ADVERTISEMENT

ಚಿತ್ತಾಪುರ: 10 ಗ್ರಾಮಗಳ 418 ಎಕರೆ ಜಮೀನು ವಕ್ಫ್ ಮಂಡಳಿ ಆಸ್ತಿ?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:41 IST
Last Updated 8 ನವೆಂಬರ್ 2024, 4:41 IST
<div class="paragraphs"><p>ಜಮೀನು (ಸಾಂಕೇತಿಕ ಚಿತ್ರ )</p></div>

ಜಮೀನು (ಸಾಂಕೇತಿಕ ಚಿತ್ರ )

   

ಚಿತ್ತಾಪುರ: ತಾಲ್ಲೂಕಿನ 11 ಗ್ರಾಮಗಳ ಒಟ್ಟು 418 ಎಕರೆ ಜಮೀನು ವಕ್ಫ್ ಮಂಡಳಿ ಆಸ್ತಿ ಎಂದು ಪಹಣಿ ಪತ್ರಿಕೆಯಲ್ಲಿ ನಮೂದಿಸಲು ಸಿದ್ಧತೆ ಮಾಡಿಕೊಂಡು 96 ರೈತರಿಗೆ ತಹಶೀಲ್ದಾರ್ ನೋಟಿಸ್ ನೀಡಿ, ಜಮೀನು ದಾಖಲೆಗಳ ಪರಿಶೀಲನೆಗೆ ಮೊದಲ ಹಂತದ ವಿಚಾರಣೆ ಮಾಡಿರುವ ದಾಖಲೆ ಪ್ರಜಾವಾಣಿಗೆ
ಲಭಿಸಿದೆ.

ತಾಲ್ಲೂಕಿನ ಭಾಗೋಡಿ ಗ್ರಾಮದ 78 ಎಕರೆ 21 ಗುಂಟೆ, ಯರಗಲ್ ಗ್ರಾಮದ 58 ಎಕರೆ 05 ಗುಂಟೆ, ದಿಗ್ಗಾಂವ ಗ್ರಾಮದ 82 ಎಕರೆ 32 ಗುಂಟೆ, ಹೊಸೂರು ಗ್ರಾಮದ 14 ಎಕರೆ 14 ಗುಂಟೆ, ಡೋಣಗಾಂವ ಗ್ರಾಮದ 9 ಎಕರೆ 16 ಗುಂಟೆ, ಬೊಮ್ಮನಳ್ಳಿ ಗ್ರಾಮದ 07 ಗುಂಟೆ, ಮೊಗಲಾ ಗ್ರಾಮದ 3 ಎಕರೆ 28 ಗುಂಟೆ, ಮರಗೋಳ ಗ್ರಾಮದ 24 ಎಕರೆ 07 ಗುಂಟೆ, ಕರದಾಳ ಗ್ರಾಮದ 14 ಎಕರೆ 22 ಗುಂಟೆ, ಮುಡಬೂಳ ಗ್ರಾಮದ 35 ಎಕರೆ 37 ಗುಂಟೆ, ಕೆ.ನಾಗಾಂವ ಗ್ರಾಮದ 96 ಎಕರೆ 15 ಗುಂಟೆ ಜಮೀನು ಸಂಬಂಧ ರೈತರಿಗೆ ಮೊದಲ ಹಂತದ ವಿಚಾರಣೆಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗಿದೆ.

ADVERTISEMENT

ನೋಟಿಸ್ ಪಡೆದ ಕೆಲವು ರೈತರು ಜಮೀನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಅಧಿಕೃತವಾಗಿ ನೋಂದಣಿಯಾದ ನಂತರ ಜಮೀನು ಹಕ್ಕು ವರ್ಗಾವಣೆಯಾಗಿದೆ. ಹಗಲಿರುಳು ಕಷ್ಟಪಟ್ಟು ದುಡಿದು, ಹಣ ಸಂಗ್ರಹಿಸಿ ಶ್ರಮದ ಹಣ ಕೊಟ್ಟು ಖರೀದಿಸಿದ ಜಮೀನು ಈಗ ಏಕಾಏಕಿ ಪಹಣಿ ಪತ್ರಿಕೆಯಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಿಸಿದರೆ ನಮ್ಮ ಗತಿಯೇನು ಎಂದು ರೈತರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ.

ಜಮೀನಿನ ಹಳೆ ದಾಖಲೆಗಳು ಪಡೆಯಲು ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ. ರಾಜ್ಯದಲ್ಲಿ ವಕ್ಫ್ ಮಂಡಳಿ ಆಸ್ತಿ ಕುರಿತು ಉಂಟಾಗಿರುವ ಗೊಂದಲ, ಸಮಸ್ಯೆ ಅವಲೋಕಿಸಿದ ವಕ್ಫ್ ಸಚಿವ ಜಮೀರ್ ಅಹಮದ್ ಅವರು ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲಾಗುವುದು. ರೈತರ ಜಮೀನು ಬೇಕಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಈಗಾಗಲೇ ಅನೇಕ ರೈತರಿಗೆ ಯಾವುದೇ ಮಾಹಿತಿ ನೀಡದೆ, ನೋಟಿಸ್ ನೀಡದೆ ಪಹಣಿ ಪತ್ರಿಕೆಯಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಿಸಿದ್ದಾರೆ. ವಿಚಾರಣೆಗಿಂತ ಮುಂಚೆಯೆ ಅನೇಕ ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ನಮೂದಿಸಿರುವ ವಕ್ಫ್ ಮಂಡಳಿ ಹೆಸರು ತೆಗೆದುಹಾಕಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

‘ದಾಖಲೆ ಸಲ್ಲಿಸದಿದ್ದರೆ ‘ವಕ್ಫ್’ ನಮೂದಿಗೆ ಕ್ರಮ’

ತಹಶೀಲ್ದಾರ್‌ ನೋಟಿಸ್ ನೀಡಿದ್ದರಿಂದ ರೈತರು ತೀವ್ರ ಆತಂಕ, ಜಮೀನು ಕಳೆದುಕೊಳ್ಳುವ ಭಯದಿಂದ ಕೈಯಲ್ಲಿ ನೋಟಿಸ್ ಹಿಡಿದುಕೊಂಡು ವಿಚಾರಣೆ ಆಗಮಿಸಿದ್ದಾರೆ. ಮೊದಲ ಹಂತದ ವಿಚಾರಣೆಯಲ್ಲಿ ‘ನಿಮ್ಮ ಜಮೀನಿನ ಹಳೆ ದಾಖಲೆ ಅಂದರೆ ವಕ್ಫ್ ಆಸ್ತಿ ಕುರಿತು 1974 ರಲ್ಲಿ ಪ್ರಕಟಿಸಿದ ಅಧಿಸೂಚನೆಗಿಂತ ಮುಂಚಿನ ಜಮೀನು ಮೂಲ ದಾಖಲೆಗಳು ಸಲ್ಲಿಸಬೇಕು. ಪರಿಶೀಲನೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ದಾಖಲೆ ಸಲ್ಲಿಸದಿದ್ದರೆ ಜಮೀನು ಪಹಣಿ ಪತ್ರಿಕೆಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರೈತರಿಗೆ ತಿಳಿಸಿ ಕಳುಹಿಸಿದ್ದಾರೆ.

ವಕ್ಫ್ ಸಚಿವರು ಮತ್ತು ಮೇಲಧಿಕಾರಿಗಳ ಆದೇಶದಂತೆ ರೈತರಿಗೆ ನೋಟಿಸ್ ನೀಡಿ ವಿಚಾರಣೆ ಕೈಗೊಳ್ಳಲಾಗಿತ್ತು. ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ, ವಕ್ಫ್ ಸಚಿವರು ಹೇಳಿದ್ದರಿಂದ ನೋಟಿಸ್ ನೀಡುವ, ವಿಚಾರಣೆ ಮಾಡುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ
–ನಾಗಯ್ಯ ಹಿರೇಮಠ, ತಹಶೀಲ್ದಾರ್, ಚಿತ್ತಾಪುರ
ಅನೇಕ ರೈತರು ಜಮೀನು ಖರೀದಿಸಿ ತಮ್ಮ ಹೆಸರಿಗೆ ಹಕ್ಕು ಬದಲಾಯಿಸಿಕೊಂಡ ನಂತರ ನೋಟಿಸ್‌ ನೀಡದೆ, ಯಾವುದೇ ರೀತಿಯ ಮಾಹಿತಿ ನೀಡದೆ ಪಹಣಿ ಪತ್ರಿಕೆಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಿಸಿದ್ದು ನಿಯಮ ಬಾಹಿರ
–ಮಲ್ಲಿಕಾರ್ಜುನ ಎಮ್ಮೆನೊರ್, ಬಿಜೆಪಿ ಮುಖಂಡ
ಹಳೆ ಪಹಣಿ ಪತ್ರಿಕೆಗಳನ್ನು ನೋಡಿ 2014ರಲ್ಲಿ ಮೂರೂವರೆ ಎಕರೆ ಜಮೀನು ಖರೀದಿಸಿದ್ದೇವೆ. ಆಗ ವಕ್ಫ್ ಮಂಡಳಿ ಹೆಸರು ಇರಲಿಲ್ಲ. ಈಗ ವಕ್ಫ್ ಮಂಡಳಿ ಆಸ್ತಿ ಎಂದು ನಮಗೆ ನೋಟಿಸ್ ನೀಡಿದ್ದಾರೆ. ಸರ್ಕಾರ ನಮಗೆ ನ್ಯಾಯ ಒದಗಿಸಬೇಕು
–ಕಾಶಪ್ಪ ಹುಳಗೋಳ, ಕೆ.ನಾಗಾಂವ ಇಟಗಾ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.