ಚಿಂಚೋಳಿ: ತಾಲ್ಲೂಕಿನ ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳು ಕಾಯಕಲ್ಪಕ್ಕೆ ಕಾಯುತ್ತಿದ್ದು, ಮಳೆಗಾಲದಲ್ಲಂತೂ ರಸ್ತೆಗಳಲ್ಲಿ ನಿತ್ಯ ಪ್ರಯಾಣಿಕರ ಸರ್ಕಸ್ ಸಾಮಾನ್ಯವಾಗಿದೆ. ಅಲ್ಲಲ್ಲಿ ಬೈಕ್ ಸವಾರರು ಬಿದ್ದು ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿಗಳು ಹೊಂಡ ಮತ್ತು ಗುಂಡಿಗಳಿಂದ ತುಂಬಿವೆ.
ರಾಜ್ಯ ಹೆದ್ದಾರಿಯಲ್ಲಿನ ಬೃಹತ್ ಹೊಂಡಗಳು ಮತ್ತು ಗುಂಡಿಗಳು ಬಲಿಗಾಗಿ ಬಾಯ್ತೆರೆದು ಕಾಯುವಂತೆ ಕಾಣುತ್ತಿವೆ. ರಾತ್ರಿ ಸಮಯದಲ್ಲಿ ಗುಂಡಿಗಳು ಸರಿಯಾಗಿ ಕಾಣದಿರುವುದು ಮತ್ತು ನೀರು ತುಂಬಿರುವುದರಿಂದ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಬೈಕ್ ಸವಾರರು ರಾತ್ರಿ ಪ್ರಯಾಣ ಮಾಡದಿರುವುದು ಉತ್ತಮ ಎನಿಸುವಂತಾಗಿದೆ.
ಭಾಲ್ಕಿ– ಚಿಂಚೋಳಿ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಚಿಮ್ಮಾಈದಲಾಯಿ ಕ್ರಾಸ್‌ನಿಂದ ಐನಾಪುರ ಗಡಿವರೆಗಿನ ರಸ್ತೆ, ರಾಜ್ಯ ಹೆದ್ದಾರಿ 149ರಲ್ಲಿ ಬರುವ ಶಹಾಪುರ– ಶಿವರಾಂಪುರ ಮಾರ್ಗದ ಬುರುಗಪಳ್ಳಿ ಗಡಿಯಿಂದ ಕುಂಚಾವರಂ ಕ್ರಾಸ್ ಹಾಗೂ ಹೊಡೇಬೀರನಹಳ್ಳಿ ಕ್ರಾಸ್‌ನಿಂದ ಗಡಿಕೇಶ್ವಾರ, ಭೂತಪೂರ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಹೆದ್ದಾರಿಗಳ ಸುಧಾರಣೆಗೆ ಹೆಚ್ಚಿನ ಅನುದಾನ ಬೇಕು. ಸರ್ಕಾರ ನೀಡಿದ ಅನುದಾನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಹೀಗಾಗಿ ಉತ್ತಮ ಹೆದ್ದಾರಿಗಳ ಕನಸು ನನಸಾಗುವ ಕಾಲ ದೂರವಿದೆ ಎಂದೇ ಹೇಳಲಾಗುತ್ತಿದೆ.
ಕರ್ಚಖೇಡ ಪೊತಂಗಲ ರಸ್ತೆ ಹಾಳಾಗಿದೆ. ಕುಂಚಾವರಂನಿಂದ ಧರ್ಮಾಸಾಗರವರೆಗಿನ ರಸ್ತೆ, ಕೊಳ್ಳೂರು ಕ್ರಾಸ್‌ನಿಂದ ಸಾಲೇಬೀರನಹಳ್ಳಿ ವಾಯಾ ಯಂಪಳ್ಳಿ, ಮೋತಕಪಳ್ಳಿ ರಸ್ತೆ, ತುಮಕುಂಟಾ ಕ್ರಾಸ್ ಚಿಮ್ಮನಚೋಡ, ಐನಾಪುರ ಸಾಲೇಬೀರನಹಳ್ಳಿ, ಖಾನಾಪುರ-ಭೂಂಯಾರ ಗಡಿವರೆಗಿನ ರಸ್ತೆಗಳು ಸಹ ಹಾಳಾಗಿವೆ.
‘ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಿಂದ ಕೆಕೆಆರ್‌ಡಿಬಿಯ ಕಲ್ಯಾಣ ಪಥ ಯೋಜನೆ ಅಡಿಯಲ್ಲಿ ಪಿಎಂಜಿಎಸ್‌ವೈ ವಿಭಾಗದ ಮೂಲಕ ಅನುದಾನ ಮಂಜೂರು ಮಾಡಿಸಲಾಗಿದ್ದು ಇವುಗಳು ಟೆಂಡರ್ ಹಂತದಲ್ಲಿವೆ. ಲೋಕೋಪಯೋಗಿ ಇಲಾಖೆಯ ವಿವಿಧ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳು ಹಾಳಾಗಿದ್ದರಿಂದ ಗುಂಡಿ ಮುಚ್ಚಲು ನಿರ್ವಹಣೆ ಅನುದಾನದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿವೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ಬೈನೂರು ತಿಳಿಸಿದರು.
3 ವರ್ಷ ಕಳೆದರೂ ನಡೆಯದ ಕಾಮಗಾರಿ: ಭಾಲ್ಕಿ ಚಿಂಚೋಳಿ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಕನಕಪುರದಿಂದ ಚಿಮ್ಮನಚೋಡ ಮಾರ್ಗದ 4 ಕಿ.ಮೀ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದು 3 ವರ್ಷ ಗತಿಸಿದರೂ ಗುತ್ತಿಗೆದಾರ ಕಾಮಗಾರಿ ನಡೆಸಿಲ್ಲ. ಆರಂಭದಲ್ಲಿ ಕಾಮಗಾರಿ ಆರಂಭಿಸಿದ್ದರು. ನಂತರ ಕಾಮಗಾರಿ ನಿಲ್ಲಿಸಿದ್ದಾರೆ. ಇದರಿಂದ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.
ಸುಸ್ಥಿತಿಯಲ್ಲಿ ರಸ್ತೆಗಳು: ಬಾಪೂರ ಮಹಿಬೂಬನಗರ ರಾಷ್ಟ್ರೀಯಯ ಹೆದ್ದಾರಿಯಲ್ಲಿ ಬರುವ ಚಿಂಚೋಳಿ– ಬೀದರ್ ಮತ್ತು ರಾಜ್ಯ ಹೆದ್ದಾರಿ ಉಮ್ಮರ್ಗಾ– ಸುಲೇಪೇಟ ಮಾರ್ಗದ ಹೊಡೇಬೀರನಹಳ್ಳಿಯಿಂದ ಕೋಡ್ಲಿವರಗಿನ ರಸ್ತೆ ಮತ್ತು ಚಂದನಕೇರಾದಿಂದ ಐನಾಪುರವರೆಗಿನ ರಸ್ತೆ ಸೇರಿದಂತೆ ಸುಲೇಪೇಟ ಪಸ್ತಪುರ ಜಿಲ್ಲಾ ಮುಖ್ಯ ರಸ್ತೆ ಮತ್ತು ಕೆಲವು ಗ್ರಾಮೀಣ ರಸ್ತೆಗಳು ಸುಸ್ಥಿತಿಯಲ್ಲಿವೆ.
ಹೆದ್ದಾರಿಗೆ ಚೆಟ್ಟಿನಾಡ್ ಬಲ: ಭಕ್ತಂಪಳ್ಳಿದಿಂದ ಬುರುಗಪಳ್ಳಿ ಗಡಿವರೆಗಿನ ರಾಜ್ಯ ಹೆದ್ದಾರಿ 149ರಲ್ಲಿ ಬರುವ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಚೆಟ್ಟಿನಾಡ ಸಿಮೆಂಟ್ ಕಂಪನಿಯವರು ಮುರುಮ್ ಹಾಕಿ ಸಮತಟ್ಟು ಮಾಡಿ ವಾಹನ ಸಂಚರಿಸುವಂತೆ ಮಾಡುತ್ತಿದ್ದಾರೆ. ಈ ಕೆಲಸ ಪ್ರಗತಿಯಲ್ಲಿದೆ.
ನನ್ನ ಮತಕ್ಷೇತ್ರ ವ್ಯಾಪ್ತಿಯ ಚಿಂಚೋಳಿ ತಾಲ್ಲೂಕಿನ ಹೊಡೇಬೀರನಹಳ್ಳಿ ಗಡಿಕೇಶ್ವಾರ ಕೊರಡಂಪಳ್ಳಿ ಜಟ್ಟೂರು ಪೊತಂಗಲ್ ಹಲಕೋಡಾ ಮೊದಲಾದ ಗ್ರಾಮೀಣ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಕೈಗೊಳ್ಳಲು ₹ 34 ಕೋಟಿ ಹೆದ್ದಾರಿಗೆ ₹ 8 ಕೋಟಿ ಮಂಜೂರು ಮಾಡಿಸಲಾಗಿದೆಡಾ. ಶರಣಪ್ರಕಾಶ ಪಾಟೀಲ ಸಚಿವ
ಪಿಎಂಜಿಎಸ್‌ವೈ ₹ 11 ಕೋಟಿ ಎಸ್‌ಎಚ್‌ಡಿಪಿ ₹ 10 ಕೋಟಿ ಹಾಗೂ ಕೆಕೆಆರ್‌ಡಿಬಿಯಿಂದ ₹ 40 ಕೋಟಿ ಹೀಗೆ ಚಿಂಚೋಳಿ ಮತಕ್ಷೇತ್ರದ ವಿವಿಧ ರಸ್ತೆಗಳ ಸುಧಾರಣೆಗೆ ಸುಮಾರು ₹ 60 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆಡಾ. ಅವಿನಾಶ ಜಾಧವ ಚಿಂಚೋಳಿ ಶಾಸಕ
ತಾಲ್ಲೂಕಿನಲ್ಲಿ ಹೆದ್ದಾರಿಗಳ ಸ್ಥಿತಿ ಶೋಚನೀಯವಾಗಿದೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಮರೆತಿದ್ದರಿಂದ ಜನ ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ವಿಶೇಷ ಅನುದಾನ ನೀಡಿ ಹೆದ್ದಾರಿ ಸುಧಾರಣೆ ಕೈಗೊಳ್ಳಬೇಕುದೀಪಕನಾಗ ಪುಣ್ಯಶೆಟ್ಟಿ ಮಾಜಿ ಅಧ್ಯಕ್ಷ ಜಿ.ಪಂ. ಕಲಬುರಗಿ
ಚಿಂಚೋಳಿ ತಾಲ್ಲೂಕು ಅಭಿವೃದ್ಧಿ ಪಥದತ್ತ ಸಾಗಿದೆ. ಇಲ್ಲಿಗೆ ಸಿಮೆಂಟ್ ಕಂಪನಿಗಳು ಇಥೆನಾಲ ಘಟಕ ಹಲವು ಸೋಲಾರ ವಿದ್ಯುತ್ ಘಟಕಗಳು ಬಂದಿವೆ. ಅಭಿವೃದ್ಧಿ ವೇಗ ಪಡೆಯಲು ಹೆದ್ದಾರಿಗಳಿಗೆ ಕಾಯಕಲ್ಪ ನೀಡಬೇಕುಅಶೋಕ ಮೊಗದಂಪುರ ಮುಖಂಡ ಕುಂಚಾವರಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.