಸಮಸ್ಯೆಗಳು ಹಾಗೂ ಬೇಡಿಕೆಗಳು ಇಲ್ಲಿನ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ರಕ್ಷಣಾ ಘಟಕದ ಆಯೋಜಿಸಿದ್ದ ನಿಮ್ಮ ಹಕ್ಕು ನಮ್ಮ ಧ್ವನಿ ಮಕ್ಕಳ ಅಹವಾಲು ಸ್ವೀಕಾರ ಹಾಗೂ ಸಂವಾದದಲ್ಲಿ ಕೇಳಿ ಬಂದ ಪ್ರಮುಖ ಬೇಡಿಕೆಗಳು.

ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಕ್ಕಳು ಹಲವು ಬಗೆಯ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ತೆರೆದಿಟ್ಟರು.

ADVERTISEMENT

ಪ್ರೌಢಶಾಲೆಯ ವಿದ್ಯಾರ್ಥಿ ಪ್ರತೀಕ ಮಾತನಾಡಿ, ‘ರಾಜಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ 150 ವಿದ್ಯಾರ್ಥಿಗಳಿದ್ದು, ಶೌಚಾಲಯ, ಗ್ರಂಥಾಲಯಕ್ಕೆ ಪ್ರತ್ಯೇಕ ಕೋಣೆ ಇಲ್ಲ. ಮೂರು ತರಗತಿಗಳು ಮಾತ್ರ ಇವೆ’ ಎಂದು ತಿಳಿಸಿದ. 

ವಿದ್ಯಾರ್ಥಿನಿ ಶಿವಾನಿ ಮಾತನಾಡಿ, ‘ದಿನಾಲೂ ಕಾಳಗಿ ತಾಲ್ಲೂಕಿನ ಕಲಗುರ್ತಿಯಿಂದ ಬರುತ್ತಿದ್ದು, ಒಂದು ದಿನ ಬಸ್ ಬರದಿದ್ದರೆ ಕಾಲೇಜು ತಪ್ಪಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ದಿನಾಲೂ ಬೆಳಿಗ್ಗೆ 8.30ರಿಂದ 9 ಗಂಟೆಯ ಒಳಗಾಗಿ ಕಲಗುರ್ತಿಯಿಂದ ಕಲಬುರಗಿಗೆ ಬಸ್ ಸಂಚಾರ ಶುರು ಮಾಡಬೇಕು’ ಎಂದು ಒತ್ತಾಯಿಸಿದಳು.

ಉಪನ್ಯಾಸಕಿ ಪ್ರಭಾವತಿ ಮಾತನಾಡಿ, ‘ಮೇ ತಿಂಗಳಲ್ಲಿ ತರಗತಿಗಳು ಪ್ರಾರಂಭವಾದರೂ ಹಾಸ್ಟೆಲ್‌ಗಳು ವಿದ್ಯಾರ್ಥಿಗಳ ಆಯ್ಕೆಪಟ್ಟಿಯನ್ನು ಜುಲೈನಲ್ಲಿ ಪ್ರಕಟಿಸುತ್ತಿವೆ. ಹೀಗಾಗಿ, ವಿದ್ಯಾರ್ಥಿನಿಯರು ಹಾಸ್ಟೆಲ್ ಸಿಗದೇ ಇದ್ದುದಕ್ಕೆ ಶಿಕ್ಷಣವನ್ನೇ ಮೊಟಕುಗೊಳಿಸುವ ಸಾಧ್ಯತೆ ಇದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪರ್ಣಾ ಕೊಳ್ಳಾ ಅವರು, ‘ಯಾವ ಶಾಲೆ, ಕಾಲೇಜುಗಳಲ್ಲಿ ಶೌಚಾಲಯಗಳ ಕೊರತೆ ಇದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಕಟ್ಟಡಗಳ ನಿರ್ಮಾಣದ ಬಗ್ಗೆಯೂ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗುವುದು. ಬಸ್ ವ್ಯವಸ್ಥೆ ಇಲ್ಲದ ಕಡೆ ಬಸ್‌ ಸಂಚಾರ ಆರಂಭಿಸುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕೆಕೆಆರ್‌ಟಿಸಿ ಅಧಿಕಾರಿ ಮಾತನಾಡಿ, ‘ಇಲ್ಲಿ ಬರುವ ಬೇಡಿಕೆಗಳನ್ನು ಆಧರಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಸ್ ಸೌಕರ್ಯ ಕಲ್ಪಿಸಲಾಗುವುದು. ಬಸ್ ಸಕಾಲಕ್ಕೆ ಬಾರದೇ ಇದ್ದ ಸಂದರ್ಭದಲ್ಲಿ ಪ್ರಯಾಣಿಕರು 63664 23880 ಸಹಾಯವಾಣಿಗೆ ಕರೆ ಮಾಡಬಹುದು’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಿವಶರಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ, ಭರತೇಶ ಶೀಲವಂತರ ಇತರರು ಭಾಗವಹಿಸಿದ್ದರು.

Cut-off box - ಪೊಲೀಸರ ವರ್ತನೆಗೆ ಕಣ್ಣೀರಿಟ್ಟ ಪೋಷಕ ಆರು ತಿಂಗಳ ಹಿಂದೆ ಕಳೆದುಹೋದ ತನ್ನ 16 ವರ್ಷದ ಮಗನನ್ನು ಚೌಕ ಠಾಣೆ ಪೊಲೀಸರು ಹುಡುಕಿ ಕೊಡುತ್ತಿಲ್ಲ. ಇದರಿಂದಾಗಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಕ್ಕೆ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಜೇವರ್ಗಿ ತಾಲ್ಲೂಕಿನ ಮಳ್ಳಿ ಗ್ರಾಮದ ಪಿನಿಕ್ಸ್ ಹಂದಿಗನೂರ ಸಭೆಯಲ್ಲಿ ಕಣ್ಣೀರಿಟ್ಟರು. ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು ಪೊಲೀಸರಿಗೆ ಕಿರಿಕಿರಿಯಾಗಿದೆ. ನನ್ನ ಮಗನ ಬಗ್ಗೆ ಮಾಹಿತಿ ಕೇಳಲು ಹೋದಾಗ ಕಾನ್‌ಸ್ಟೆಬಲ್ ಒಬ್ಬರು ಮಗನನ್ನು ಹುಡುಕಿಕೊಡುವಂತೆ ನ್ಯಾಯಾಧೀಶರನ್ನೇ ಕೇಳು ಎಂದು ಹೇಳಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದರು. ಸಭೆಯಲ್ಲಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ‘ಪೊಲೀಸರು ಮಗನನ್ನು ಹುಡುಕಿಕೊಡದ ಸಂದರ್ಭದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವುದು ದೂರುದಾರರ ಕಾನೂನುಬದ್ಧ ಹಕ್ಕು. ಅದನ್ನು ಪ್ರಶ್ನಿಸಿದ ಪೊಲೀಸರ ಕ್ರಮ ಸರಿಯಲ್ಲ. ದೂರು ನೀಡಲು ಬಂದವರನ್ನು ಸಹಾನುಭೂತಿಯಿಂದ ಕಾಣಬೇಕು. ಈ ಬಗ್ಗೆ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು. ದೂರುದಾರರಿಗೆ ಅವಮಾನ ಮಾಡಿದ ಪೊಲೀಸರನ್ನು ಎಲ್ಲಿಗೆ ಕಳುಹಿಸಬೇಕು ಎಂಬುದು ನಮಗೆ ಗೊತ್ತಿದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.