ADVERTISEMENT

ಚಿಂಚೋಳಿ | ಪೂರ್ಣಗೊಳ್ಳದ ಪದವಿ ಕಾಲೇಜು ಕಟ್ಟಡ

6 ವರ್ಷಗಳ ಹಿಂದೆ ಕಾಮಗಾರಿ ಆರಂಭ, ಕಾಲೇಜು ಶಿಕ್ಷಣ ನಿರ್ದೇಶಕರ ಪತ್ರಕ್ಕೂ ಕಿಮ್ಮತ್ತಿಲ್ಲ

ಜಗನ್ನಾಥ ಡಿ.ಶೇರಿಕಾರ
Published 18 ಜೂನ್ 2024, 6:33 IST
Last Updated 18 ಜೂನ್ 2024, 6:33 IST
ಚಿಂಚೋಳಿ ತಾಲ್ಲೂಕು ಸುಲೇಪೇಟದಲ್ಲಿ ಅಪೂರ್ಣವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಮಹಡಿಯ ಕಟ್ಟಡ ಅಪೂರ್ಣವಾಗಿದೆ
ಚಿಂಚೋಳಿ ತಾಲ್ಲೂಕು ಸುಲೇಪೇಟದಲ್ಲಿ ಅಪೂರ್ಣವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಮಹಡಿಯ ಕಟ್ಟಡ ಅಪೂರ್ಣವಾಗಿದೆ   

ಚಿಂಚೋಳಿ: ತಾಲ್ಲೂಕಿನ ಸುಲೇಪೇಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಹೆಚ್ಚುವರಿ ಕೊಠಡಿಗಳು) ಮೊದಲ ಮಹಡಿಯ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ 6 ವರ್ಷಗಳು ಕಳೆದಿವೆ. ಕಾಮಗಾರಿ ನನೆಗುದಿಗೆ ಬಿದ್ದಿದ್ದರಿಂದ ಈವರೆಗೂ ಪೂರ್ಣಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

2017-18ನೇ ಸಾಲಿನಲ್ಲಿ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ₹ 1 ಕೋಟಿ ಮಂಜೂರಾಗಿದೆ. ಈಗಾಗಲೇ ನಿರ್ಮಾಣದ ಹೊಣೆ ಹೊತ್ತಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ₹ 96.60 ಲಕ್ಷ ಹಣ ಬಿಡುಗಡೆಯಾಗಿದೆ. ಆದರೆ ಕಟ್ಟಡ ಮಾತ್ರ ಅಪೂರ್ಣವಾಗಿಯೇ ಉಳಿದಿದೆ.

ಸುಲೇಪೇಟ ಶೈಕ್ಷಣಿಕವಾಗಿ ಪ್ರಾಮುಖ್ಯತೆ ಪಡೆದ ಪಟ್ಟಣವಾಗಿದೆ. ಈ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್‌ಸಿ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈವರೆಗೆ ಕೇವಲ ಕಲಾ ವಿಭಾಗದ ಶಿಕ್ಷಣ ಮಾತ್ರ ನೀಡಲಾಗುತ್ತಿತ್ತು. ಸದ್ಯ ಬಿಎ ವಿಭಾಗದಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ಪ್ರಸಕ್ತ ವರ್ಷದಿಂದ ಬಿ.ಕಾಂ ಆರಂಭಿಸಲಾಗಿದ್ದು, 21 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಬಿಎಸ್‌ಸಿ ಕೂಡ ಆರಂಭಿಸುವ ಯೋಜನೆಯಿದೆ. ಆದರೆ ಕೊಠಡಿಗಳ ಕೊಠಡಿಗಳ ಕೊರತೆಯಿದೆ. ಜತೆಗೆ ಕ್ರೀಡೆ, ಐಕ್ಯುಎಸಿ, ಸಿಬ್ಬಂದಿ ಕೊಠಡಿಗಳ ಕೊರತೆಯಿದೆ. ಹೀಗಾಗಿ ಕಟ್ಟಡ ಪೂರ್ಣಗೊಳ್ಳುವುದಕ್ಕೆ ಜಾತಕ ಪಕ್ಷಿಯಂತೆ ಕಾಲೇಜು ಸಿಬ್ಬಂದಿ ಕಾಯುತ್ತಿದ್ದಾರೆ.

ADVERTISEMENT

ಕಾಲೇಜಿನಲ್ಲಿ ಬಿ.ಎ 6 ಸೆಮಿಸ್ಟರ್ ಪಠ್ಯ ಬೋಧನೆಯಿದ್ದು, ಬೇಸಿಕ್ ವಿಷಯ ಬೊಧನೆಗೆ ತೊಂದರೆಯಾಗುತ್ತಿಲ್ಲ. ಆದರೆ ಕಟ್ಟಡದ ಕೊರತೆಯಿಂದ ಐಚ್ಛಿಕ ವಿಷಯಗಳ ಬೋಧನೆಗೆ ತೊಂದರೆ ಎದುರಾಗಿದೆ.

ಕಾಮಗಾರಿ ಪೂರ್ಣಗೊಳಿಸಲಿ: ಕೆಆರ್‌ಐಡಿಎಲ್ ಅಧಿಕಾರಿಗಳು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬ ಮಾಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆ ನೀಡಿದ ಕೆಆರ್‌ಐಡಿಎಲ್‌ಗೆ ದಂಡ ವಿಧಿಸಬೇಕು ಎಂದು ಬಿಜೆಪಿ ಮುಖಂಡ ಮಹೇಶ ಬೇಮಳಗಿ ಒತ್ತಾಯಿಸಿದ್ದಾರೆ.

ಪ್ರಾಂಶುಪಾಲ ದಶರಥ ನಾಯನೂರ ಅವರು, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಿಗೆ ತರಗತಿ ನಡೆಸಲು ಆಗುತ್ತಿರುವ ತೊಂದರೆ ಹಾಗೂ ಕೊಠಡಿಗಳ ಕೊರತೆ ಮತ್ತು ಅಪೂರ್ಣ ಕಟ್ಟಡದ ಕುರಿತು ಪತ್ರ ಬರೆದು ಸಮಸ್ಯೆ ಮನವರಿಕೆ ಮಾಡಿದ್ದರಿಂದ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೆಶಕರಿಗೆ ಮಾರ್ಚ 4ರಂದು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ₹ 1 ಕೋಟಿ ಮೊತ್ತದಲ್ಲಿ ಈಗಾಗಲೇ ₹96.50ಲಕ್ಷ ಹಣ ಬಿಡುಗಡೆ ಮಾಡಿದ್ದು, ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಕಾಲೇಜು ಪ್ರಾಂಶುಪಾಲರಿಗೆ ಕಟ್ಟಡ ಹಸ್ತಾಂತರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿದ್ದರೂ ನಿಗಮದ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳ ಪತ್ರಕ್ಕೂ ನಿಗಮದ ಅಧಿಕಾರಿಗಳು ಕ್ಯಾರೆ ಎನ್ನದಂತಾಗಿದೆ. ಈ ಕುರಿತು ಪ್ರತಿಕ್ರಿಯೆಗಾಗಿ ನಿಗಮದ ಎಇಇಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ.

ಚಿಂಚೋಳಿ ತಾಲ್ಲೂಕು ಸುಲೇಪೇಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೊದಲ ಮಹಡಿಯ ಕಟ್ಟಡ ಪ್ಲಾಸ್ಟರಿಂಗ ಕಿಟಕಿ ಬಾಗಿಲು ಕಾಮಗಾರಿ ಬಾಕಿ ಉಳಿದಿರುವುದು
ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವರು

ಕುಂಟುನೆಪ ಹೇಳುವ ಅಧಿಕಾರಿಗಳು ₹ 1 ಕೋಟಿ ವೆಚ್ಚದ ಕಟ್ಟಡ ಕಾಮಗಾರಿ ₹ 96.5 ಲಕ್ಷ ಮೊತ್ತ ಬಿಡುಗಡೆ

ಸುಲೇಪೇಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸುತ್ತೇನೆ

–ಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.