ADVERTISEMENT

ಚಿಂಚೋಳಿ | ವನ್ಯಜೀವಿ ಧಾಮ; ಮರಿಚೀಕೆಯಾದ ಪರಿಸರ ಪ್ರವಾಸೋದ್ಯಮ ಉತ್ತೇಜನ

ಬಿಸಿಲು ನಾಡಿನಲ್ಲಿ ನೆಲೆಸಿದ ಮಲೆನಾಡಿನ ಮಗಳು, ವನ್ಯಜೀವಿ ಧಾಮಕ್ಕೆ ಭೇಟಿ ನೀಡದ ಅರಣ್ಯ ಸಚಿವ!

ಜಗನ್ನಾಥ ಡಿ.ಶೇರಿಕಾರ
Published 27 ಸೆಪ್ಟೆಂಬರ್ 2024, 5:08 IST
Last Updated 27 ಸೆಪ್ಟೆಂಬರ್ 2024, 5:08 IST
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿಯ ಜಲಾಶಯದ ನಡುಗಡ್ಡೆಯಲ್ಲಿ ವೀಕ್ಷಣ ಗೋಪುರ ನಿರ್ಮಿಸಿರುವುದು
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿಯ ಜಲಾಶಯದ ನಡುಗಡ್ಡೆಯಲ್ಲಿ ವೀಕ್ಷಣ ಗೋಪುರ ನಿರ್ಮಿಸಿರುವುದು   

ಚಿಂಚೋಳಿ: ಇಲ್ಲಿ ಸಂಚರಿಸಿದರೆ, ಜುಳು ಜುಳು ಹರಿಯುವ ನದಿ ತೊರೆಗಳ ನೀನಾದ, ಧುಮ್ಮಿಕ್ಕಿ ಹರಿಯುವ ಜಲಪಾತಗಳ ವೈಯ್ಯಾರ, ಮನಸೂರೆಗೊಳಿಸುವ ಬಾನಾಡಿಗಳ ಕಲರವ, ಚಂಗನೇ ಹಾರಿ ಪೊದೆಗಳಲ್ಲಿ ಮರೆಯಾಗುವ ವನ್ಯಜೀವಿಗಳ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ.

ಕಲ್ಯಾಣದಲ್ಲಿ ಎರಡೇ ಕಾಲ ಒಂದು ಬೇಸಿಗೆ ಕಾಲ ಮತ್ತೊಂದು ಬಿರು ಬೇಸಿಗೆ ಕಾಲ ಆದರೆ ಇಂತಹ ಬಿರು ಬೇಸಿಗೆ ತಾಪದ ನೆಲದಲ್ಲಿ ಮಲೆನಾಡಿನ ಮಗಳು ಮೈದುಂಬಿಕೊಂಡು ಜನಮನ ತಣಿಸುತ್ತಿದ್ದಾಳೆ. ಇವಳನ್ನು ನೋಡಲು ಹಾತೊರೆಯವವರೆಲ್ಲರೂ ಸೌಲಭ್ಯಗಳ ಕೊರತೆಯಿಂದ ಬಸವಳಿದಿದ್ದಾರೆ.

ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆ ಹೊಂದಿರುವ ಕಲಬುರಗಿ ಜಿಲ್ಲೆಯ ಪ್ರಸಿದ್ಧ ಪರಿಸರ ತಾಣ ಕುಂಚಾವರಂ ವನ್ಯಜೀವಿಧಾಮ ಪ್ರವಾಸಿಗರನ್ನು ಕೈಬೀಸಿ ಕರೆಯುವ ರಮ್ಯತಾಣ. ಆದರೆ ಇಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯಗಳು ಮರಿಚೀಕೆಯಾಗಿವೆ.

ADVERTISEMENT

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಾಗಿ ದಶಕ ಕಳೆಯುತ್ತಿದ್ದರೂ ವನ್ಯಜೀವಿಧಾಮದ ಪರಿಸರ ಪ್ರವಾಸಿ ತಾಣಗಳ ಅಭಿವೃದ್ಧಿ ಮರಿಚೀಕೆಯಾಗಿದೆ.

ಅಪರೂಪದ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲಕ್ಕೆ ಆಸರೆ ನೀಡಿದ ಮಲೆನಾಡಿನ ಮಗಳ ಸೌಂದರ್ಯಕ್ಕೆ ಪಾರವೇ ಇಲ್ಲ. ಆದರೆ ಪ್ರವಾಸಿಗರು ಹಾಗೆ ಬಂದು ಹೀಗೆ ಹೋಗುವಂತಾಗಿದೆ. ಅವರಿಗೆ ತಂಗಲು ಸರಿಯಾದ ವ್ಯವಸ್ಥೆಯಿಲ್ಲ. ಮಕ್ಕಳಿಗೆ ಮನರಂಜನಾ ಚಟುವಟಿಕೆಗಳಿಗೆ ಸೌಲಭ್ಯಗಳಿಲ್ಲದಂತಾಗಿದೆ.

ಚಂದ್ರಂಪಳ್ಳಿ ಜಲಾಶಯದಲ್ಲಿ ದೋಣಿ ವಿಹಾರ, ಟ್ರೀ ಪಾರ್ಕ್‌, ವನ್ಯಜೀವಿ ಧಾಮದಲ್ಲಿ ಸಫಾರಿ ಚಟುವಟಿಕೆ ಮರಿಚೀಕೆಯಾಗಿವೆ. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಇಕೊ ಟೂರಿಸಂ ಕನಸಾಗಿಯೇ ಉಳಿದಿದೆ.

ಇಲ್ಲಿ ಇಕೋ ಟೂರಿಸಂ ಅಭಿವೃದ್ಧಿಗಾಗಿ ಸಿ.ಪಿ,ಯೋಗೇಶ್ವರ, ಅರವಿಂದ ಲಿಂಬಾಬಳಿ ಭೇಟಿ ನೀಡಿ ಸಾಧ್ಯಾಸಾಧ್ಯತೆ ಕುರಿತು ಸಭೆಗಳನ್ನು ಚಂದ್ರಂಪಳ್ಳಿಯಲ್ಲಿಯೇ ನಡೆಸಿದ್ದರು. ಆದರೆ ಇದೇ ಭಾಗದವರಾದ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಖಾತೆಯ ಸಚಿವರಾಗಿ ಒಂದೂವರೆ ವರ್ಷವಾದರೂ ವನ್ಯಜೀವಿ ಧಾಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ನಮ್ಮ ಭಾಗದವರೇ ಹೀಗೆ ತಾತ್ಸಾರ ಮಾಡಿದರೆ ಹೇಗೆ ಎಂಬ ಪ್ರಶ್ನೆ ಪರಿಸರ ಪ್ರವಾಸಿಗರಿಂದ ಕೇಳಿ ಬರುತ್ತಿದೆ.

ಅವಿಭಜಿತ ತಾಲ್ಲೂಕಿನಲ್ಲಿ ಡೀಮ್ಡ್ ಅರಣ್ಯ ಸೇರಿ 1ಲಕ್ಷ ಎಕರೆ ಅರಣ್ಯ ಪ್ರದೇಶವಿದೆ. ಇಲ್ಲಿ ಪರಿಸರ ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮ ಉತ್ತೇಜಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ.

ಪರಿಸರ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಮೂಲಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ವ್ಯಾಪಾರ ವಹಿವಾಟು ಹೆಚ್ಚುತ್ತದೆ.
–ಡಾ.ತುಕಾರಾಮ ಪವಾರ್, ಮುಖಂಡ ಚಿಂಚೋಳಿ
ಕುಂಚಾವರಂ ವನ್ಯಜೀವಿಧಾಮ ನಮ್ಮ ಹೆಮ್ಮೆ. ಸಚಿವ ಈಶ್ವರ ಖಂಡ್ರೆ ಅವರು ವನ್ಯಜೀವಿ ಧಾಮ ಅಭಿವೃದ್ಧಿಗೆ ಮುಂದಾಗುವ ವಿಶ್ವಾಸವಿದೆ. ಅವರು ಸುಳ್ಳು ಹೇಳುವ ರಾಜಕಾರಣಿಯಲ್ಲ.
–ಉಮಾ ಪಾಟೀಲ, ಸಾಮಾಜಿಕ ಕಾರ್ಯಕರ್ತೆ

ನಡುಗಡ್ಡೆಯಲ್ಲಿ ಮೈದಳೆದ ವೀಕ್ಷಣಾ ಗೋಪುರ

ಚಂದ್ರಂಪಳ್ಳಿ ಜಲಾಶಯದ ಮಧ್ಯ ಭಾಗದಲ್ಲಿ ನಡುಗಡೆಯಿದ್ದು ಸುಮಾರು ಎರಡು ಎಕರೆ ವಿಸ್ತಾರವಾಗಿದೆ. ಇಲ್ಲಿ ವನ್ಯಜೀವಿ ಧಾಮದ ವತಿಯಿಂದ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಇದರಿಂದ ಜಲಾಶಯದ ಸೌಂದರ್ಯ ಆಸ್ವಾದಿಸಲು ಉಪಯುಕ್ತವಾಗಿದೆ. ಇಲ್ಲಿಗೆ ಬರಬೇಕಾದರೆ ಜಲಾಶಯದಲ್ಲಿ ದೋಣಿಯಲ್ಲಿ ಸಂಚರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.