ADVERTISEMENT

ಚಿಂಚೋಳಿ: ಅತಿಥಿಗಳಿಂದಲೇ ಸಾಗಿದ ಪದವಿ ಪೂರ್ವ ಶಿಕ್ಷಣ

ಚಿಂಚೋಳಿ: ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಖಾಲಿ ಖಾಲಿ

ಜಗನ್ನಾಥ ಡಿ.ಶೇರಿಕಾರ
Published 19 ಜೂನ್ 2024, 5:09 IST
Last Updated 19 ಜೂನ್ 2024, 5:09 IST
ಚಿಂಚೋಳಿಯ ಸರ್ಕಾರಿ ಕನ್ಯಾ ಪಿಯು ಕಾಲೇಜಿನ ಕಟ್ಟಡ ನೋಡಲು ಆಕರ್ಷಕವಾಗಿದೆ. ಮಳೆಗಾಲದಲ್ಲಿ ಕಿಟಕಿಯಿಂದ ನೀರು ಒಳಗೆ ಬರುವ ಕಾರಣ ಇದನ್ನು ಬಳಸುತ್ತಿಲ್ಲ
ಚಿಂಚೋಳಿಯ ಸರ್ಕಾರಿ ಕನ್ಯಾ ಪಿಯು ಕಾಲೇಜಿನ ಕಟ್ಟಡ ನೋಡಲು ಆಕರ್ಷಕವಾಗಿದೆ. ಮಳೆಗಾಲದಲ್ಲಿ ಕಿಟಕಿಯಿಂದ ನೀರು ಒಳಗೆ ಬರುವ ಕಾರಣ ಇದನ್ನು ಬಳಸುತ್ತಿಲ್ಲ   

ಚಿಂಚೋಳಿ: ಪದವಿಪೂರ್ವ ಶಿಕ್ಷಣ ಯುವಕರ ಭವಿಷ್ಯಕ್ಕೆ ತಿರುವು ಕೊಡುವ ಅತ್ಯಮೂಲ್ಯ ಘಟ್ಟ. ಆದರೆ, ಈ ಶಿಕ್ಷಣ ನೀಡುವ ತಾಲ್ಲೂಕಿನ ಸರ್ಕಾರಿ ಕಾಲೇಜುಗಳಲ್ಲಿ ಅಗತ್ಯವಾದ ಬೋಧಕರ ಹುದ್ದೆಗಳು ಖಾಲಿ ಇರುವುದರಿಂದ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸುವಂತಾಗಿದೆ.

ತಾಲ್ಲೂಕಿನಲ್ಲಿ ಚಿಂಚೋಳಿ (ಕನ್ಯಾ), ಚಿಂಚೋಳಿ (ಚಂದಾಪುರ) ಬಾಲಕರ ಮತ್ತು ಸುಲೇಪೇಟ ರುದ್ನೂರು ಮತ್ತು ಚಂದನಕೇರಾ ಪದವಿ ಪೂರ್ವ ಕಾಲೇಜುಗಳು ಖಾಲಿ ಹುದ್ದೆಗಳಿಂದ ಬಸವಳಿದಿದೆ. ಪ್ರಾಂಶುಪಾಲ ಸಹಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಒಂದೆಡೆಯಾದರೆ, ಕಟ್ಟಡ ಹೊರತುಪಡಿಸಿ ಉಳಿದ ಮೂಲಸೌಕರ್ಯಗಳ ಕೊರತೆಯೂ ಕಾಲೇಜುಗಳನ್ನು ಕಾಡುತ್ತಿದೆ.

ಚಿಂಚೋಳಿಯ ಚಂದಾಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಸುಲೇಪೇಟದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪಿಯು ಶಿಕ್ಷಣ ನೀಡಿದರೆ, ಚಂದನಕೇರಾ, ರುದ್ನೂರು ಮತ್ತು ಚಿಂಚೋಳಿಯ ಕನ್ಯಾ ಪಿಯು ಕಾಲೇಜುಗಳು ಕೇವಲ ಕಲಾ ವಿಭಾಗಕ್ಕೆ ಸೀಮಿತವಾಗಿವೆ.

ADVERTISEMENT

ಚಿಂಚೋಳಿಯ ಚಂದಾಪುರದ ಸರ್ಕಾರಿ ಪಿಯು ಕಾಲೇಜು ಉತ್ತಮ ಮೂಲಸೌಕರ್ಯಗಳೊಂದಿಗೆ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿ 13 ಮಂಜೂರಾದ ಹುದ್ದೆಗಳಿದ್ದು, ಪ್ರಾಂಶುಪಾಲ ಸಹಿತ ಕನ್ನಡ, ಅರ್ಥಶಾ‌ಸ್ತ್ರ, ಸಮಾಜವಿಜ್ಞಾನ, ಹಿಂದಿ, ವ್ಯವಹಾರ ಅಧ್ಯಯನ, ರಸಾಯನ ವಿಜ್ಞಾನ, ಜೀವವಿಜ್ಞಾನ, ಗಣಕ ವಿಜ್ಞಾನ ಉಪನ್ಯಾಸಕರ ಹುದ್ದೆಗಳು ಖಾಲಿಯಿವೆ. ವಿಜ್ಞಾನ ಪ್ರಯೋಗಾಲಯ, ತೆರೆದ ಜಿಮ್, ಡಿಜಿಟಲ್ ಲ್ಯಾಬ್‌ ಸಹಿತ ಅಗತ್ಯ ಸೌಲಭ್ಯಗಳಿವೆ. ಪ್ರಸ್ತುತ ಇಲ್ಲಿ 51 ಮಂದಿ ಪ್ರವೇಶ ಪಡೆದಿದ್ದಾರೆ. ದ್ವಿತೀಯ ಪಿಯುನಲ್ಲಿ 317 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ 60 ಪಿಯು ಕಾಲೇಜುಗಳನ್ನು ಆದರ್ಶ ಪಿಯು ಕಾಲೇಜುಗಳೆಂದು ಘೋಷಿಸಿದ್ದು, ಅದರಲ್ಲಿ ಈ ಕಾಲೇಜು ಸೇರಿದೆ.

ತಾಲ್ಲೂಕಿನ ಸುಲೇಪೇಟದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲ ಮತ್ತು ವಿಜ್ಞಾನ ವಿಭಾಗದ ನಾಲ್ವರು ಉಪನ್ಯಾಸಕರ ಹುದ್ದೆ ಮತ್ತು ಡಿ ಗ್ರೂಪ್–1 ಹುದ್ದೆ ಖಾಲಿಯಿವೆ.

ವಾಣಿಜ್ಯ ವಿಭಾಗದಲ್ಲಿ ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರವನ್ನು ಒಬ್ಬರೇ ಉಪನ್ಯಾಸಕರು ಬೋಧಿಸುತ್ತಿದ್ದಾರೆ. ಕಾಲೇಜಿನಲ್ಲಿ ಪ್ರಸಕ್ತ ವರ್ಷ 30 ಮಂದಿ (ಕಲಾ–22, ವಾಣಿಜ್ಯ–4, ವಿಜ್ಞಾನ–4) ಪ್ರವೇಶ ಪಡೆದಿದ್ದಾರೆ. ದ್ವಿತೀಯ ಪಿಯುನಲ್ಲಿ 203 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಮೂಲಸೌಕರ್ಯಗಳ ಕೊರತೆಯಿಲ್ಲ ಎಂದು ಪ್ರಭಾರ ಪ್ರಾಂಶುಪಾಲ ಶರಣಬಸಪ್ಪ ಗಂಗಾಣಕರ್ ತಿಳಿಸಿದರು.

ಚಿಂಚೋಳಿ ಕನ್ಯಾ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲ ಮತ್ತು ಇತಿಹಾಸ ಉಪನ್ಯಾಸಕರು ಮಾತ್ರ ಇದ್ದಾರೆ. ಕನ್ನಡ, ಇಂಗ್ಲಿಷ್‌, ಅರ್ಥಶಾಸ್ತ್ರ, ಸಮಾಜವಿಜ್ಞಾನ, ರಾಜ್ಯಶಾಸ್ತ್ರ ಉಪನ್ಯಾಸಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಖಾಲಿಯಿವೆ. ಇಲ್ಲಿ ಸಮರ್ಪಕ ಆವರಣ ಗೋಡೆ ಇಲ್ಲದ ಕಾರಣ ಬಾಲಕಿಯರ ಕಾಲೇಜಿನಲ್ಲಿ ಸಂಬಂಧವಿಲ್ಲದವರು ಬರುವುದು ಮಾಮೂಲಾಗಿದೆ. ಪ್ರಸಕ್ತ ವರ್ಷ ಪಿಯು ಪ್ರಥಮ ವರ್ಷಕ್ಕೆ 4 ಜನ ಹಾಗೂ ದ್ವಿತೀಯ ಪಿಯುಗೆ 39 ಮಂದಿ ಪ್ರವೇಶ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಅಶೋಕಕುಮಾರ ಬಾವಗೆ ಮಾಹಿತಿ ನೀಡಿದರು.

ತಾಲ್ಲೂಕಿನ ರುದ್ನೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲ ಹುದ್ದೆ ಮಾತ್ರ ಖಾಲಿಯಿದೆ. ಆವರಣ ಗೋಡೆ ಅಗತ್ಯವಿದೆ. ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯವಿದೆ.

ಪ್ರಸಕ್ತ ವರ್ಷ 6 ಮಂದಿ ಪ್ರವೇಶ ಪಡೆದಿದ್ದು, ದ್ವಿತೀಯ ಪಿಯುನಲ್ಲಿ 26 ಮಂದಿ ಅಭ್ಯಾಸ ಮಾಡುತ್ತಿದ್ದಾರೆ.

ತಾಲ್ಲೂಕಿನ ಚಂದನಕೇರಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲ ಸಹಿತ 7 ಉಪನ್ಯಾಸಕರ ಹುದ್ದೆಗಳ ಮಂಜೂರಾತಿಯಿದ್ದು, ಪ್ರಾಂಶುಪಾಲ, ಇಂಗ್ಲಿಷ್‌, ಅರ್ಥಶಾಸ್ತ್ರ ಉಪನ್ಯಾಸಕರ ಹುದ್ದೆಗಳು ಖಾಲಿಯಿವೆ. ಜತೆಗೆ ದ್ವಿತೀಯ ದರ್ಜೆ ಸಹಾಯಕ ಮತ್ತು ಡಿ ಗ್ರೂಪ್‌ ಹುದ್ದೆ ಕಾಲೇಜು ಪ್ರಾರಂಭವಾದಾಗಿನಿಂದ ಖಾಲಿಯಿವೆ. ಕಾಲೇಜಿಗೆ ಆವರಣ ಗೋಡೆ ಮತ್ತು ಮಕ್ಕಳಿಗೆ ಡೆಸ್ಕ್ ಹಾಗೂ ಸಿಬ್ಬಂದಿಗೆ ಖುರ್ಚಿ, ಟೇಬಲ್ ಕೊರತೆಯಿದೆ.

ಪ್ರಥಮ ಪಿಯು ಪ್ರವೇಶಕ್ಕೆ ಮಕ್ಕಳ ಕೊರತೆ ಸುಸಜ್ಜಿತ ಕಾಲೇಜು ಕಟ್ಟಡ, ಹೆಚ್ಚುವರಿ ಕೊಠಡಿಗಳು 5 ಕಾಲೇಜುಗಳಲ್ಲಿ ಕೇವಲ 2ರಲ್ಲಿ ಮಾತ್ರ ವಿಜ್ಞಾನ ಶಿಕ್ಷಣ

ಚಿಂಚೋಳಿಯ ಸರ್ಕಾರಿ ಬಾಲಕರ ಪಿಯು ಕಾಲೇಜಿನ ಬಗ್ಗೆ ಹೆಮ್ಮೆಯಿದೆ. ಇಲ್ಲೇ ಓದಿ ದ್ವಿತೀಯ ಪಿಯು ವಿಜ್ಞಾನದಲ್ಲಿ 519 ಅಂಕಗಳಿಸಿದ್ದೇನೆ. ಗುಣಮಟ್ಟದ ಶಿಕ್ಷಣಕ್ಕೆ ಕೊರತೆಯಿಲ್ಲ

-ಅದೀಬಾ ಸಯ್ಯದ್ ಹಳೆ ವಿದ್ಯಾರ್ಥಿನಿ

ನಮ್ಮ ಕಾಲೇಜಿನಲ್ಲಿ ಸಿಬ್ಬಂದಿ ಕುಳಿತುಕೊಳ್ಳಲು ಫರ್ನಿಚರ್ ಮತ್ತು ವಿದ್ಯಾರ್ಥಿಗಳಿಗೆ ಡೆಸ್ಕ್‌ಗಳ ಕೊರತೆಯಿದೆ. ಜತೆಗೆ ಆವರಣ ಗೋಡೆಯೂ ಬಿದ್ದಿದ್ದು ಮತ್ತೆ ನಿರ್ಮಿಸಬೇಕಾಗಿದೆ.

-ಕುಸುಮಾ ಪ್ರಕಾಶ ಬೋಯಿ ಪ್ರಭಾರ ಪ್ರಾಂಶುಪಾಲರು ಸರ್ಕಾರಿ ಪಿಯು ಕಾಲೇಜು ಚಂದನಕೇರಾ

ಕಾಲೇಜಿನಲ್ಲಿ ಉತ್ತಮ ಸೌಲಭ್ಯಗಳಿವೆ. ಕಳೆದ ವರ್ಷ ಶೇ 91ರಷ್ಟು ಫಲಿತಾಂಶ ಬಂದಿದೆ. ಇದಕ್ಕೆ ಆದರ್ಶ ಮಹಾವಿದ್ಯಾಲಯವೆಂದು ಸರ್ಕಾರ ಘೋಷಿಸಿದ್ದು ಕೆಲಸ ಮಾಡಲು ಇನ್ನಷ್ಟು ಉತ್ಸಾಹ ಬಂದಿದೆ.

-ಮಲ್ಲಿಕಾರ್ಜುನ ಪಾಲಾಮೂರ ಪ್ರಭಾರ ಪ್ರಾಂಶುಪಾಲರು ಸರ್ಕಾರಿ ಪಿಯು ಕಾಲೇಜು ಚಂದಾಪುರ

ಉತ್ತಮ ಸೌಲಭ್ಯಗಳಿರುವುದರಿಂದ ನಾನು ಚಿಂಚೋಳಿಯ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದು ದ್ವಿತೀಯ ಪಿಯು ಓದುತ್ತಿದ್ದೇನೆ

-ಮುದಾಸೀರ್ ದ್ವಿತೀಯ ಪಿಯು ವಿದ್ಯಾರ್ಥಿ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.