ADVERTISEMENT

ಚಿಂಚೋಳಿ | ‍ಪಹಣಿಯಲ್ಲಿ ವಕ್ಫ್‌ ಮಂಡಳಿಯ ಹೆಸರು: 35 ರೈತರಿಗೆ ನೋಟಿಸ್‌ ಜಾರಿ

ಜಗನ್ನಾಥ ಡಿ.ಶೇರಿಕಾರ
Published 30 ಅಕ್ಟೋಬರ್ 2024, 5:42 IST
Last Updated 30 ಅಕ್ಟೋಬರ್ 2024, 5:42 IST
ಅಬ್ದುಲ್ ನಬಿ ಯಾಸಿನ್‌ ಸಾಬ್
ಅಬ್ದುಲ್ ನಬಿ ಯಾಸಿನ್‌ ಸಾಬ್   

ಚಿಂಚೋಳಿ: ರೈತರ ಜಮೀನಿನ ಪಹಣಿಯಲ್ಲಿ ವಕ್ಪ್‌ ಮಂಡಳಿ ಎಂದು ನಮೂದಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ತಾಲ್ಲೂಕಿನ 35 ರೈತರಿಗೆ ಎರಡು ಬಾರಿ ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸದೆ ವಾಪಸ್ ಕಳುಹಿಸಲಾಗಿದೆ.

ಚಿಂಚೋಳಿ, ನೀಮಾ ಹೊಸಳ್ಳಿಯ ತಲಾ ಮೂವರು, ಗೌಡನಹಳ್ಳಿ, ಕೊಳ್ಳೂರು, ಬೆನಕೆಪಳ್ಳಿ, ಗಾರಂಪಳ್ಳಿಯ ತಲಾ ಇಬ್ಬರು, ಐನಾಪುರ, ಚಂದನಕೇರಾ, ಮರಪಳ್ಳಿ, ತುಮಕುಂಟಾ, ಸಾಲೇಬೀರನಹಳ್ಳಿ, ಚಿಮ್ಮನಚೋಡ, ಹೂವಿನಭಾವಿ, ರುಸ್ತಂಪುರ, ಕರಕಮುಕಲಿ, ದಸ್ತಾಪುರ, ಕೊರಡಂಪಳ್ಳಿ, ಜಟ್ಟೂರು, ನಿಡಗುಂದಾ, ಬೆನಕನಳ್ಳಿ ಹಾಗೂ ಭಂಟನಳ್ಳಿ ಗ್ರಾಮಗಳ ತಲಾ ಒಬ್ಬ ಹಾಗೂ ಇತರೆ ಮೂವರು ಸೇರಿ ಒಟ್ಟು 35 ರೈತರಿಗೆ ನೋಟಿಸ್ ನೀಡಲಾಗಿದೆ.

35 ರೈತರಿಗೆ ಸೇರಿದ 133.2 ಎಕರೆ ಜಮೀನು ವಕ್ಫ್‌ ಮಂಡಳಿಯ ದರ್ಗಾ, ಅಶುರಖಾನಾ ಮತ್ತು ಖಬರ್‌ಸ್ತಾನ್‌ ಆಸ್ತಿ ಎನ್ನಲಾಗುತ್ತಿದೆ. ರೈತರ ಹೆಸರಲ್ಲಿ ಪಹಣಿ ಹಾಗೂ ಕಾಲಂ 11ರಲ್ಲಿ ರಾಜ್ಯ ವಕ್ಫ್‌ ಮಂಡಳಿ ಹೆಸರು ನಮೂದು ಆಗಿದ್ದು, ಜಮೀನಿನ ವಿಸ್ತೀರ್ಣ ಕೂಡ ಉಲ್ಲೇಖವಾಗಿದೆ.

ADVERTISEMENT

‘ಅಜ್ಜ ಮುತ್ತಜ್ಜನ ಕಾಲದಿಂದಲೂ ಇದೇ ಜಮೀನಿನಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಉಪ ಜೀವನಕ್ಕೆ ಈ ಜಮೀನು ಬಿಟ್ಟರೆ ಬೇರೆ ಆಸ್ತಿಯಿಲ್ಲ. ಆದರೆ, ಈಗ ಏಕಾಏಕಿ ನಮ್ಮ ಹೊಲದ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು ನಮೂದಾಗಿರುವುದು ಹೇಗೆ’ಎಂದು ರೈತರು ಪ್ರಶ್ನಿಸಿದ್ದಾರೆ.

ನೋಟಿಸ್ ಕೊಟ್ಟಿಲ್ಲ: ‘1965ರಲ್ಲಿ ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಯ ಸಮೀಕ್ಷೆ ನಡೆಸಲಾಗಿದ್ದು, ಈ ಸಂಬಂಧ 1973-74ರಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. 1973-74ರ ನಂತರ ಯಾವುದೇ ಕೃಷಿ ಭೂಮಿಗೆ ನೋಟಿಸ್ ಹೊರಡಿಸಿಲ್ಲ’ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಹಜರತ್ ಅಲಿ ನದಾಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ವಕ್ಫ್ ಮಂಡಳಿಗೆ ಸೇರಿದ ದರ್ಗಾ, ಮಸೀದಿ, ಈದ್ಗಾ, ಸ್ಮಶಾನ ಸೇರಿದಂತೆ 2,865 ಸಂಸ್ಥೆಗಳಿಗೆ 5,814 ಆಸ್ತಿಗಳಿವೆ. 2,150ಕ್ಕೂ ಹೆಚ್ಚು ಸರ್ವೆಗಳಲ್ಲಿ 21,925 ಎಕರೆ ಆಸ್ತಿ ಹರಡಿಕೊಂಡಿದೆ. ಇದರಲ್ಲಿ ಸಾವಿರಾರು ಎಕರೆಷ್ಟು ಆಸ್ತಿ ವೈಯಕ್ತಿಕ ವ್ಯಕ್ತಿಗಳ ಹೆಸರಿನಲ್ಲಿ ದಾಖಲಾಗಿದೆ. 3,610 ಎಕರೆಯಷ್ಟು ಆಸ್ತಿ ಒತ್ತುವರಿ ಆಗಿದೆ ಎನ್ನುತ್ತಾರೆ ವಕ್ಫ್‌ ಅಧಿಕಾರಿಗಳು.

ಅಜ್ಜನ ಕಾಲದಿಂದ ಇದೇ ಜಮೀನು ಅವಲಂಬಿಸಿದ್ದೇನೆ. ಈಗ ಜಮೀನಿನ ಹಕ್ಕುಗಳ ಕಾಲಂನಲ್ಲಿ ವಕ್ಫ್‌ ಮಂಡಳಿ ಹೆಸರು ಬಂದಿದ್ದು ನಮ್ಮನ್ನು ಗಾಬರಿಗೊಳ್ಳುವಂತೆ ಮಾಡಿದೆ
ಅಬ್ದುಲ್ ನಬಿ ಯಾಸಿನ್‌ ಸಾಬ್ ಹೊಡೇಬೀರನಹಳ್ಳಿ ರೈತ
ತಾಲ್ಲೂಕಿನಲ್ಲಿ ದರ್ಗಾ ಖಬರ್‌ಸ್ತಾನ್‌ಗಳನ್ನು ಪಹಣಿಯಲ್ಲಿ ನಮೂದಿಸಿ ವಕ್ಫ್‌ ಮಂಡಳಿ ಎಂದು ಸೇರಿಸಲಾಗಿದೆ. ಪಹಣಿಯ ಕಾಲಂ 11ರಲ್ಲಿ ವಕ್ಫ್‌ ಎಂದು ನಮೂದಾದ ಜಮೀನಿನ ಮಾಲೀಕರಿಗೆ ದಾಖಲೆ ಸಲ್ಲಿಸುವಂತೆ ನೋಟಿಸ್‌ ನೀಡಿದ್ದೇವೆ
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್ ಚಿಂಚೋಳಿ

ಚಿತ್ತಾಪುರ: 247 ಮಂದಿಗೆ ನೋಟಿಸ್!

ಚಿತ್ತಾಪುರ: ಅವಿಭಜಿತ ಚಿತ್ತಾಪುರ ತಾಲ್ಲೂಕಿನಲ್ಲಿ (ಕಾಳಗಿ ಶಹಾಬಾದ್ ಸೇರಿ) 247ಕ್ಕೂ ಹೆಚ್ಚು ಮಂದಿಗೆ ನೋಟಿಸ್‌ ನೀಡಿದ್ದು ವಿಚಾರಣೆಗೆ ಹಾಜರಾಗಿದ್ದವರಿಗೆ ಸೂಕ್ತ ದಾಖಲಾತಿಗಳು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಳಗಿ ಮತ್ತು ಶಹಾಬಾದ್ ತಾಲ್ಲೂಕಿಗೆ ಸಂಬಂಧಪಟ್ಟವರಿಗೆ ಆಯಾ ತಾಲ್ಲೂಕು ಕಚೇರಿಯಲ್ಲಿ ದಾಖಲೆಗಳನ್ನು ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಎರಡೂ  ತಾಲ್ಲೂಕುಗಳ ತಹಶೀಲ್ದಾರ್‌ಗಳ ಗಮನಕ್ಕೂ ತರಲಾಗಿದೆ. ವಿಚಾರಣೆಗೆ ಹಾಜರಾದವರ ಪೈಕಿ ಕೆಲವರು ತಲೆಮಾರುಗಳಿಂದ ಉಳಿಮೆ ಮಾಡುತ್ತಿರುವುದಾಗಿ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎರಡನೇ ನೋಟಿಸ್ ನೀಡಿಲ್ಲ:

‘ವಕ್ಪ್ ಆಸ್ತಿ ಸಂಬಂಧ ವಕ್ಫ್ ಮಂಡಳಿ ನೀಡಿರುವ ಸರ್ವೆ ನಂಬರ್‌ಗಳ ರೈತರಿಗೆ ಮೊದಲ ಹಂತದ ನೋಟಿಸ್ ನೀಡಿ ವಿಚಾರಣೆ ಮಾಡಲಾಗಿದೆ. ಕೆಲವರು ದಾಖಲೆ ಸಲ್ಲಿಸಿದ್ದು ವಕ್ಫ್ ಆಸ್ತಿ ಎಂದು ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವರು ಖರೀದಿಸಿದ್ದಾರೆ. ಜಮೀನು ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಎರಡನೇ ನೋಟಿಸ್ ಇದುವರೆಗೂ ನೀಡಿಲ್ಲ’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ‘ಪ್ರಜಾವಾಣಿಗೆ’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.