ADVERTISEMENT

ಚಿಂಚೋಳಿ | ಬಂಡ್ ಮರು ನಿರ್ಮಾಣಕ್ಕೆ ಗ್ರಹಣ

ನಾಗಾಈದಲಾಯಿ: ವೀರೇಂದ್ರ ಪಾಟೀಲ ಅವಧಿಯಲ್ಲಿ ನಿರ್ಮಾಣವಾದ ಕೆರೆ

ಜಗನ್ನಾಥ ಡಿ.ಶೇರಿಕಾರ
Published 24 ಜೂನ್ 2024, 5:14 IST
Last Updated 24 ಜೂನ್ 2024, 5:14 IST
ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ಕೆರೆಯ ಬಂಡ್ ಬಿರುಕು ಬಿಟ್ಟಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಡಾ. ಅವಿನಾಶ ಜಾಧವ ಅಧಿಕಾರಿಗಳಿಂದ ಮಾಹಿತಿ ಪಡೆದರು (ಸಂಗ್ರಹ ಚಿತ್ರ)
ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ಕೆರೆಯ ಬಂಡ್ ಬಿರುಕು ಬಿಟ್ಟಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಡಾ. ಅವಿನಾಶ ಜಾಧವ ಅಧಿಕಾರಿಗಳಿಂದ ಮಾಹಿತಿ ಪಡೆದರು (ಸಂಗ್ರಹ ಚಿತ್ರ)   

ಚಿಂಚೋಳಿ: 4 ವರ್ಷಗಳ ಹಿಂದೆ ಪ್ರವಾಹದಿಂದ ಒಡೆದಿದ್ದ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆಗೆ ಕಾಯಕಲ್ಪ ಯಾವಾಗ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಕಾಲಾವಧಿಯಲ್ಲಿ ನಿರ್ಮಾಣವಾದ ಈ ಕೆರೆ 2020ರಲ್ಲಿ ಸುರಿದ ಮಳೆಯಿಂದ ಒಡೆದಿತ್ತು. ಅಂದು ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದ ಜೆ.ಸಿ ಮಾಧುಸ್ವಾಮಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.

ಸರ್ಕಾರದಿಂದ ಮಂಜೂರಾದ ಅನುದಾನದಿಂದ ಒಡೆದ ಕೆರೆಯ ದುರಸ್ತಿ ಮಾಡಲಾಯಿತು. ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಕೆರೆಯ ಬಂಡ್‌ನಲ್ಲಿ ಬಿರುಕು ಕಾಣಿಸಿಕೊಂಡಿತು.

ಬಿಟ್ಟಿರುವ ಬಿರುಕು ಮುಚ್ಚಲು ಅಧಿಕಾರಿಗಳು ಪ್ರಯತ್ನಿಸಿದರೂ ನಿರಂತರ ಮಳೆಯಿಂದ ಬಿರುಕು ಮತ್ತಷ್ಟು ದೊಡ್ಡದಾಯಿತು. ತಾಡಪಾಲು ಮತ್ತು ಪ್ಲಾಸ್ಟಿಕ್‌ನಿಂದ ಬಿರುಕು ಮುಚ್ಚಿ ಕೆರೆಯ ನೀರು ಖಾಲಿ ಮಾಡಲಾಯಿತು. ಆಗ ಜೆಡಿಎಸ್ ಪಕ್ಷದ ವತಿಯಿಂದ ಮುಖಂಡ ಸಂಜೀವನ ಯಾಕಾಪುರ ನೇತೃತ್ವದಲ್ಲಿ ರಸ್ತೆತಡೆ ನಡೆಸಿ ದುರಸ್ತಿಗೆ ಒತ್ತಾಯಿಸಲಾಗಿತ್ತು.

ADVERTISEMENT

ಈಗ ಕೆರೆ ಖಾಲಿಯಾಗಿ ಎರಡು ವರ್ಷಗಳಿಂದ ನೀರಿಲ್ಲದೇ ಭಣಗುಡುವಂತಾಗಿದೆ. ಜಾನುವಾರುಗಳ ದಾಹ ನೀಗಿಸುವುದರ ಜತೆ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ವರದಾನವಾಗಿದ್ದ ಈ ಕೆರೆ ಬಂಡ್ ಪುನರ್ ನಿರ್ಮಾಣಕ್ಕೆ ಗ್ರಾಮಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಆದರೆ ಸರ್ಕಾರ ಈ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂಬುದು ಇಲ್ಲಿನ ರೈತರ ಆರೋಪ.

ಟ್ರಯಲ್ ಬೋರ್ ಮೂಲಕ ಏರಿ ಮಣ್ಣಿನ ಪರೀಕ್ಷೆಗೆ ಬಾರದ ಹಣ: ಕೆರೆಯ ಏರಿಯ ಮರು ನಿರ್ಮಾಣ ಮಾಡಲು ಕನಿಷ್ಠ ₹5 ಕೋಟಿಗೂ ಅಧಿಕ ಅನುದಾನ ಬೇಕು ಆದರೆ ಕೆರೆಯ ಏರಿಯಲ್ಲಿ ಬಿರುಕು ಬಿಟ್ಟಿದ್ದರಿಂದ ಮಣ್ಣಿನ ಮಾದರಿಯನ್ನು ಪರೀಕ್ಷಿಸಲು ಟ್ರಯಲ್ ಬೋರ್ ಕೊರೆಯುವ ಕಾಮಗಾರಿ ಕೈಗೊಳ್ಳಲು ಸಮೀಕ್ಷೆ ಅನ್ವೇಷಣೆಗಾಗಿ ₹10.75 ಲಕ್ಷ ಅನುದಾನ ಒದಗಿಸುವಂತೆ ವಿಜಯಪುರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ (ಉತ್ತರ ವಲಯ) ಮುಖ್ಯ ಎಂಜೀನಿಯರ್ 2024ರ ಫೆ.2ರಂದು ಸರ್ಕಾರದ ಕಾರ್ಯದರ್ಶಿ(ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ) ಪತ್ರ ಬರೆದಿದ್ದು ಈವರೆಗೂ ಹಣ ಬಿಡುಗಡೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ನಾಗಾಈದಲಾಯಿ ಕೆರೆಯ ಬಂಡ್ ದುರಸ್ತಿ ಅಥವಾ ಏರಿ ಮಣ್ಣಿನ ಪರೀಕ್ಷೆಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಚಿಂಚೋಳಿ ಉಪ ವಿಭಾಗದ ಎಇಇ ಇಂದುಧರ ಮಂಗಲಗಿ ತಿಳಿಸಿದರು.

ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ಕೆರೆ ಬಂಡ ಬಿರುಕು ಬಿಟ್ಟಿರುವುದು ಜಿ.ಪಂ. ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ವೀಕ್ಷಿಸಿದರು (ಸಂಗ್ರಹ ಚಿತ್ರ)

ವೀರೇಂದ್ರ ಪಾಟೀಲ ಕಾಲದಲ್ಲಿ ನಿರ್ಮಾಣವಾಗಿದ್ದ ನಾಗಾಈದಲಾಯಿ ಸಣ್ಣ ನೀರಾವರಿ ಕೆರೆಗೆ ಕಾಯಕಲ್ಪ ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ. ಇದರ ವಿರುದ್ಧ ಸ್ಥಳೀಯರೊಂದಿಗೆ ಸೇರಿ ಶೀಘ್ರವೇ ಪ್ರತಿಭಟನೆ ನಡೆಸುತ್ತೇವೆ

- ಶರಣಬಸಪ್ಪ ಮಮಶೆಟ್ಟಿ ಜಿಲ್ಲಾ ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ

ಈ ಕೆರೆ ಪ್ರತ್ಯಕ್ಷವಾಗಿ 700 ಎಕರೆ ನೀರಾವರಿಗೆ ನೆರವಾದರೆ ಪರೋಕ್ಷವಾಗಿ ಕುಡಿಯುವ ನೀರಿನ ಮತ್ತು ಇತರೆ ರೈತರ ಕೊಳವೆ ಬಾವಿ ತೆರೆದ ಬಾವಿಗಳ ಅಂತರ್ಜಲ ವೃದ್ಧಿಗೆ ನೆರವಾಗುತ್ತದೆ. ಬೇಗ ಪುನರ್ ನಿರ್ಮಾಣ ಮಾಡಿ

- ಶಿವರಾಜ ಸಿಂಧೋಲ ರೈತ ಮುಖಂಡರು ನಾಗಾಈದಲಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.