ADVERTISEMENT

ಚಿಂಚೋಳಿ ತಾಲ್ಲೂಕು ಆಸ್ಪತ್ರೆಗೆ ಲಕ್ಷ್ಯ ಮಾನ್ಯತೆ

ಬಾನಂತಿ, ಮಗುವಿನ ಸಾವು ನಿಯಂತ್ರಣ 

ಜಗನ್ನಾಥ ಡಿ.ಶೇರಿಕಾರ
Published 23 ಡಿಸೆಂಬರ್ 2023, 5:42 IST
Last Updated 23 ಡಿಸೆಂಬರ್ 2023, 5:42 IST
ಚಿಂಚೋಳಿಯ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ಸುಸಜ್ಜಿತ ಹೆರಿಗೆ ಸೌಲಭ್ಯ ಕಲ್ಪಿಸಿರುವುದು
ಚಿಂಚೋಳಿಯ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ಸುಸಜ್ಜಿತ ಹೆರಿಗೆ ಸೌಲಭ್ಯ ಕಲ್ಪಿಸಿರುವುದು   

ಚಿಂಚೋಳಿ: ಇಲ್ಲಿನ ಚಂದಾಪುರದಲ್ಲಿರುವ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ಕೇಂದ್ರದ ಸರ್ಕಾರದ ‘ಲಕ್ಷ್ಯ’ ಮಾನ್ಯತೆ ಲಭಿಸಿದೆ.


ಉತ್ತಮ ಹೆರಿಗೆ ಸೇವೆ, ಸ್ವಚ್ಛತೆ, ತಾಯಿ ಮಗುವಿನ ಮರಣ ನಿಯಂತ್ರಣ, ಶಸ್ತ್ರಚಿಕಿತ್ಸೆಯ ಹೆರಿಗೆಯ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಕೈಕೊಂಡ ಕ್ರಮಕ್ಕೆ ಪ್ರಮಾಣಪತ್ರ ಲಭಿಸಿದೆ ಎಂದು ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ ತಿಳಿಸಿದರು.

ಲಕ್ಷ್ಯ ಪ್ರಮಾಣ ಪತ್ರ ಪಡೆಯಲು ನಾವು ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದೇವೆ. ಇದಕ್ಕಾಗಿ ನಾವು ಅರ್ಜಿ ಸಲ್ಲಿಸಿದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ತಂಡ, ರಾಜ್ಯ ಮಟ್ಟದ ತಂಡದ ಅಧಿಕಾರಿಗಳು ಬಂದು ಪರಿಶೀಲಿಸಿದ್ದರು. ಇದಾದ ನಂತರ ರಾಷ್ಟ್ರ ಮಟ್ಟದ ಕಮಿಟಿಯ ಇಬ್ಬರು ಸದಸ್ಯರು 2 ತಿಂಗಳ ಹಿಂದೆ ಬಂದು ಪರಿಶೀಲಿಸಿ ನೀಡಿದ ವರದಿ ಆಧರಿಸಿ ಪ್ರಮಾಣ ಪತ್ರ ಲಭಿಸಿದ್ದು, ಈಗಾಗಲೇ ಘೋಷಣೆಯಾಗಿದೆ. ಶೀಘ್ರವೇ ಪ್ರಮಾಣ ಪತ್ರ ಕೈಸೇರಲಿದೆ ಎಂದರು.

ADVERTISEMENT

ಲಕ್ಷ್ಯ ಪ್ರಮಾಣ ಪತ್ರ ಲಭಿಸಿದ್ದರಿಂದ ಆಸ್ಪತ್ರೆಯಲ್ಲಿ ನಿಯಮಗಳ ಪಾಲನೆಯ ನಿರಂತರವಾಗಿ ನಡೆಯುತ್ತದೆ. ಹೆರಿಗೆಗೆ ತಾಯಿ ಮತ್ತು ಮಗುವಿಗೆ ಉತ್ತಮ ಸೇವೆ ಸೌಲಭ್ಯ ದೊರೆಯಲಿದೆ. ಗರ್ಭಿಣಿಯರು, ಬಾಣಂತಿ ಮತ್ತು ಶಿಶುವಿನ ಆರೈಕೆ, ಚಿಕಿತ್ಸಾ ಸೇವೆ ಲಭಿಸಲಿವೆ.


ತಾಲ್ಲೂಕು ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆ ರೋಗಿಗೆ ಅಗತ್ಯವಿರುವ ಸೇವೆ ಎಲ್ಲಿ ಸಿಗುತ್ತದೆ ಎಂಬ ಫಲಕ ಗಮನ ಸೆಳೆಯುತ್ತದೆ. ಒಳಗೆ ಪ್ರವೇಶಿಸಿದರೆ ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್‌, ಆಪರೇಷನ್‌ ಥೀಯೇಟರ್, ಐಸಿಯು ಘಟಕ, ಒಪಿಡಿ, ಉಚಿತ ಔಷಧ ವಿತರಣೆ ಕೊಠಡಿ, ದಂತ ವೈದ್ಯಕೀಯ ತಪಾಸಣಾ ಕೊಠಡಿ, ರಕ್ತದ ಸಂಗ್ರಹ ಘಟಕ, ಡಯಾಲಿಸಿಸ್ ಘಟಕ, ಮಕ್ಕಳ ಚಿಕಿತ್ಸಾ ಘಟಕ, ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರ ಮತ್ತು ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತಹ ಸ್ವಚ್ಛತೆ ಗಮನ ಸೆಳೆಯುತ್ತದೆ.

ಸುಮಾರು 7 ಎಕರೆ ವಿಶಾಲವಾದ ಜಾಗದಲ್ಲಿ ತಲೆ ಎತ್ತಿದ ಆಸ್ಪತ್ರೆಯಲ್ಲಿ 4 ಎಕರೆ ಆಸ್ಪತ್ರೆ ಕಟ್ಟಡ ಹೊಂದಿದ್ದರೆ, ಆಸ್ಪತ್ರೆಯ ಮುಂದೆ ಖಾಲಿ ಜಾಗ, ಪೂರ್ವಕ್ಕೆ ಸಿಬ್ಬಂದಿಗಳ ವಸತಿಗೃಹಗಳು ಇವೆ. ಹೆಚ್ಚುವರಿಯಾಗಿ ತುರ್ತು ಚಿಕಿತ್ಸಾ ವಾರ್ಡ್‌ ಮತ್ತು ಪ್ರಯೋಗಾಲಯದ ವಾರ್ಡ ಕಟ್ಟಡ ನಿರ್ಮಾಣ ನಡೆಯುತ್ತಿದೆ.

ಚಿಂಚೋಳಿಯ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳ ಸಂಬಂಧಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿರುವುದು
ಚಿಂಚೋಳಿಯ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ಕಟ್ಟಡ
ಚಿಂಚೋಳಿಯ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ಒಳಗಡೆ ಒಂದು ನೋಟ
ಚಿಂಚೋಳಿಯ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿರುವ ಫಲಕಗಳು

100 ಹಾಸಿಗೆಗಳ ಆಸ್ಪತ್ರೆ ಎರಡು ಆಕ್ಸಿಜನ ಘಟಕಗಳು ಮಾಸಿಕ 70ಕ್ಕೂ ಹೆಚ್ಚು ಹೆರಿಗೆ

ಡಿಎಚ್‌ಒ ರಾಜಶೇಖರ ಮಾಲಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಸಿಬ್ಬಂದಿ ಒಂದು ತಂಡವಾಗಿ ಶ್ರಮಿಸಿದ್ದೇವೆ. ಪ್ರಮಾಣ ಪತ್ರ ಲಭಿಸಿದ್ದಕ್ಕೆ ಖುಷಿಯಾಗಿದೆ

-ಡಾ. ಸಂತೋಷ ಪಾಟೀಲ ಆಡಳಿತ ಮುಖ್ಯ ವೈದ್ಯಾಧಿಕಾರಿ ತಾಲ್ಲೂಕು ಆಸ್ಪತ್ರೆ

ತಾಲ್ಲೂಕು ಆಸ್ಪತ್ರೆಯಲ್ಲಿ ನಮಗೆ ಉತ್ತಮ ಚಿಕಿತ್ಸೆ ರೋಗಿಯ ಆರೈಕೆ ಚೆನ್ನಾಗಿದೆ. ಸ್ವಚ್ಛತೆ ಅತ್ಯುತ್ತಮವಾಗಿದೆ ಇಲ್ಲಿಗೆ ಬಂದರೆ ಖಾಸಗಿ ಆಸ್ಪತ್ರೆಯಲ್ಲಿರುವಂತೆ ಭಾಸವಾಗುತ್ತಿದೆ. ಗ್ರಾಮೀಣ ಭಾಗದ ಮಾದರಿ ಆಸ್ಪತ್ರೆಯಾಗಿದೆ

-ರೇವಣಸಿದ್ದಯ್ಯ ಮಠಪತಿ ಕನಕಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.