ಚಿತ್ತಾಪುರ: ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಸರ್ವೆ ನಂ.152ರಲ್ಲಿನ 20 ಎಕರೆ 23 ಗುಂಟೆ ಜಮೀನಿನ ಪಹಣಿಯಲ್ಲಿ ಮೊಗಲಾ ಗ್ರಾಮದ ಒಂದೇ ಕುಟುಂಬದ ನಾಲ್ವರ ಹೆಸರನ್ನು ಸೇರಿಸಲಾಗಿದೆ. ಒಟ್ಟು 20 ಎಕರೆ 13 ಗುಂಟೆ ಜಮೀನನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
1955–56ನೇ ಸಾಲಿನಿಂದ 1981–82ನೇ ಸಾಲಿನವರೆಗೆ ಸರ್ವೆ ನಂ.152ರಲ್ಲಿ 20 ಎಕರೆ 23 ಗುಂಟೆ ಜಮೀನಿನ ಪಹಣಿಯಲ್ಲಿ ‘ಸರ್ಕಾರಿ ಖಾರೀಜ ಖಾತಾ’ ಎಂದು ನಮೂದಾಗಿದೆ. 1993–94ರಲ್ಲಿ 152/1 ಎಂದು ವಿಭಜನೆ ಮಾಡಿ 15 ಎಕರೆ 26 ಗುಂಟೆ ‘ಖಾರೀಜ ಖಾತಾ’ ಎಂದು ಪಹಣಿ ಬೇರೆ ಮಾಡಲಾಗಿದೆ. ಅದೇ ವರ್ಷ ಪಹಣಿ ಬರೆಯುವಾಗ ಯಾವುದೇ ಆದೇಶವಿಲ್ಲದೆ ಒಂದೇ ಕುಟುಂಬದ ಮೂವರ ಹೆಸರಿಗೆ ತಲಾ 4 ಎಕರೆ 35 ಗುಂಟೆ ಜಮೀನು ವರ್ಗಾವಣೆ ಮಾಡಿ ಪಹಣಿಯಲ್ಲಿ ಹೆಸರು ನಮೂದಿಸಲಾಗಿದೆ.
ಸರ್ವೆ ನಂ.152/2ರಲ್ಲಿ 5 ಎಕರೆ 28 ಗುಂಟೆ ಜಮೀನನ್ನು ವರ್ಗಾವಣೆ ಆದೇಶವಿಲ್ಲದೆ ಮೊಗಲಾ ಗ್ರಾಮದ ಅದೇ ಕುಟುಂಬದ ಮತ್ತೊಬ್ಬರ ಹೆಸರನ್ನು ಪಹಣಿಯಲ್ಲಿ ಅನಧಿಕೃತವಾಗಿ ನಮೂದಿಸಲಾಗಿದೆ.
ಲೋಕಾಯುಕ್ತಕ್ಕೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ 2015ರಲ್ಲಿ ಸರ್ಕಾರಿ ಭೂ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. 2015ರಲ್ಲಿ ಅಂದಿನ ತಹಶೀಲ್ದಾರ್ ಅಕ್ರಮ ಪತ್ತೆ ಹಚ್ಚಿ, ಪತ್ರದ ಮೂಲಕ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಕುರಿತು ‘ಪ್ರಜಾವಾಣಿ’ಗೆ ಅಧಿಕೃತ ಮಾಹಿತಿ ಲಭಿಸಿದೆ.
ಸೇಡಂ ಉಪ ವಿಭಾಗಾಧಿಕಾರಿಗೆ ವರದಿ ಸಲ್ಲಿಸಿದ ಅಂದಿನ ತಹಶೀಲ್ದಾರ್, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ಕಾಯ್ದೆ ಕಲಂ 192(ಎ), 192(ಬಿ) ಮತ್ತು 192(ಡಿ) ಪ್ರಕಾರ ಹಾಗೂ ಐಪಿಸಿ (ಈಗ ಬಿಎನ್ಎಸ್ಎಸ್ ಸಂಹಿತೆ) ಸಂಹಿತೆಯಡಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಹಾಗೂ ಈ ಜಮೀನಿನ ದಾಖಲೆಯಲ್ಲಿ ‘ಕರ್ನಾಟಕ ಸರ್ಕಾರ’ ಎಂದು ನಮೂದಿಸಲು ಆದೇಶ ಮಾಡುವಂತೆ 2015ರ ಮಾರ್ಚ್‌ನಲ್ಲಿ ಕೋರಿದ್ದಾರೆ.
2014 ಡಿಸೆಂಬರ್ 5ರಂದು ಲೋಕಾಯುಕ್ತರು ಪತ್ರ ಬರೆದು ಸ.ನಂ 152ರ ಸರ್ಕಾರಿ ಜಮೀನು ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ತನಿಖೆ ನಡೆಸಿ ತಹಶೀಲ್ದಾರ್ ಅವರು ಉಪವಿಭಾಗಾಧಿಕಾರಿಗೆ ವರದಿ ನೀಡಿದ್ದರು ಎಂದು ತಿಳಿದು ಬಂದಿದೆ.
ಕಂಪನಿಗೆ ಮಾರಾಟ: ಮೊಗಲಾ ಗ್ರಾಮದ ಒಂದೇ ಕುಟುಂಬದ ನಾಲ್ವರು ಇಟಗಾ ಗ್ರಾಮದಲ್ಲಿನ ಸರ್ಕಾರಿ ಸರ್ವೆ ನಂ.152/1ರಲ್ಲಿನ 12 ಎಕರೆ 6 ಗುಂಟೆ ಜಮೀನು ಮತ್ತು 152/2ರಲ್ಲಿನ 5 ಎಕರೆ 28 ಗುಂಟೆ ಸೇರಿ ಒಟ್ಟು ಒಟ್ಟು 17 ಎಕರೆ 34 ಗುಂಟೆ ಭೂಮಿಯನ್ನು ಓರಿಯೆಂಟ್ ಸಿಮೆಂಟ್ ಕಂಪನಿಗೆ ಮಾರಾಟ ಮಾಡಿರುವ ಬಗ್ಗೆ 2024–25ನೇ ಸಾಲಿನ ಪಹಣಿಯಲ್ಲಿ ಅಧಿಕೃತವಾಗಿ ನಮೂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.